ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ವಿವಾದ ಮತ್ತು ಚರ್ಚೆಗಳೊಂದಿಗೆ ಸುದ್ದಿಯಲ್ಲಿರುವುದು ಸಚಿವ ಎಂ.ಬಿ ಪಾಟೀಲ್. ಮುಖ್ಯಮಂತ್ರಿ ಆಯ್ಕೆ ವಿಚಾರ ಬಗೆಹರಿಯುತ್ತಿದ್ದ ಹೊತ್ತಿನಲ್ಲಿ ‘ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ’ ಎಂದು ಹೇಳಿ, ಚರ್ಚೆಗೆ ಗ್ರಾಸವಾಗಿದ್ದರು. ಬಳಿಕ, ಅದನ್ನೆಲ್ಲ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತೇಪೆ ಹಾಕಿದ್ದರು. ಇದೀಗ, ಕಾಂಗ್ರೆಸ್ ಸರ್ಕಾರವನ್ನು ‘ಹಿಟ್ಲರ್ ಸರ್ಕಾರ’ ಎಂದಿದ್ದ ಚಕ್ರವರ್ತಿ ಸೂಲಿಬೆಲೆಯನ್ನು ಜೈಲಿಗೆ ಹಾಕ್ತೀವಿ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ. ಇದು ಕಾಂಗ್ರೆಸ್ ಕೂಡ ಬಿಜೆಪಿಯಂತೆಯೇ ವಿರೋಧಿಗಳನ್ನು ಹತ್ತಿಕ್ಕಲು ಮುಂದಾಗಿದೆಯೇ ಎಂಬ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ತಮ್ಮ ದುಡುಕು ಸ್ವಭಾವಕ್ಕೆ ಹೆಸರಾದವರು ಎಂ ಬಿ ಪಾಟೀಲ್.
ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಎಂ.ಬಿ ಪಾಟೀಲ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಸಚಿವರಾಗಿದ್ದಾರೆ. ಪಾಟೀಲ್ ಹುಟ್ಟಿದ್ದು ವಿಜಯಪುರ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ. ಜಿಲ್ಲೆಯಲ್ಲಿಯೇ ತಮ್ಮ ತಂದೆಯೊಂದಿಗೆ ರಾಜಕೀಯವನ್ನೂ ಆರಂಭಿಸಿದ ಅವರು, ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯರಾಗಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಅಂದಹಾಗೆ, ಬೀದರ್ ಜಿಲ್ಲೆಯ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರಂತೆಯೇ ಎಂ.ಬಿ ಪಾಟೀಲ್ ಕೂಡ ‘ಅಪ್ಪ ನೆಟ್ಟ ಆಲದಮರ’ದಲ್ಲಿ ರೆಂಬೆ-ಕೊಂಬೆಯಾಗಿ ಬೆಳೆದು ಬೇರು ಬಿಟ್ಟವರು. ಎಂ.ಬಿ ಪಾಟೀಲ್ ಅವರ ತಂದೆ ಬಿ.ಎಂ ಪಾಟೀಲ್ ಕೂಡ ಪ್ರಭಾವ ಕಾಂಗ್ರೆಸ್ ಮುಖಂಡರಾಗಿದ್ದರು. ಬಬಲೇಶ್ವರ ಕ್ಷೇತ್ರವು 2008ಕ್ಕೂ ಮುನ್ನ ತಿಕೋಟ ವಿಧಾನಸಭಾ ಕ್ಷೇತ್ರವಾಗಿತ್ತು. ಆ ಕ್ಷೇತ್ರದಲ್ಲಿ 1962ರಲ್ಲಿಯೇ ಬಿ.ಎಂ.ಪಾಟೀಲ್ ಶಾಸಕರಾಗಿದ್ದರು. 1983, 1985 ಮತ್ತು 1989ರಲ್ಲಿ ಬಿ.ಎಂ ಪಾಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
ಆದರೆ, 1991ರಲ್ಲಿ ಅಧಿಕಾರದಲ್ಲಿರುವಾಗಲೇ ಬಿ.ಎಂ ಪಾಟೀಲ್ ನಿಧನಾದರು. ಹೀಗಾಗಿ, ಆ ವರ್ಷ ಆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಅನಿವಾರ್ಯವೋ, ಅದೃಷ್ಟವೋ ಎಂಬಂತೆ ಎಂ.ಬಿ ಪಾಟೀಲರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಆಗ, 27 ವರ್ಷದವರಾಗಿದ್ದ ಎಂ.ಬಿ ಪಾಟೀಲ್ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.
ಆದರೆ, ಬಳಿಕ ನಡೆದ 1994ರ ಚುನಾವಣೆಗಳಲ್ಲಿ ತಿಕೋಟಾ ಕ್ಷೇತ್ರದ ಜನರು ಎಂ.ಬಿ ಪಾಟೀಲ್ ಕೈಹಿಡಿಯಲಿಲ್ಲ. ಮತ್ತೆ ಅವರು 1998ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆದ್ದರು. ಸಂಸದರಾಗಿರುವಾಗಲೇ ತಿಕೋಟಾ ಕ್ಷೇತ್ರದಲ್ಲಿ ಪುನಃ ವಿಧಾನಸಭೆಗೆ ಸ್ಪರ್ಧಿಸಿ, ಸೋಲುಂಡರು.
ಆ ನಂತರ, 2004ರಲ್ಲಿ ತಿಕೋಟಾ ಜನರು ಎಂ.ಬಿ ಪಾಟೀಲರ ಕೈ ಹಿಡಿದರು, ಎಂ.ಬಿ ಪಾಟೀಲ್ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಮರುವಿಂಗಣೆಯಾದ ಬಳಿಕ ತಿಕೋಟಾ ಕ್ಷೇತ್ರವು ಬಬಲೇಶ್ವರ ಕ್ಷೇತ್ರವಾಯಿತು. ಹೊಸ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಎಂ.ಬಿ ಪಾಟೀಲ್ ಗೆದ್ದಿದ್ದಾರೆ. ಮೂರು ಬಾರಿ ಸಚಿವರಾಗಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. 2018ರ ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ಇದೀಗ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿದ್ದಾರೆ. ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಹಲವಾರು ನಿರಾವರಿ ಯೋಜನೆಗಳಿಗೆ ಮರು ಜೀವ ನೀಡಿದ್ದರು.
ಈ ಲೇಖನ ಓದಿದ್ದೀರಾ?: ನಮ್ಮ ಸಚಿವರು | ಪರಮೇಶ್ವರ್: ಬದಲಾದ ವರಸೆ ಬದಲಾವಣೆ ತರಬಹುದೇ?
ಇದೆಲ್ಲದರ ನಡುವೆ, ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ, ಲಿಂಗಾಯತ ಸಮುದಾಯವು ಸ್ವತಂತ್ರವಾದದು, ಅದೊಂದು ಸ್ವತಂತ್ರ ಧರ್ಮ. ಲಿಂಗಾಯತ ಸಮುದಾಯವನ್ನು ಸ್ವತಂತ್ರ ಧರ್ಮವೆಂದು ಘೋಷಿಸುತ್ತೇವೆ ಎಂದು ಎಂ ಬಿ ಪಾಟೀಲ್ ಘೋಷಿಸಿದ್ದರು. ಅದಕ್ಕಾಗಿ ಹಲವಾರು ಸಮಾವೇಶಗಳು ಆ ಅವಧಿಯಲ್ಲಿ ನಡೆದಿದ್ದವು. ಸಮಾವೇಶ ಮತ್ತು ಚಳವಳಿಗಳಿಗೆ ಎಂ.ಬಿ ಪಾಟೀಲ್ ಅವರೇ ಸಾರಥ್ಯ ವಹಿಸಿದ್ದರು.
ಆದರೆ, ಸಕಾರಾತ್ಮಕ ಪರಿಣಾಮ ಬೀರಬೇಕಿದ್ದ ಆ ಚಳುವಳಿ, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯನ್ನು ತಂದುಕೊಟ್ಟಿತು. 2018ರ ಚುನಾವಣೆಯಲ್ಲಿ ಲಿಂಗಾಯತ ಮತಗಳು ಬಿಜೆಪಿ ಪಾಲಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ಅದೇನೆ ಇರಲಿ, ಸದ್ಯ ಲಿಂಗಾಯತರೂ ಸೇರಿದಂತೆ ರಾಜ್ಯದ ಎಲ್ಲ ಸಮುದಾಯಗಳ ಜನರು ಕಾಂಗ್ರೆಸ್‌ಗೆ ಮತ್ತೊಮ್ಮೆ ಅಧಿಕಾರ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಬಿ ಪಾಟೀಲ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿದ್ದಾರೆ. ಇದೇ ವೇಳೆ, ರಾಜ್ಯದ ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಉದ್ಯೋಗ ಹರಸಿ, ಹಲವು ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣವೂ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಠಿಸುವ ಜವಬ್ದಾರಿ ಸರ್ಕಾರದ ಮೇಲಿದೆ. ಕೃಗಾರಿಕಾ ಕ್ಷೇತ್ರದಲ್ಲಿ ಹೊಸ ಕೈಗಾರಿಕೆಗಳಿಗೆ ಅವಕಾಶ ನೀಡುವ ಮೂಲಕ ಉದ್ಯೋಗ ಸೃಷ್ಠಿಗೆ ಎಂ.ಬಿ ಪಾಟೀಲ್ ಶ್ರಮಿಸುವರೇ ಎಂದು ರಾಜ್ಯದ ಯುವಜನರು ಎದುರು ನೋಡುತ್ತಿದ್ದಾರೆ.