10 ಲಕ್ಷ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೋನು ಸೂದ್ ಅವರ ವಿರುದ್ಧ ಪಂಜಾಬ್‌ನ ಲೂಧಿಯಾನ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ.
ವಕೀಲ ರಾಜೇಶ್ ಖನ್ನಾ ಎಂಬವರು ದಾಖಲಿಸಿರುವ ಪ್ರಕರಣದಲ್ಲಿ ಸಾಕ್ಷಿ ಹೇಳಲು ಸೋನು ಸೂದ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಅವರಿಗೆ ಹಲವು ಬಾರಿ ಸಮನ್ಸ್ ನೀಡಿದರೂ, ಅವರು ಕೋರ್ಟ್‌ಗೆ ಬಂದಿಲ್ಲ. ಹೀಗಾಗಿ, ಅವರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
ತಮಗೆ ಮೋಹಿತ್ ಶುಕ್ಲಾ ಎಂಬವರು ವಂಚಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದ ಮೇಲೆ ಹೂಡಿಕೆ ಮಾಡಿದರೆ, ಹೆಚ್ಚು ಲಾಭ ದೊರೆಯುತ್ತದೆ ಎಂದು ಹೇಳಿ 10 ಲಕ್ಷ ರೂ. ಪಡೆದಿದ್ದಾರೆ. ಆದರೆ, ಯಾವುದೇ ಹಣವನ್ನು ಮರುಪಾವತಿಸದೆ ವಂಚಿಸಿದ್ದಾರೆ ಎಂದು ರಾಜೇಶ್ ಖನ್ನಾ ಆರೋಪಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಲೂಧಿಯಾನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಮೂರ್ತಿ ರಮಣಪ್ರೀತ್ ಕೌರ್ ಅವರು ನಡೆಸಿದ್ದಾರೆ. ಸಾಕ್ಷಿ ಹೇಳಲು ಕೋರ್ಟ್‌ಗೆ ಹಾಜರಾಗದ ಸೂದ್ ವಿರುದ್ಧ ವಾರೆಂಟ್ ಜಾರಿ ಮಾಡಿದ್ದಾರೆ. ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಕರೆತರುವಂತೆ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಲಾಗಿದೆ.
ನಟ ಸೋನು ಸೂದ್ ಅವರು ಕೊರೋನ ಆಕ್ರಮಣ ಸಮಯದಲ್ಲಿ ಹೆಚ್ಚು ಗಮನ ಸೆಳೆದಿದ್ದರು. ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಹೇರಿದ್ದರಿಂದ, ವಲಸೆ ಕಾರ್ಮಿಕರು ತಮ್ಮೂರುಗಳಿಗೆ ನಡೆದುಕೊಂಡೇ ಹೊರಟಿದ್ದರು. ಅವರ ಸಂಕಷ್ಟಗಳನ್ನು ಕಂಡು, ಮರುಗಿದ್ದ ಸೋನು ಸೂದ್, ನೂರಾರು ವಲಸೆ ಕಾರ್ಮಿಕರಿಗೆ ತಮ್ಮ ಸ್ವಂತ ಹಣದಲ್ಲಿ ಬಸ್ ವ್ಯವಸ್ಥೆ ಒದಗಿಸಿ, ತಮ್ಮೂರುಗಳನ್ನು ತಲುಪಲು ಸಹಾಯ ಮಾಡಿದ್ದರು. ರೈತ ಹೋರಾಟದ ಸಮಯದಲ್ಲಿಯೂ ರೈತರ ಪರವಾಗಿ ದನಿ ಎತ್ತಿದ್ದರು.