ಬೇಟೆ ಮಾಡುವಾಗ ಗುಂಪೊಂದು ಮಾಡಿದ ಎಡವಟ್ಟಿನಿಂದ ತನ್ನ ಸ್ನೇಹಿತನನ್ನೇ ಕಳೆದುಕೊಂಡಿದೆ. ಕಾಡು ಪ್ರಾಣಿ ಎಂದು ಭಾವಿಸಿ ತನ್ನ ಸ್ನೇಹಿತನಿಗೆ ಗುಂಪೊಂದು ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಕಳೆದ ತಿಂಗಳೇ ನಡೆದಿದ್ದು ಆದರೆ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇನ್ನು ಈ ಗುಂಡಿನ ದಾಳಿಯಿಂದ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿದ್ದೀರಾ? ಚಾಮರಾಜನಗರ | ಕಾಡುಹಂದಿ ಬೇಟೆಗೆ ಹೊಂಚು ಹಾಕಿದ್ದ ಮೂವರ ಬಂಧನ
ಈ ಬಗ್ಗೆ ಮಾಹಿತಿ ನೀಡಿರುವ ಪಾಲ್ಘಾರ್ ಪೊಲೀಸ್ ಠಾಣೆಯ ಎಸ್‌ಡಿಪಿಒ ಅಭಿಜಿತ್ ಧರಶಿವಕರ್, “ಕಾಡು ಪ್ರಾಣಿ ಬೇಟೆಯಾಡಲೆಂದು ಗುಂಪು ಕಾಡಿಗೆ ಹೋಗಿತ್ತು. ಈ ವೇಳೆ ಗುಂಪಿನಲ್ಲಿದ್ದ ಕೆಲವು ಮಂದಿ ಪ್ರತ್ಯೇಕಗೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ವ್ಯಕ್ತಿಯೊಬ್ಬರು ಇನ್ನೋರ್ವ ವ್ಯಕ್ತಿಯನ್ನು ನೋಡಿ ಕಾಡು ಹಂದಿ ಎಂದು ಭಾವಿಸಿ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಇಬ್ಬರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮತ್ತೋರ್ವರಿಗೆ ಗಂಭೀರ ಗಾಯವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ತಪ್ಪಿ ಆದ ಈ ಅನಾಹುತದಿಂದಾಗಿ ಆತಂಕಕ್ಕೆ ಒಳಗಾದ ಗುಂಪು ಮೃತದೇಹವನ್ನು ಪೊದೆಯಲ್ಲಿ ಹುದುಗಿಸಿದ್ದರು. ಭಯಗೊಂಡು ಈ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸುಳಿವು ಮೇರೆಗೆ ತನಿಖೆಯನ್ನು ನಡೆಸಿದಾಗ ಆರು ಜನರು ಈ ಅಪರಾಧದಲ್ಲಿ ಭಾಗಿಯಾಗಿರುವ ಸಾಧ್ಯತೆ ಕಂಡುಬಂದಿದೆ. ಅವರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಚಿತ್ರದುರ್ಗ | ನಕ್ಷತ್ರ ಆಮೆಗಳ ಬೇಟೆಯಾಡುತ್ತಿದ್ದ ಆರೋಪಿಗಳ ಬಂಧನ
“ಬುಧವಾರ ಶೋಧ ಕಾರ್ಯಾಚರಣೆ ನಡೆಸಿದಾಗ ಪೊಲೀಸರಿಗೆ ಕೊಳೆತ ಶ ಪತ್ತೆಯಾಗಿದೆ. ಸಾವಿಗೆ ದೃಢವಾದ ಕಾರಣವನ್ನು ಪತ್ತೆ ಹಚ್ಚಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಗಾಯಗೊಂಡಿದ್ದ ವ್ಯಕ್ತಿಯೂ ಕೂಡಾ ಸಾವನ್ನಪ್ಪಿದ್ದು ಗ್ರಾಮಸ್ಥರು ಯಾರಿಗೂ ಮಾಹಿತಿ ನೀಡದೆ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
