ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಪ್ರೌಢಶಾಲಾ ವಿಭಾಗದ ಮಕ್ಕಳಿಗಾಗಿ ಫೆಬ್ರವರಿ 10ರ ಸೋಮವಾರ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ “ನಿಮ್ಮೊಂದಿಗೆ ನಾವು” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, 2024/25ನೇ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯೆ ರಾಜೇಶ್ವರಿ ಮೋಪಗಾರ ಅವರು ಈ ಕುರಿತು ಪತ್ರಿಕೆ ಪ್ರಕಟಣೆ ತಿಳಿಸಿದ್ದು, ಕಲೆಯನ್ನು ಜನಪರವಾಗಿಸಬೇಕು. ಜನರಲ್ಲಿ ಕಲೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಕಲಾಭಿಮಾನಿಗಳ ದೊಡ್ಡ ಸಮೂಹ ಸೃಷ್ಟಿಯಾಗಬೇಕೆನ್ನುವುದೇ ನಮ್ಮ ಆಶಯ. ಕಲಾವಿದರ ಚಿತ್ರ ಪ್ರದರ್ಶನವೂ ಇರುತ್ತದೆ. ಕಲಾವಿದರು ರಚಿಸಿದ ಕಲಾಕೃತಿಗಳನ್ನು ನೋಡಿದ ಮಕ್ಕಳ ಮನಸ್ಸಿನ ಆಲೋಚನಾ ಲಹರಿ ವಿಸ್ತಾರವಾಗುವುದಂತೂ ಖಂಡಿತ ಎಂದು ಹೇಳಿದ್ದಾರೆ.
“ಈ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷವೆಂದರೆ ʼಪ್ರಾತ್ಯಕ್ಷಿಕೆʼ ಮತ್ತು ʼಉಪನ್ಯಾಸʼ ನೀಡಲು ನಮ್ಮ ಕಲಾವಿದರು ಜೊತೆಗಿರುತ್ತಾರೆ. ಚಿತ್ರರಚನೆಯ ಕ್ರಮವನ್ನು ಬಣ್ಣ ಬಳಸುವ ವಿಧಾನವನ್ನು ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. ಮಕ್ಕಳು ಅವರೊಂದಿಗೆ ಮುಕ್ತವಾಗಿ ಚರ್ಚಿಸಬಹುದು. ʼನಿಮ್ಮೊಂದಿಗೆ ನಾವುʼ ಒಂದು ವಿಶಿಷ್ಟ ಪ್ರಯೋಗವೆಂದರೆ, ಈ ಕಾರ್ಯಕ್ರಮದಲ್ಲಿ, ಕಲಾವಿದರು, ಕಲಾಭಿಮಾನಿಗಳು, ಕಲಾ ವಿದ್ಯಾರ್ಥಿಗಳು, ಕಲಾಪೋಷಕರು ಮಕ್ಕಳನೆಲ್ಲ ಒಟ್ಟಾಗಿ ಸೇರಿಸಿ ʼಕಲಾ ಸಂಭ್ರʼ ವನ್ನು ಆಚರಿಸಬೇಕೆನ್ನುವುದೇ ನಮ್ಮ ಆಸೆ. ಚಿತ್ರಕಲೆಯಲ್ಲಿ ಆಸಕ್ತಿಯುಳ್ಳ ಪ್ರತಿ ಶಾಲೆಗೆ ಐದು ಮಕ್ಕಳಂತೆ ಒಟ್ಟು 50 ಮಂದಿ ಮಕ್ಕಳಿಗಾಗಿ ಶಿಬಿರವನ್ನು ಆಯೋಜಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಜಮೀನು ಹೆದ್ದಾರಿ ಪಾಲು; ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಟ
ವಿಜಯಪುರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಬಿ ಕೆ ಶ್ರೀದೇವಿಯವರಿಂದ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಬೆಂಗಳೂರಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ ಸ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆಂದು ಹೇಳಿದ್ದಾರೆ.