ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೆ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯ ಸರ್ಕಾರದ ಈ ನೀತಿಯನ್ನು ಎಐಕೆಕೆಎಂಎಸ್ ಖಂಡಿಸುತ್ತದೆ ಎಂದು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಬಿ ತಿಳಿಸಿದ್ದಾರೆ.
ಕಲಬುರಗಿ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “ದೆಹಲಿಯ ಗಡಿಭಾಗದಲ್ಲಿ ಒಂದು ವರ್ಷಗಳ ಕಾಲ ಚಳಿ, ಮಳೆ ಬಿಸಿಲೆನ್ನದೆ ಲಕ್ಷಾಂತರ ರೈತರು ಹೋರಾಡಿದ, 750 ಕ್ಕೂ ಹೆಚ್ಚು ರೈತರು ಜೀವ ತೆತ್ತು ಹೋರಾಡಿದ ಫಲವಾಗಿ ಕೇಂದ್ರ ಬಿ ಜೆ ಪಿ ಸರ್ಕಾರ ತಲೆಬಾಗಿ ವಾಪಸ್ ತೆಗೆದುಕೊಂಡ ಮೂರು ಕರಾಳ ಕೃಷಿ ಕಾಯ್ದೆಗಳನ್ನೇ ಆಧರಿಸಿ ಆದಾಯ ಹೆಚ್ಚಿಸಲು ಶಿಫಾರಸು ಮಾಡಬೇಕೆಂದು ಆದೇಶಿಸಿರುವ ರಾಜ್ಯ ಸರ್ಕಾರದ ನೀತಿಯನ್ನು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್) ಉಗ್ರವಾಗಿ ಖಂಡಿಸುತ್ತದೆ” ಎಂದು ತಿಳಿಸಿದರು.
“ಇದು ಹುತಾತ್ಮ ರೈತರಿಗೆ ಮಾಡಿರುವ ಅಪಮಾನ. ಕಾಂಗ್ರೆಸ್ ಸರ್ಕಾರದ ವಚನಭ್ರಷ್ಟತೆ ಮತ್ತು ಬೆಲೆ ಕುಸಿತದಿಂದ ಕುಸಿದಿರುವ ರೈತರಿಗೆ ಮಾಡಿದ ಅನ್ಯಾಯ. ಮೂರು ಕರಾಳ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ಮಾಡಿದ್ದೆ. ಅವುಗಳು ರೈತರ ಹಿತ ಕಾಪಾಡುವುದಿಲ್ಲವೆಂದು. ಜೊತೆಗೆ ಕಾರ್ಪೊರೇಟ್ ದೈತ್ಯರು ಕೃಷಿ ಕ್ಷೇತ್ರಕ್ಕೆ ಬರುವುದರಿಂದ ರೈತರಿಗೆ ಎಪಿಎಂಸಿಯ ರಕ್ಷಣೆಯು ಇಲ್ಲದೆ ಕಡಿಮೆ ಬೆಲೆಗೆ ತಮ್ಮ ಬೆಳೆಯನ್ನು ಮಾರುವ ಸ್ಥಿತಿ ಬರುತ್ತದೆ. ಹೀಗಿರುವಾಗ ಅದೇ ಕಾಯ್ದೆಗಳನ್ನು ಆಧರಿಸಿ ಆದಾಯ ಹೆಚ್ಚಿಸಲು ಹೇಗೆ ಸಾಧ್ಯ? ದೆಹಲಿ ಚಳುವಳಿಯಲ್ಲಿ ರೈತರು ಎಲ್ಲಾ ಬೆಳೆಗಳಿಗೂ ಕಾನೂನು ಬದ್ಧವಾದ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಾಗ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿದ ಮೇಲೆಯೇ ಚಳುವಳಿಯನ್ನು ನಿಲ್ಲಿಸಿದ್ದು. ಆದರೆ ಬಿಜೆಪಿ ಸರ್ಕಾರ ವಚನಭ್ರಷ್ಟವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧ ಮಾಡಲಿಲ್ಲ” ಎಂದು ಆರೋಪಿಸಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಸಮಯದಲ್ಲಿ ರೈತಪರ ಸೋಗು ಹಾಕಿಕೊಂಡು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತೇನೆಂದು ಪ್ರಣಾಳಿಕೆಯಲ್ಲಿ ಘೋಷಿಸಿ ಮತಯಾಚನೆ ಮಾಡಿತು. ಆದರೆ ಅಧಿಕಾರಕ್ಕೆ ಬಂದಮೇಲೆ ತನ್ನ ಮೂಲ ಗುಣವಾದ ಕಾರ್ಪೊರೇಟ್ ಪರ ನೀತಿಯನ್ನು, ಬಿಜೆಪಿ ಸರ್ಕಾರ ಜಾರಿಗೆ ತಂದ ನೀತಿಯನ್ನು ಅನುಸರಿಸುತ್ತಿದೆ, ರೈತರಿಗೆ ಕೊಟ್ಟ ಮಾತು ತಪ್ಪಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ನಾಯಕರು ಕೋಮುವಾದದ ಪರವೋ, ವಿರುದ್ಧವೋ?
“ರೈತರು ಬೆಳೆದ ಎಲ್ಲ ಬೆಳೆಗಳ ಬೆಲೆಯೂ ತೀವ್ರವಾಗಿ ಕುಸಿದು ಅಸಹಾಯಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಕಡೆ ಮುಖ ಹಾಕಿ ಕುಳಿತಿರುವಾಗ ಕಾಂಗ್ರೆಸ್ ಸರ್ಕಾರ ಅವರನ್ನು ಸಾವಿನ ಕೂಪಕ್ಕೆ ತಳ್ಳುವ ಆದೇಶವನ್ನು ಹೊರಡಿಸಿದೆ. ಸರ್ಕಾರ ಖರೀದಿ ಕೇಂದ್ರಗಳಲ್ಲಿ ರೈತರ ಬೆಳೆಯನ್ನು ಸ್ವಾಮಿನಾಥನ್ ವರದಿಯಂತೆ ಸಿ2+50% ಸೂತ್ರದಲ್ಲಿ ಖರೀದಿ ಮಾಡಿದ್ದರೆ ರೈತರ ಆದಾಯ ನಿಜಕ್ಕೂ ಹೆಚ್ಚುತ್ತಿತ್ತು. ಆದರೆ ರೈತರಿಗೆ ಆದಾಯ ಮರೀಚಿಕೆಯಾಗುವಂತೆ ಮಾಡುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಆದ್ದರಿಂದ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡು, ರೈತರಿಗೆ ನಿಜವಾದ ಆದಾಯ ತರುವಂತಹ ಸಂಪೂರ್ಣ ಸರ್ಕಾರಿ ವ್ಯಾಪಾರ ಮತ್ತು ಸಿ2+50% ಸೂತ್ರದಲ್ಲಿ ಕನಿಷ್ಠ ಬೆಂಬಲಿಯೊಂದಿಗೆ ಖರೀದಿ” ಮಾಡಬೇಕೆಂದು ಎಐಕೆಕೆಎಂಎಸ್ ಒತ್ತಾಯಿಸುತ್ತದೆ.