ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್) ನಾಡಿಗೆ ಬೆಳಕು ನೀಡುವ ‘ಶಕ್ತಿ’ಕೇಂದ್ರದ ಬಳಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಬೇಕು. ಇದರಿಂದ ಇಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸಂಖ್ಯೆಯ ಕೂಲಿ ಕಾರ್ಮಿಕರಿಗೂ ಕೂಡಾ ಕಡಿಮೆ ಖರ್ಚಿನಲ್ಲಿ ಉಪಹಾರ ಸೇವಿಸಲು ಅನುಕೂಲವಾಗುತ್ತದೆ ಎಂಬುದು ಕಾರ್ಮಿಕರ ಬೇಡಿಕೆಯಾಗಿದೆ.
ರಾಯಚೂರು ಜಿಲ್ಲೆಯ ಶಕ್ತಿನಗರ ಎರಡೂವರೆ ದಶಕಗಳಿಂದ ಇಲ್ಲಿನ ಏಳು ಘಟಕಗಳು ವಿದ್ಯುತ್ ಉತ್ಪಾದನೆ ಮಾಡಿ ಇಡೀ ನಾಡಿಗೆ ವಿದ್ಯುತ್ ಪೂರೈಸುತ್ತ ಬಂದಿದೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಹೋಗುತ್ತಾರೆ. ಮೂರು ರೀತಿಯ ಪಾಳಿಯ ಪ್ರಕಾರ ಕೆಲಸ ಮಾಡುತ್ತಾರೆ. ಬೆಳಿಗ್ಗೆ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಶಾಖೋತ್ಪನ್ನ ಕೇಂದ್ರದ ಕ್ಯಾಂಟಿನ್‌ನಲ್ಲಿಯೇ ತಿನ್ನಬೇಕಾದ ಅನಿವಾರ್ಯತೆ ಎದುರಾಗಿದ್ದು, ಬಹುಪಾಲು ಸಂಬಳವನ್ನು ಊಟಕ್ಕೇ ಖರ್ಚು ಮಾಡುವಂತಾಗಿದೆ. ಹೊರಗಿನ ಊಟ ತಿನ್ನಬೇಕೆಂದರೆ ಮೂರು ಹೊತ್ತಿಗೆ, ಕನಿಷ್ಠ ₹150 ಖರ್ಚಾಗುತ್ತದೆ. ಇದರ ಬದಲಾಗಿ ಶಾಖೋತ್ಪನ್ನ ಕೇಂದ್ರ ಬಳಿಯೇ ಒಂದು ಇಂದಿರಾ ಕ್ಯಾಂಟಿನ್ ನಿರ್ಮಾಣವಾದರೆ ಕಡಿಮೆ ಬೆಲೆಗೆ ಊಟ, ತಿಂಡಿ ತಿಂದು ನಮ್ಮ ಪಾಡಿಗೆ ನಾವು ಕೆಲಸಕ್ಕೆ ತೆರಳುತ್ತೇವೆ ಎನ್ನುತ್ತಾರೆ ಅಲ್ಲಿಯ ಕಾರ್ಮಿಕರು.

“ಕೆಲವು ಕಾರ್ಮಿಕರು ಬೇರೆ ಬೇರೆ ಹಳ್ಳಿಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಬರುತ್ತಾರೆ. ಕೆಲವರು ಮನೆಯಿಂದ ಊಟ ತಿಂಡಿ ತರುತ್ತಾರೆ. ಇನ್ನೂ ಕೆಲವರು ಹೊರಗಡೆ ಹೋಟೆಲ್‌ಗಳಲ್ಲಿ ಅಧಿಕ ಬೆಲೆ ತೆತ್ತು ಊಟ ಸೇವಿಸುತ್ತಾರೆ. ಪ್ರತಿದಿನ ಹೋಟೆಲ್ ಊಟ ಸೇವಿಸುತ್ತಲೇ ಹೋದರೆ ದುಡಿದ ದುಡ್ಡೆಲ್ಲಾ ಊಟಕ್ಕೇ ನೀಡಬೇಕಾಗುತ್ತದೆ. ಹಾಗಾಗಿ ಒಂದು ಇಂದಿರಾ ಕ್ಯಾಂಟಿನ್ ನಿರ್ಮಾಣವಾದರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ” ಎಂಬುದು ಕಾರ್ಮಿಕರ ಬೇಡಿಕೆಯಾಗಿದೆ.

ಕೆಪಿಸಿಎಲ್ ಕಾರ್ಮಿಕ ರಂಗಾರೆಡ್ಡಿ ಮಾತನಾಡಿ, “ಶಕ್ತಿನಗರ ಮುಖ್ಯ ಕಾರ್ಯಾಲಯದ ಬಳಿ ಇಂದಿರಾ ಕ್ಯಾಂಟಿನ್ ಕಟ್ಟಡ ನಿರ್ಮಾಣವಾದರೆ ನಿತ್ಯವೂ ಕೆಲಸಕ್ಕೆ ಬರುವ ಸಾವಿರಾರು ಸಂಖ್ಯೆಯ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ವಿದ್ಯುತ್ ಕೇಂದ್ರದಲ್ಲಿ 1,600 ಮಂದಿ ಗುತ್ತಿಗೆ ಕಾರ್ಮಿಕರು, 2,000 ಮಂದಿ ಕಾಯಂ ಕಾರ್ಮಿಕರು ಕೆಲಸ ಮಾಡುತ್ತಾರೆ. ಕೇಂದ್ರದ ಒಳಗಿನ ಕ್ಯಾಂಟಿನ್‌ನಲ್ಲಿ ಊಟ ಸೇವಿಸಿದರೆ ₹50 ಖರ್ಚಾಗುತ್ತದೆ. ಹೊರಗಡೆ ತಿಂದರೆ ₹100 ಖರ್ಚಾಗುತ್ತದೆ. ಇಂದಿರಾ ಕ್ಯಾಂಟಿನ್ ನಿರ್ಮಾಣವಾದರೆ ಸಾವಿರಾರು ಸಂಖ್ಯೆಯ ಕಾರ್ಮಿಕರ ಹೊಟ್ಟೆ ತುಂಬಿಸುವಂತಹ ಮಹತ್ಕಾರ್ಯ ನಡೆದರೆ, ಬಡ ಕಾರ್ಮಿಕರಿಗೆ ಅನುಕೂಲವಾಗುತ್ತದೆ” ಎಂದರು.

“ರಾಯಚೂರು ನಗರದಿಂದ ಹೈದರಾಬಾದ್ ರಾಜ್ಯಕ್ಕೆ ಮುಖ್ಯ ರಸ್ತೆಯಾಗಿ ಶಕ್ತಿನಗರ ಮುಖ್ಯ ಕೇಂದ್ರವಾಗಿದೆ. ಸಾಕಷ್ಟು ಲಾರಿಗಳು ಸೇರಿದಂತೆ ಇತರೆ ವಾಹನಗಳೂ ಕೂಡಾ ಓಡಾಡುತ್ತವೆ. ಶಕ್ತಿನಗರದ ಸುತ್ತಮುತ್ತ ʼಹತ್ತಿ ಜಿನ್ನಿಂಗ್ ಮಿಲ್‌ಗಳು ಇವೆ. ರೈತರೂ ಕೂಡ ನೂರಾರು ಸಂಖ್ಯೆಯ ಮಿಲ್‌ಗಳಿವೆ. ಇಲ್ಲಿಗೆ ಹತ್ತಿಯನ್ನು ತರುವ ರೈತರು ಸೇರಿದಂತೆ ವಾಹನ ಚಾಲಕರೂ ಕೂಡಾ ರಾತ್ರಿಯಿಡಿ ಕಾಲ ಕಳೆಯುತ್ತಾರೆ. ಇಂದಿರಾ ಕ್ಯಾಂಟಿನ್ ಇದ್ದರೆ ಇವರಿಗೂ ಊಟ-ತಿಂಡಿಗೆ ಉಪಯುಕ್ತವಾಗುತ್ತದೆ” ಎಂದು ತಿಳಿಸಿದರು.

ರೈತ ಮುಖಂಡ ಸಾಜಿದ್ ಮಾತನಾಡಿ, “ಶಕ್ತಿನಗರ ಕೇಂದ್ರವು ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಹೆಸರುವಾಸಿಯಾಗಿದೆ. ಜತೆಗೆ ಇಲ್ಲಿನ ಸುತ್ತಮುತ್ತ ಹತ್ತಿ ಜಿನ್ನಿಂಗ್ ಕೇಂದ್ರಗಳು ಹೆಚ್ಚಾಗಿವೆ. ರೈತರೂ ಕೂಡ ಫ್ಯಾಕ್ಟರಿಗೆ ಮಾಲು ತಂದಿರುತ್ತಾರೆ. ಜನಜಂಗುಳಿಯ ಕಾರಣಕ್ಕೆ ಇಡೀ ದಿನವೆಲ್ಲಾ ಇಲ್ಲಿಯೇ ಕಾಲ ಕಳೆಯುತ್ತಾರೆ. ಹಾಗಾಗಿ ಈ ಭಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣವಾದರೆ ತುಂಬಾ ಅನುಕೂಲವಾಗುತ್ತದೆ” ಎಂದರು.

ಸುತ್ತಮುತ್ತ 60 ಹತ್ತಿ ಕಾರ್ಖಾನೆಗಳು, 30 ರೈಸ್ ಮಿಲ್, 10 ದಾಲ್ ಮಿಲ್, 40 ಉಗ್ರಾಣ, 3 ರಬ್ಬರ್ ಕೆಮಿಕಲ್ ಕಾರ್ಖಾನೆಗಳು ಸೇರಿದಂತೆ ಇತರ ಸಣ್ಣ ಕಾರ್ಖಾನೆಳಿವೆ. ನಿತ್ಯವೂ ಸಾವಿರಾರು ಕಾರ್ಮಿಕರು ಓಡಾಡುತ್ತಾರೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ, ಕೂಲಿಕಾರ್ಮಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಊಟ, ಉಪಹಾರ ದೊರೆಯಲೆಂದು ಇಂದಿರಾ ಕ್ಯಾಂಟಿನ್ ನಿರ್ಮಾಣದ ಉದ್ದೇಶವಾಗಿದೆ. ಆದರೆ, ಸಾವಿರಾರು ಕಾರ್ಮಿಕರು ದುಡಿಯುವ ಇಂತಹ ಸ್ಥಳಗಳಲ್ಲಿ ಒಂದಾದರೂ ಇಂದಿರಾ ಕ್ಯಾಂಟಿನ್ ಇಲ್ಲದಿರುವುದು ಶೋಚನೀಯ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೆ.8ರಂದು ʼಪಶುಪಾಲಕ ಸಮುದಾಯಗಳ ಕಥನಗಳು: ಮುಂದಿನ ನಡೆಗಳುʼ ವಿಷಯದ ಕುರಿತು ದುಂಡುಮೇಜಿನ ಸಭೆ
“ಬಡವರಿಗೆ, ಕಾರ್ಮಿಕರಿಗೆ, ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಿರ್ಮಾಣವಾಗಿರುವ ಇಂದಿರಾ ಕ್ಯಾಂಟಿನ್ ಈ ಭಾಗಕ್ಕೂ ವ್ಯಾಪಿಸಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತದೆಯೋ, ಕಾರ್ಮಿಕರಿಗೆ ಅನುಕೂಲ ಮಾಡುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ” ಎಂಬುದು ಕಾರ್ಮಿಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್
Diploma electrical and electronics engineering completed