2025-26ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿರುವ ಕ್ರೂರ ವಿಶ್ವಾಸದ್ರೋಹವಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಪಟ್ಟಣದ ಜಿ ವಿ ಶ್ರೀರಾಮರೆಡ್ಡಿ ಪುತ್ಥಳಿ ಮುಂಭಾಗ ಸಿಪಿಐಎಂ ತಾಲ್ಲೂಕು ಘಟಕ ಬುಧವಾರ ಕೇಂದ್ರ ಬಜೆಟ್ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬಜೆಟ್ ಪ್ರತಿಯನ್ನು ದಹಿಸುವ ಮೂಲಕ ಪ್ರತಿಭಟಿಸಿ, ಬಳಿಕ ಮಾತನಾಡಿದರು.
ಶ್ರೀಮಂತರಿಂದ ಶ್ರೀಮಂತರಿಗಾಗಿ ಮಾತ್ರ ಈ ಬಜೆಟ್ ಆಗಿದೆ. ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಇದು ಬಿಂಬಿಸುತ್ತದೆ. ಮೋದಿ ಸರ್ಕಾರದ ದಿವಾಳಿತನವನ್ನು ಬಿಂಬಿಸುವ ಈ ಬಜೆಟ್ ದೇಶದ ಅರ್ಥ ವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಕೇಂದ್ರ ಬಜೆಟ್ ಬಹಳ ಸ್ಪಷ್ಟವಾಗಿ ಕಾರ್ಪೊರೇಟ್ ಚಮಚಾಗಳಿಗೆ ಮತ್ತು ಶ್ರೀಮಂತರಿಗಾಗಿ ತಯಾರಿಸಿದ ಬಜೆಟ್ ಆಗಿದೆ. ರೈತರ, ಕಾರ್ಮಿಕರ, ದಲಿತರ, ಮಹಿಳೆಯರ, ವಿದ್ಯಾರ್ಥಿ ಯುವಜನರ ಒಟ್ಟಾರೆಯಾಗಿ ಬಡವರ ಜೀವನೋಪಾಯದ ಮೇಲೆ ನಡೆಸಿದ ಕ್ರೂರ ದಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೃಷಿ, ಆಹಾರ ಭದ್ರತೆ, ನರೇಗಾ ಸೇರಿದಂತೆ ಹಲವು ಬಡವರ ಕಲ್ಯಾಣದ ಕಾರ್ಯಕ್ರಮಗಳಿಗೆ ತೀವ್ರವಾದ ರೀತಿಯಲ್ಲಿ ಅನುದಾನ ಕಡಿತಗೊಳಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಹಸಿವು, ವಲಸೆ, ಸಾಲಭಾಧೆ ಮುಂತಾದ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿರುವ ದುಡಿಯುವ ವರ್ಗಕ್ಕೆ ಯಾವುದೇ ರೀತಿಯಲ್ಲೂ ನೆರವಾಗದೆ, ಬಹುರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳ ಹಿತರಕ್ಷಣೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿದರು.
ರೈತರ ಪ್ರಮುಖ ಹಕ್ಕೊತ್ತಾಯಗಳಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ, ಸಾಲಭಾಧೆಯಿಂದ ಮುಕ್ತಿ, ಕೃಷಿ ಲಾಗುವಾಡುಗಳ ವೆಚ್ಚ ಕಡಿತ, ರೈತರ ಕೃಷಿ ಭೂಮಿ ಹಾಗೂ ಬೆಳೆ ಸಂಪತ್ತಿನ ಕಾರ್ಪೊರೇಟ್ ಲೂಟಿಗೆ ಪರಿಣಾಮಕಾರಿ ನಿಯಂತ್ರಣದ ಆಗ್ರಹಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ವಿದೇಶಿ ಬಂಡವಾಳಕ್ಕೆ ಸಂಪೂರ್ಣ ಮಣೆ ಹಾಕಿ, ವೇಗದ ಖಾಸಗೀಕರಣಕ್ಕೆ ಒತ್ತು ನೀಡಿರುವ ಈ ಬಜೆಟ್ ಒಟ್ಟಾರೆಯಾಗಿ ನಿರುದ್ಯೋಗ, ಬೆಲೆ ಏರಿಕೆ, ಬಡತನ, ದಾರಿದ್ರ್ಯ, ವಲಸೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಕೃಷಿ ರಂಗವನ್ನು ಕಾರ್ಪೋರೇಟೀಕರಣಗೊಳಿಸಲು ಒಂದು ಸಾಧನವಾಗಿ ಈ ಬಜೆಟ್ ರೂಪಿಸಲಾಗಿದ್ದು ಎಂದು ಆರೋಪಿಸಿದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಎಂ ಎನ್ ರಘುರಾಮ್ ರೆಡ್ಡಿ ಮಾತನಾಡಿ, ಈ ಬಜೆಟ್ ಸಂಪೂರ್ಣವಾಗಿ ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ದುಡಿಯುವ ಜನರ ವಿರೋಧಿಯಾಗಿದ್ದು, ಇದನ್ನು ಸಿಪಿಐಎಂ ಖಂಡಿಸುತ್ತದೆ ಎಂದರು.
ಇದನ್ನೂ ಓದಿ : ಬಾಗೇಪಲ್ಲಿ | ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿ; ಸಿಪಿಎಂ ಆಗ್ರಹ
ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡರಾದ ಬಿಳ್ಳೂರು ನಾಗರಾಜು, ಲಕ್ಷ್ಮಣ ರೆಡ್ಡಿ, ಮುಸ್ತಫಾ, ವಾಲ್ಮೀಕಿ, ಅಶ್ವತ್ಥಪ್ಪ, ಎಸ್.ಎಫ್.ಐ. ಮುಖಂಡ ಸೋಮಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.