ನಮ್ಮ ಸಚಿವರು | ಪರಮೇಶ್ವರ್: ಬದಲಾದ ವರಸೆ ಬದಲಾವಣೆ ತರಬಹುದೇ?

Date:

ಪರಮೇಶ್ವರ್ ಜಾತಿಯಿಂದ ದಲಿತರಾದರೂ, ತಳಮಟ್ಟದ ದಲಿತರೊಂದಿಗೆ ಹೆಚ್ಚು ಬೆರೆತವರಲ್ಲ. ಮಠಗಳು, ಸ್ವಾಮೀಜಿಗಳು, ದೇವಸ್ಥಾನಗಳು, ಪೂಜೆ-ಪುನಸ್ಕಾರಗಳನ್ನು ಹೆಚ್ಚು ನಂಬುವ ಮತ್ತು ಪಾಲಿಸುವ ಮೂಲಕ ನವಬ್ರಾಹ್ಮಣರಾಗುವತ್ತ ಚಿತ್ತ ಹರಿಸಿದವರು

ಈ ಬಾರಿಯ ಚುನಾವಣೆಯಲ್ಲಿ ಡಾ. ಜಿ. ಪರಮೇಶ್ವರ್, ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಮಾತು, ವರಸೆಗಳನ್ನು ಚಾಲ್ತಿಗೆ ತಂದಿದ್ದರು. ತಮ್ಮ ಎಂದಿನ ಸಹನೆ ಮತ್ತು ಸಮಾಧಾನದ ವ್ಯಕ್ತಿತ್ವವನ್ನು ಬದಿಗಿಟ್ಟು ಕೊಂಚ ಉಗ್ರವಾಗಿ, ಎದುರಾಳಿಗಳನ್ನು ಬಹಿರಂಗವಾಗಿಯೇ ಪಂಥಕ್ಕೆ ಆಹ್ವಾನಿಸುತ್ತಿದ್ದರು. ಇವುಗಳ ನಡುವೆಯೇ ಜನಜಂಗುಳಿಯಲ್ಲಿ ಪರಮೇಶ್ವರ್ ಅವರ ತಲೆಗೆ ಕಲ್ಲೇಟು ಕೂಡ ಬಿತ್ತು. ರಕ್ತ ಹರಿಯಿತು. ದಲಿತ ಅಭ್ಯರ್ಥಿಗೆ ಕಲ್ಲೇಟು ಎಂದು ರಾಜ್ಯದಾದ್ಯಂತ ಸುದ್ದಿಯಾಯಿತು.

ಎಂದೂ ಯಾರಿಗೂ ಏರಿದ ದನಿಯಲ್ಲಿ ಮಾತನಾಡಿದ್ದನ್ನು ಕಂಡಿರದ ಕೊರಟಗೆರೆಯ ಜನ, ಪರಮೇಶ್ವರ್ ಅವರಲ್ಲಾದ ಬದಲಾವಣೆ ಗಮನಿಸಿ,ಏನಣ್ಣಾ ಇದು?’ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಇತ್ತ, ತೊಡೆತಟ್ಟಿ ಕುಸ್ತಿಗೆ ಆಹ್ವಾನಿಸಿದ ಪರಮೇಶ್ವರ್, ‘ನಾನು ಸುಮ್ಮನಿರುವುದನ್ನು ನನ್ನ ದೌರ್ಬಲ್ಯ ಅಂತ ತಿಳಕೊಂಡಿದಾರೆ, ಈ ಸಲ ತೋರಿಸ್ತೀನಿ ನೋಡಿ’ ಎಂದು ಗುಟುರು ಹಾಕಿದರು.

ಅವರು ಅಂದಂತೆಯೇ ಚುನಾವಣೆಯಲ್ಲಿ ಗೆದ್ದರು. ಆದರೆ ಆ ವೀರಾವೇಶದ ಮಾತುಗಳು ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಆಡಿದವು ಎನ್ನುವುದು, ಇವತ್ತಿವರೆಗೂ ಯಾರಿಗೂ ಗೊತ್ತಾಗಲಿಲ್ಲ. ಹಾಗೆಯೇ ಶಾಸಕರಾಗಿ ಆಯ್ಕೆಯಾದ ಮೇಲೆ, ‘ನಾನೂ ಕೂಡ ಸಿಎಂ ರೇಸ್ ನಲ್ಲಿದ್ದೀನಿ’ ಎಂದರು. ಆದರೆ ಅದನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಲಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಟಾಪಟಿಯಲ್ಲಿ- ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬುದನ್ನು ನೆಚ್ಚಿಕೊಂಡಿದ್ದರೆ ಹೊರತು, ಹೈಕಮಾಂಡ್ ಮೇಲೆ ಲಾಬಿ, ಒತ್ತಡ, ಒತ್ತಾಯ – ಯಾವುದನ್ನೂ ಮಾಡಲಿಲ್ಲ. ಈಗ ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಖಾತೆಯ ಮಂತ್ರಿಯಾಗಿರುವ ಪರಮೇಶ್ವರ್, ಆ ಸ್ಥಾನಕ್ಕೆ ಬೇಕಾದ ಗತ್ತುಗಾರಿಕೆ ತೋರಬೇಕಾದ ಸಂದರ್ಭದಲ್ಲಿ ತೋರದೆ, ತಮ್ಮ ಹೇಳಿಕೆಗಳನ್ನು ತಾವೇ ನುಂಗಿಕೊಂಡು ಅಪಹಾಸ್ಯಕ್ಕೂ ಗುರಿಯಾಗುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಿಯಾಂಕ್ ಖರ್ಗೆ ಸಂವಿಧಾನಕ್ಕೆ ಧಕ್ಕೆ ತಂದರೆ ಬಜರಂಗದಳ ಆಗಲಿ ಯಾರೇ ಆಗಲಿ ಕಠಿಣ ಕ್ರಮ ಎಂದು ಖಡಕ್ಕಾಗಿ ಹೇಳಿದರೆ, ಗೃಹ ಸಚಿವ ಪರಮೇಶ್ವರ್, ‘ಬಜರಂಗದಳ ನಿಷೇಧ ಚರ್ಚೆಯಾಗಿಲ್ಲ’ ಎಂದು ಗೊಂದಲಗೊಳಿಸಿದರು. ತುಮಕೂರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹೊರಡಿಸಿದ್ದ, ಪೊಲೀಸರು ಹಣೆಗೆ ಕುಂಕುಮ ಬೊಟ್ಟು ಇಡಬಾರದು ಎಂಬುದರ ಬಗ್ಗೆ ಒಲವು ತೋರಿ, ಹೌದು, ಇಡಬಾರದು ಎಂದರು. ಮಾಧ್ಯಮಗಳಲ್ಲಿ ಸುದ್ದಿ ಬಂದಾಗ, ಇಲ್ಲ, ನಾನು ಹಾಗೆ ಹೇಳಿಲ್ಲ ಎಂದರು.

ಡಾ. ಜಿ. ಪರಮೇಶ್ವರ್, ಯಾರನ್ನೂ ನೇರವಾಗಿ ಎದುರಿಸಿದವರಲ್ಲ, ಯಾರಿಗೂ ನೋವುಂಟು ಮಾಡಿದವರೂ ಅಲ್ಲ. ಆ ಕಾರಣಕ್ಕಾಗಿಯೇ ಇದ್ದೂ ಇಲ್ಲದಂತಿರುವ, ಹಾಗಿರುವುದೇ ಸರಿ ಎಂದುಕೊಂಡಿರುವ ಪರಮೇಶ್ವರ್, ತಾವು ಬೆಳೆದುಬಂದ ಸಮುದಾಯದೊಂದಿಗೂ ಅದೇ ರೀತಿ ಇದ್ದವರು. ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವಾಗ, ಚುನಾವಣೆಗೆ ನಿಲ್ಲಬೇಕಾದಾಗ, ಸಚಿವರ ಸ್ಥಾನ ಸಿಗುವ ಸಂದರ್ಭ ಬಂದಾಗ ದಲಿತ ಕಾರ್ಡನ್ನು ಚಲಾವಣೆಗೆ ತರುತ್ತಾರೆಯೇ ಹೊರತು, ದಲಿತ ಸಮುದಾಯದ ಶಿಕ್ಷಣ, ಸಂಘಟನೆ ಮತ್ತು ಉದ್ಧಾರಕ್ಕಾಗಿ ಮಾಡಿದ್ದು ಅತ್ಯಲ್ಪ ಎನ್ನುವ ಗುರುತರ ಆರೋಪ ಇವರ ಮೇಲಿದೆ.

ಇಂತಹ ಪರಮೇಶ್ವರ್ ಜನಿಸಿದ್ದು 1951ರಲ್ಲಿ, ಸ್ಥಿತಿವಂತ ಕುಟುಂಬದಲ್ಲಿ. ತಂದೆ ಶಿಕ್ಷಕರಾಗಿದ್ದುದರಿಂದ, ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರಿಂದ, ಬಡ ದಲಿತರು ಅನುಭವಿಸುವ ಅವಮಾನ, ಶೋಷಣೆ ಮತ್ತು ಅಸಹಾಯಕತೆ ಪರಮೇಶ್ವರ್ ಪಾಲಿಗಿರಲಿಲ್ಲ. ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಮತ್ತು ಆಸ್ಟ್ರೇಲಿಯಾದ ಅಡಿಲೇಡ್ ಸಂಶೋಧನಾ ಕೇಂದ್ರಿಂದ ಪಿಎಚ್.ಡಿ ಪದವಿ ಪಡೆದಿರುವ ಪರಮೇಶ್ವರ್- ಸಸ್ಯಶಾಸ್ತ್ರದಲ್ಲಿ ಪರಿಣತರು. ಕ್ರೀಡೆಯಲ್ಲಿ ಆಸಕ್ತಿಯುಳ್ಳವರು. ತಂದೆ ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳನ್ನು ತಮ್ಮ ವಿದ್ವತ್ತು ಮತ್ತು ರಾಜಕಾರಣದ ನೆರವಿನಿಂದ ಬೃಹತ್ ಸಂಸ್ಥೆಗಳನ್ನಾಗಿ ಕಟ್ಟಿ ಬೆಳೆಸಿದವರು.

ಶಿಕ್ಷಣ ಸಂಸ್ಥೆಗಳ ಉಸ್ತುವಾರಿ ನೋಡಿಕೊಂಡು ತಣ್ಣಗಿದ್ದ ಡಾ. ಪರಮೇಶ್ವರ್ ರಾಜಕಾರಣಕ್ಕೆ ಧುಮುಕಿದ್ದು 80ರ ದಶಕದಲ್ಲಿ. ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ಆಹ್ವಾನಿಸಲು ದೆಹಲಿಗೆ ಹೋದಾಗ, ‘ನೀವೇಕೆ ರಾಜಕಾರಣಕ್ಕೆ ಬರಬಾರದು’ ಎಂದು ಪರಮೇಶ್ವರ್‌ಗೆ ರಾಜೀವ್ ಗಾಂಧಿ ಕೇಳಿದ್ದರು. ಅಷ್ಟೇ ಅಲ್ಲ, 1989ರಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿದರು. 1989ರ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪರಮೇಶ್ವರ್, ಮೊದಲ ಬಾರಿಗೆ ಗೆದ್ದು ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತಿದರು. ಹಾಗೆಯೇ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಸೇವೆ ಸಲ್ಲಿಸಿದರು.

ಆದರೆ, 1994ರ ಚುನಾವಣೆಯಲ್ಲಿ ಅದೇ ಮಧುಗಿರಿ ಕ್ಷೇತ್ರದಲ್ಲಿ ಸೋತರು. 1999ರಲ್ಲಿ ಎಸ್.ಎಂ.ಕೃಷ್ಣರ ನೇತೃತ್ವದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ಸರ್ಕಾರ ರಚಿಸಿದಾಗ, ಪರಮೇಶ್ವರ್ ಕೂಡ ಗೆದ್ದು ಉನ್ನತ ಶಿಕ್ಷಣ ಮತ್ತು ವಿಜ್ಞಾನ-ತಂತ್ರಜ್ಞಾನ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಮೊದಲ ಸಲ ಗೆದ್ದಾಗ ವೀರಪ್ಪ ಮೊಯ್ಲಿಯವರು, ಎರಡನೇ ಸಲ ಗೆದ್ದಾಗ ಎಸ್.ಎಂ ಕೃಷ್ಣ- ಸಚಿವ ಸ್ಥಾನ ನೀಡಿ ರಾಜಕೀಯವಾಗಿ ಪರಮೇಶ್ವರ್ ಬೆಳವಣಿಗೆಗೆ ನೀರು-ಗೊಬ್ಬರ ಎರೆದರು. ಆ ಕಾರಣಕ್ಕಾಗಿಯೇ ಪರಮೇಶ್ವರ್ ಇವತ್ತಿಗೂ ರಾಜಕಾರಣದಲ್ಲಿ ಪ್ರತಿಯೊಂದಕ್ಕೂ ಕೃಷ್ಣ ಮತ್ತು ಮೊಯ್ಲಿಯವರನ್ನು ಆಶ್ರಯಿಸುತ್ತಾರೆ. ಅವರ ಆದೇಶ -ಸೂಚನೆಗಳಂತೆಯೇ ಮುಂದುವರೆಯುತ್ತಾರೆ. ಅವರನ್ನು ಅಪಾರವಾಗಿ ಗೌರವಿಸುತ್ತಾರೆ.

ಈ ಲೇಖನ ಓದಿದ್ದೀರಾ?: ನಮ್ಮ ಸಚಿವರು | ಕೆ ಎನ್ ರಾಜಣ್ಣ: ಅಭಿವೃದ್ಧಿಯಲ್ಲಿ ಜೋರು; ಬಾಯಿಬಡುಕತನದಲ್ಲಿ ಇನ್ನೂ ಜೋರು!

2004ರಲ್ಲಿ ಮತ್ತೆ ಮಧುಗಿರಿಯಿಂದ ಗೆದ್ದ ಪರಮೇಶ್ವರ್, 2008ರ ಕ್ಷೇತ್ರ ಮರುವಿಂಗಡಣೆಯಿಂದಾಗಿ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸುವಂತಾಯಿತು. ಹೀಗೆ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗುತ್ತಲೇ ಬಂದ ಪರಮೇಶ್ವರ್‌ಗೆ ಕಾಂಗ್ರೆಸ್ 2010ರಲ್ಲಿ ಅಧ್ಯಕ್ಷ ಸ್ಥಾನ ನೀಡಿ, ದೊಡ್ಡ ಜವಾಬ್ದಾರಿಯನ್ನೇ ಹೆಗಲಿಗೇರಿಸಿತು. 2010ರಿಂದ 2018ರವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಪರಮೇಶ್ವರ್, 2013ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು, ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ಆದರೆ, ತಮ್ಮದೇ ಪಕ್ಷದವರ – ಕೆಲವರು ಸಿದ್ದರಾಮಯ್ಯನವರು ಎನ್ನುವುದುಂಟು – ಚಿತಾವಣೆಯಿಂದ ಕೊರಟಗೆರೆಯಲ್ಲಿ ಸೋಲು ಅನುಭವಿಸಿದರು. ಆದರೆ, 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದೂ ಉಂಟು.

2018ರಲ್ಲಿ ಮತ್ತೆ ಕೊರಟಗೆರೆ ಕ್ಷೇತ್ರದಿಂದ ಆಯ್ಕೆಯಾದ ಪರಮೇಶ್ವರ್ ಅವರು, ಕ್ಷಿಪ್ರ ರೀತಿಯಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಆದರೆ, ಕೇವಲ ಒಂದೂವರೆ ವರ್ಷ ಕಳೆಯುವುದರೊಳಗೆ, ಸಮ್ಮಿಶ್ರ ಸರ್ಕಾರ ಬಿದ್ದು, ಬಿಜೆಪಿ ಅಧಿಕಾರಕ್ಕೇರಿತು. ಅಲ್ಲಿಂದ 2023ರ ಚುನಾವಣೆವರೆಗೂ ಶಾಸಕರಾಗಿದ್ದ ಪರಮೇಶ್ವರ್, 2023ರ ಚುನಾವಣೆಯಲ್ಲಿ ಗೆದ್ದು ಈಗ ಗೃಹ ಮಂತ್ರಿಯಾಗಿದ್ದಾರೆ.

ಬಿಜೆಪಿಯವರು ಮಾಡಿಟ್ಟ ಅಧ್ವಾನಗಳನ್ನು ಸರಿಪಡಿಸಬೇಕಾಗಿರುವ ಮಹತ್ವಹ ಜವಾಬ್ದಾರಿ ಪರಮೇಶ್ವರ್ ಅವರ ಮೇಲಿದೆ. ಅದರ ಮೊದಲ ಹೆಜ್ಜೆಯಾಗಿ ಕರಾವಳಿ ಭಾಗದಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿ ತಡೆಯಲು ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ ಮಾಡುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಇದು ನಿಜಕ್ಕೂ ಅಗತ್ಯವಾಗಿ ಆಗಲೇಬೇಕಿದ್ದ ದಿಟ್ಟ ಕ್ರಮ. ಕರಾವಳಿಯ ಜನ ನಿರಾಳವಾಗಿ ಉಸಿರಾಡಬೇಕಾದ ವಾತಾವರಣವನ್ನು ನಿರ್ಮಿಸಲು ಬೇಕಾದ ಕಾನೂನು ಕ್ರಮವಾಗಿ ಬಳಕೆಯಾದರೆ ಪರಮೇಶ್ವರ್ ವ್ಯಕ್ತಿತ್ವಕ್ಕೊಂದು ಗರಿ ಮೂಡಿದಂತೆ.

ಇನ್ನು ಪರಮೇಶ್ವರ್ ಜಾತಿಯಿಂದ ದಲಿತರಾದರೂ, ತಳಮಟ್ಟದ ದಲಿತರೊಂದಿಗೆ ಹೆಚ್ಚು ಬೆರೆತವರಲ್ಲ. ಹಾಗೆಯೇ ಮಠಗಳು, ಸ್ವಾಮೀಜಿಗಳು, ದೇವಸ್ಥಾನಗಳು, ಪೂಜೆ-ಪುನಸ್ಕಾರಗಳನ್ನು ಹೆಚ್ಚು ನಂಬುವ ಮತ್ತು ಪಾಲಿಸುವ ಮೂಲಕ ನವಬ್ರಾಹ್ಮಣರಾಗುವತ್ತ ಚಿತ್ತ ಹರಿಸಿದವರು. ಬುದ್ಧನ ತತ್ವದ ಬಗ್ಗೆ, ಅಂಬೇಡ್ಕರ್ ಚಿಂತನೆಗಳ ಬಗ್ಗೆ ಇವರಿಗೆ ವಿಶೇಷ ಪ್ರೀತಿಯೂ ಉಂಟು. ಅವರು ನಂಬಿದ ದೇವರು, ಬುದ್ಧ ಮತ್ತು ಅಂಬೇಡ್ಕರ್- ಅವರಿಗೆ ದಾರಿ ತೋರಲಿ. ಬೆಳೆದ, ಬೆಳೆಸಿದ ಸಮುದಾಯಕ್ಕೆ ಮತ್ತು ನಾಡಿಗೆ ಘನತೆ-ಗೌರವ ತರುವ ಕೆಲಸ ಮಾಡಲಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ನನ್ನನ್ನು ಎನ್‌ಕೌಂಟರ್ ಮಾಡುವ ಜೀವ ಬೆದರಿಕೆ ಪತ್ರ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ಗಲಭೆ ಸೃಷ್ಟಿಸಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ...