ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ. 

ಹೆಣ್ಣುಜೀವನ, ಅದಕ್ಕೆ ಸಲಿಗೆ ಕೊಡಬಾರದು ಎಂದು ಹೆಂಡತಿಯ ಸಂಗಡ ಸ್ವಲ್ಪ ಬಿಗುವಿನಲ್ಲಿರುವ ಗಂಡಂದಿರೆ ಬಹಳ. ಮತ್ತೆ ಕೆಲವರು ಸಿಟ್ಟು ಮಾಡುತ್ತಾರೆ; ಮಾತು ಬಿಡುತ್ತಾರೆ; ಜಗಳ ಮಾಡುತ್ತಾರೆ. ಇನ್ನೂ ಎಷ್ಟೋ ಮಂದಿ ಎಷ್ಟೋ ಕಡೆಗೆ ದನ ಬಡಿದ ಹಾಗೆ ಬಡಿಯುವುದೂ ಉಂಟು; ಎಂತಹ ಅನ್ಯಾಯ! ಅವರಿಗೆ ಹೃದಯವಿದೆಯೇ? ಮನುಷ್ಯರೇ ಅವರು? ನಾನು ನಮ್ಮವಳೊಡನೆ ಒಂದೂ ಬಿರುಸು ಮಾತನಾಡುವುದಿಲ್ಲ; ಸ್ವಲ್ಪವೂ ಸಿಟ್ಟು ಮಾಡುವುದಿಲ್ಲ; ಹೂವಿನ ಹಾಗೆ ತಲೆಯ ಮೇಲೆ ಇಟ್ಟುಕೊಂಡಿರುತ್ತೇನೆ. ಎಷ್ಟೊಂದು ನಯವಾದ ದೇಹ, ಕೋಮಲವಾದ ಮನಸ್ಸು, ಮನೋಹರವಾದ ಮೋರೆ, ಎಂತಹ ಅಪರಾಧ ಮಾಡಿದ್ದರೂ ಒಂದೇ ನೋಟದಿಂದ ಎಲ್ಲವನ್ನೂ ಮರೆಯಿಸಿಬಿಡುವ ವಿಶಾಲವಾದ ಕಣ್ಣುಗಳು! ದಿವ್ಯಸುಂದರ ವಿಗ್ರಹ!! ಇಂತಹುದಕ್ಕೆ ಹೊಡೆಯುವುದೇ? ಈ ಮನುಷ್ಯಕೈಗಳಿಂದ ಅದೆಂದಿಗೂ ಆಗದ ಮಾತು- ಎಂದು ಏನೇನನ್ನೋ ಹೇಳಿಕೊಳ್ಳುತ್ತಲಿದೆ. ಹೀಗಿದ್ದವನು ಮೊನ್ನೆ ನಾನೂ ಏನೋ ಕೇಳಿದೆ, ಅವಳೂ ಏನೋ ಹೇಳಿದಳು; ನಾನೂ ಸೆಟೆದುಕೊಂಡು ಹೋದೆ; ಅವಳೂ ಸ್ವಲ್ಪ ಮೋರೆ ತಿರುವಿಕೊಂಡಿದ್ದಳು. ಅಂತೂ ಕೊನೆಗೆ ಸ್ವಲ್ಪ ಸ್ವಲ್ಪ ಏನು ಚೆನ್ನಾಗಿಯೇ ನ್ಯಾಯ ಮಾಡಿಬಿಟ್ಟೆವು; ಮಾತನ್ನೂ ಬಿಟ್ಟಿದ್ದೆವು; ಸ್ವಲ್ಪ ಹೊಡೆಯುವ ಶಾಸ್ತ್ರವೂ ಆಯಿತು. ನಾನು ಕೇವಲ ಇಷ್ಟೇ ಹೇಳಿಬಿಟ್ಟರೆ ಅದರ ಪೂರ್ಣ ಕಲ್ಪನೆಯು ತಮಗಾಗಲಾರದು. ಇದಕ್ಕೆ ನಿಜವಾದ ಕಾರಣಗಳಾವುವು, ಮತ್ತು ಇದು ಯಾರ ತಪ್ಪಿನಿಂದ ಎಂಬುದೂ ತಿಳಿಯದು. ಅದಕ್ಕಾಗಿ ನಡೆದ ವಿಷಯವನ್ನೆಲ್ಲಾ ವಿವರಿಸಿ ಹೇಳುತ್ತೇನೆ; ತಾವು ಎಲ್ಲವನ್ನೂ ಶಾಂತಚಿತ್ತದಿಂದ ಕೇಳಿಕೊಂಡು ಸರಳ ಹೃದಯದಿಂದ ನಿಷ್ಪಕ್ಷಪಾತದ ತೀರ್ಪನ್ನು (Impartial Judgement) ಕೊಡಬೇಕು.

ರಾತ್ರಿ ಊಟವಾದ ಮೇಲೆ ಇಬ್ಬರೂ (ನಾನು ಅವಳು) ಎಲ್ಲೆಲ್ಲಿಯದೋ ಸುದ್ದಿಯನ್ನು ಮಾತನಾಡುತ್ತ ಕುಳಿತಿದ್ದೆವು. ನಾವು ಇದ್ದುದು ನಮ್ಮ ಊರಿನಿಂದ ಎಷ್ಟೋ ಮೈಲು ದೂರದ ನಾಡಿನಲ್ಲಿ; ಇಬ್ಬರೇ! ನಮ್ಮ ನೆರೆಹೊರೆಯವರಾರಿಗೂ ಕನ್ನಡ ಬರುತ್ತಿರಲಿಲ್ಲ. ಅವಳಿಗೆ ಮರಾಠಿ ಎಂದರೆ ಗೊತ್ತಿಲ್ಲ. ಹೀಗಾಗಿ ಅವಳಿಗೆ ತವರೂರಿನದೇನಾದರೂ ಸುದ್ದಿ ನೆನಪಾಯಿತೆಂದರೆ ನನ್ನೆದುರಿಗೆ ಹೇಳದೆ ಮಾರ್ಗವಿರಲಿಲ್ಲ. ಇಂದು “ಪಾಚಿ ಹಾಗೆ, ಗುಂಡಿ ಹೀಗೆ, ಚಿನ್ನಿ ಒಳ್ಳೆಯವಳು” ಎಂದು ಏನೇನೋ ಸುದ್ದಿ ಹೇಳಿದಳು. ಅವಳ ಈ ಸಮಾಚಾರದಲ್ಲಿ ನನಗೆ ಹೇಗೆ ಸ್ವಾರಸ್ಯವೆನಿಸಬೇಕು? ಆದರೂ ಇಷ್ಟೊಂದು ಸಲಿಗೆಯಿಂದ ಹೇಳುತ್ತಿರುವಳಲ್ಲ ಎಂದು ಸುಮ್ಮನೆ ತಲೆ ಹಾಕುತ್ತಾ ಕುಳಿತುಕೊಂಡಿದ್ದೆ. ಕಡೆಗೆ ಹಾಗೇ ಮಾತಿಗೆ ಮಾತು ಹೊರಟು ಹೆಂಗಸರ ಹಾಡಿನ ಸಮಾಚಾರಕ್ಕೆ ಬಂತು. ಆಗ ನಾನು “ಹೆಂಗಸರ ಕಂಠ ಎಷ್ಟು ಒಳ್ಳೆಯದಿರುತ್ತದೆ ಎನ್ನುತ್ತಾರೆ; ನೀನು ಒಂದು ದಿನವಾದರೂ ಒಂದು ಹಾಡು ಹಾಡಿದ್ದು ಕೇಳಿಲ್ಲ; ಒಂದು ಹಾಡು ಹೇಳಬಾರದೇ?” ಎಂದೆ.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

Advertisements

“ಎಲ್ಲರ ಕಂಠವೆಲ್ಲಿ ಒಳ್ಳೆಯದು ಬಂದೀತು? ನನಗೆ ಹಾಡಲಿಕ್ಕೆ ಬರುವುದಿಲ್ಲ” ಎಂದಳು.

“ಉರುಟಣಿ ಮಾಡುವಾಗ ಹೇಳಿದ್ದೆಯಲ್ಲ!”

”ಅಕ್ಕ ಎರಡೆಂದರೆ ಎರಡೇ, ದಿನಾಲು ಕಟಗುಟ್ಟಿ ಹೇಳಿಕೊಟ್ಟಿದ್ದಳು. ಹೇಳಿದೆ; ಅದೂ ಹೇಗೆ- ದನಿ ಇಲ್ಲ; ಧಾಟಿ ಇಲ್ಲ: ಸುಮ್ಮನೆ ಹೇಳಬೇಕೆಂದು ಹೇಳಿದ್ದು.”

”ನೀನು ಏಕಾಗಿ ಹೇಳಿದ್ದರೂ ಸರಿಯೆ ಹಾಡು ಮಾತ್ರ ಚೆನ್ನಾಗಿತ್ತು. ಈಗಲೂ ಹೇಳಲೇಬೇಕೆಂದು ಹೇಳಿಬಿಡು.”

“ಹೇಳುವುದಕ್ಕೆ ನೆನಪಿದ್ದರಷ್ಟೆ! ಆ ಮಾತಿಗೀಗ 4-5 ವರುಷವಾಗಿ ಹೋಯಿತು.”

ಅವಳು ಹಾಡು ಹೇಳುವ ಲಕ್ಷಣವಂತೂ ತೋರಲಿಲ್ಲ. ಕಡೆಗೆ ಒಂದು ಸಲ ಒಗಟು ಹಾಕಿ ಹೆಸರನ್ನಾದರೂ ಹೇಳಿಸಿಕೊಂಡುಬಿಡಬೇಕೆಂದು, “ಹಾಡು ಮರೆತಿದ್ದರೆ ಬಿಡು. ಒಂದು ಒಳ್ಳೇ ಒಗಟು ಹಾಕಿ ಹೆಸರು ಹೇಳಿಬಿಡು, ನೋಡೋಣ” ಎಂದೆ.

“ಹೇಳುವ ಕಾಲಕ್ಕೆ ಒಂದೇಕೆ ಬೇಕೆನ್ನುವಷ್ಟು ಹೇಳಿದ್ದೇನೆ” ಎಂದಳು.

“ಆಗ ಹೇಳಿದೆ. ಇಲ್ಲವೆನ್ನುವವರಾರು? ಆದರೆ ಆಗ ನಿನಗೆ ಹೇಳುವುದಕ್ಕೂ, ನನಗೆ ಕೇಳುವುದಕ್ಕೂ ಇಬ್ಬರಿಗೂ ಸಂಕೋಚವಾಗಿತ್ತು- ಈಗ ಹಾಗಿಲ್ಲವಷ್ಟೇ! ಒಗಟು ಮರೆತಿದ್ದರೆ ಅದೂ ಬೇಡ. ಹಾಗೆ ನಿಚ್ಚಳವಾಗಿ ಹೆಸರು ಹೇಳಿಬಿಡು.”

“ಸುಮ್ಮಸುಮ್ಮನೆ ಈಗೇಕೆ ಹೇಳುವುದು? ಏನು ನಿಮಗೆ ಮರೆತಿದೆ ಎಂತಲೇ? ನಾನು ಮರೆತಿದ್ದೇನೆ ಎಂತಲೇ?”

”ಸುಮ್ಮನೆ ಹೇಳು ಅಂದರೆ ಹೇಳಿಬಿಡಬಾರದೆ?” ನಾನು ಸ್ವಲ್ಪ ಬೇಸರದ ದನಿಯಲ್ಲಿ ಎಂದೆ.

ಆಗ ಅವಳು ನನ್ನ ಮಾತಿನ ಕಡೆಗೆ ಅಷ್ಟೊಂದು ಲಕ್ಷ್ಯ ಕೊಡದೆ, “ಮತ್ತೆ ಹೇಳುವ ಕಾಲ ಬಂದರೆ ಹೇಳುತ್ತೇನೆ; ಕಾರಣವಿಲ್ಲದೆ ಹೇಳು ಅಂದರೆ ನನ್ನಿಂದಾಗದ ಮಾತು” ಎಂದಳು.

“ಅದೆಲ್ಲ ರಗಳೆ ತೆಗೆದುಕೊಂಡು ಮಾಡುವುದೇನು? ನೀನು ಈಗ ಹೇಳುವೆಯೋ ಇಲ್ಲವೊ?” ಎಂದು ನಾನು ಸ್ವಲ್ಪ ಗಟ್ಟಿಗೆ ಹಚ್ಚಿಯೆ ಕೇಳಿಬಿಟ್ಟೆ.

ನನ್ನದು ಸ್ವಲ್ಪ ಹಟದ ಸ್ವಭಾವ; ಒಮ್ಮೆ ಏನಾದರೂ ಮನಸ್ಸಿನಲ್ಲಿ ಬಂದಿತೆಂದರೆ ಅದು ಆಗಲೇಬೇಕು. ಅಂತೆಯೇ ಹೀಗೆ ನಿಚ್ಚಳವಾಗಿ ಕೇಳಿಬಿಟ್ಟೆ. ಅವಳ ಮನಸ್ಸಿನಲ್ಲಿ ಹೇಳುವುದಿತ್ತೇನೊ, ಆದರೆ ನಾನು ಇನ್ನೂ ಸ್ವಲ್ಪ ಒತ್ತಾಯಪಡಿಸಲೆಂತಲೊ; ಹೇಳದೆ ನಡೆದು ಹೋಗುವಂತಿದ್ದರೆ ಸಾಗಿಹೋಗಲಿ ಎಂತಲೋ; ಕಾರಣವಿಲ್ಲದೆ ಹೇಳಲೇಬಾರದೆಂಬ ನಿಶ್ಚಯದಿಂದಲೋ ಅವಳು ಹೇಳುತ್ತಲೆ ನಾನು ನಕ್ಕುಬಿಡುತ್ತೇನೆಂಬ ನಾಚಿಕೆಯಿಂದಲೊ; ನನ್ನಂತೆಯೆ ತಾನೂ ಸ್ವಲ್ಪ ಬಿರುಸಾಗಿಯೇ ಉತ್ತರಕೊಟ್ಟು ಹೆಚ್ಚು ಮೋಜು ಮಾಡಬೇಕೆಂತಲೊ; ಅವಳ ಮನಸ್ಸಿನಲ್ಲಿಲ್ಲದ್ದುದು ಏನೋ- ಅವಳೂ ‘ಇಲ್ಲ’ ಎಂದು ನಿಶ್ಚಿತವಾಗಿ ಉತ್ತರ ಕೊಟ್ಟುಬಿಟ್ಟಳು. ಅವಳಿಂದ ಇಂತಹ ಉತ್ತರವನ್ನು ಪಡೆದದ್ದು ಇದೇ ಮೊದಲು. ಹೃದಯದಲ್ಲಿ ಹೇಗೋ ಆಯಿತು. ಬೇಸರ ಹುಟ್ಟಿತು, ಸಿಟ್ಟು ಬಂದಿತು; ಚಟಕ್ಕನೆ ಎದ್ದು, ನನ್ನ ಕೋಣೆಯಲ್ಲಿ ಬಂದು, ಕುರ್ಚಿಯ ಮೇಲೆ ಕುಳಿತುಕೊಂಡುಬಿಟ್ಟೆ.

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

ಮುಂದೆ 10-15 ನಿಮಿಷಗಳು ಹಾಗೆಯೇ ಕಳೆದವು. ನಾನು ಕುರ್ಚಿಯ ಮೇಲೆ, ಎದುರಿಗೊಂದು ಪುಸ್ತಕ; ಅವಳು ಅಲ್ಲಿ ನೆಲದ ಮೇಲೆ, ಎದುರಿಗೊಂದು ದೀವಿಗೆ. ಬಳಿಕ ಅವಳು ಎದ್ದು ಮೆಲ್ಲಗೆ ನನ್ನ ಬಳಿಗೆ ಬಂದಳು.

“ಹತ್ತು ಹೊಡೆದು ಹೋಯಿತು, ಇನ್ನೂ ನಿದ್ದೆ ಬಂದಿಲ್ಲವೇ?” ಎಂದು ಈವರೆಗೆ ನಡೆದ ಎಲ್ಲ ಸಮಾಚಾರವನ್ನೂ ಮರೆತಿದ್ದವಳಂತೆ ಕೇಳಿದಳು.

ನಾನು ಓದುವುದರಲ್ಲಿ ಮಗ್ನನಾಗಿದ್ದಂತಿದ್ದವನು ಹಾಗೇ ಇದ್ದೆ.

“ಇಂದು ಮಲಗುವಂತೆಯೇ ಇಲ್ಲವೇನು?”

ನಾನು ಮಿಸುಗಲಿಲ್ಲ.

“ಏನು ನನ್ನ ಸಂಗಡ ಮಾತನಾಡಬಾರದೆಂದು ಮಾಡಿದ್ದೀರಾ?”

ನಾನು ಸುಮ್ಮನೆ ಇದ್ದೆ.

“ಹೀಗೆ ಸಣ್ಣ ಹುಡುಗರ ಹಾಗೆ ಮಾತುಮಾತಿಗೆ ಸಿಟ್ಟು ಮಾಡುವುದಕ್ಕೆ ಹತ್ತಿದರೆ ಹೇಗೆ ಮಾಡಬೇಕು?”

“ಹೌದು, ನಾನು ಮಾತ್ರ ಹುಡುಗ, ನೀನು ಮಾತ್ರ ಯಜಮಾನಿ” ಎಂದು ಹೇಳಿಬಿಡಬೇಕೆಂದು ಹಾತೊರೆಯುತ್ತಿದ್ದ ನಾಲಿಗೆಯನ್ನು ಬಿಗಿಹಿಡಿದು ಸುಮ್ಮನೆ ಕುಳಿತೆ.

“ನನ್ನದು ಸರ್ವಥಾ ತಪ್ಪಾಯಿತು. ಹೆಸರು ಹೇಳುತ್ತೇನೆ. ಈ ಕಡೆ ಮೋರೆ ತಿರುವಬಾರದೇ?” ಎಂದು ದೈನಾಸಬಟ್ಟು ಕೇಳಿಕೊಂಡಳು.

ಹಾಗಾದರೆ ಹೇಳು ಎನ್ನಬೇಕೆಂದಿದ್ದೆ. ಆದರೆ ಇನ್ನೂ ಏನು ಮಾಡುವಳೊ ನೋಡಬೇಕೆಂದು ವಿಶ್ವಪ್ರಯತ್ನ ಮಾಡಿ ಸುಮ್ಮನೆ ಕುಳಿತೆ.

ಕರುಣೆಯ ಸೆಲೆಯೇನಾದರೂ ನನ್ನಲ್ಲಿ ಒಡೆಯುವದೇನೋ ಎಂದು 1-2 ನಿಮಿಷ ನನ್ನನ್ನೇ ದಿಟ್ಟಿಸುತ್ತಾ ನಿಂತಳು. ನಿರಾಸೆಯಾಗಲು “ಹೀಗೇ ಓದಬೇಕು ಹಾಗಾದರೆ” ಎಂದು ಸಿಟ್ಟು ಮತ್ತು ಚೇಷ್ಟೆಯಿಂದೊಡಗೂಡಿದ ದನಿಯಿಂದ ಅನ್ನುತ್ತ ಸ್ವಿಚ್ ಮಾಡಿ ದೀಪ ತೆಗೆದುಬಿಟ್ಟಳು. ಮುಂದೆ ಅರಗಳಿಗೆಯ ಮೇಲೆ ಮತ್ತೆ ಸ್ವಿಚ್ ಮಾಡಿ ದೀಪ ಹಚ್ಚಿದಳು. ನನ್ನ ಕಡೆ ನೋಡಿ ನಗಲಿದ್ದ ಮೋರೆಯನ್ನು- ನಾನು ಕುಳಿತವನು ಕುಳಿತಂತೆಯೇ ಕುಳಿತಿದ್ದನ್ನು ಕಂಡು- ಒಲುಮೆಯಿಂದ ಬದಲಿಸಿ ಗಂಭೀರವಾಗಿ ಮಾಡಿ, “ಹಾಗಾದರೆ ನಾನು ಹೋಗಲೆ? ನನ್ನ ಸಂಗಡ ಇನ್ನು ಎಂದೂ ಮಾತನಾಡುವುದಿಲ್ಲವೆ?” ಎಂದಳು. ಎಲ್ಲಿ ಹೋಗಿಬಿಡುವಳೋ ಎಂದು ಕುಳಿತಂತೆಯೇ ಕಣ್ಣು ಹೊರಳಿಸಿ ನೋಡಿದೆ. ಅವಳು ಹಾಗೆ ಅಂದದ್ದು ಕೇವಲ ಉಪಚಾರಕ್ಕಾಗಿ ಅಷ್ಟೆ.

hosaba 02

“ಹೆಸರು ಹೇಳುತ್ತೇನೆ; ನನ್ನದು ತಪ್ಪಾಯಿತು ಎಂದು ಒಪ್ಪಿಕೊಂಡ ಮೇಲೂ ಮಾತನಾಡಿಸಬಾರದೆ?” ಎನ್ನುತ್ತ ತೀರ ಹತ್ತಿರಕ್ಕೆ ಬಂದಳು. ಅವಳ ಸೀರೆಯ ಸೆರಗಿನ ಚುಂಗು ನಾನು ಕುಳಿತ ಕುರ್ಚಿಗೆ ಸೋಂಕಿತು. ಅವಳು ಒಮ್ಮೆಲೆ ಬೆಚ್ಚಿಬಿದ್ದು, ”ನಾಯಿಕುನ್ನಿ ಎಲ್ಲಿದೆ?” ಎಂದಳು. ಅದು ಮೇಜಿನ ಮೇಲೆ ಪುಸ್ತಕದ ಹಿಂದೆ ಮಲಗಿಕೊಂಡಿತ್ತು. ಅವಳು ಅದನ್ನು ನೋಡಿದಳು. “ಥೂ ಸಾಕಾಯಿತು ಈ ಹಾಳು ನಾಯಿಯ ಕಾಲೊಳಗೆ” ಎಂದಳು.

ನನಗೆ ನಗೆ ತಡೆಯಲಾಗಲಿಲ್ಲ, ನಕ್ಕುಬಿಟ್ಟೆ.

”ನಗೆಯಾದರೂ ಹೇಗೆ ಬರುತ್ತದೊ ಏನೊ? ಮೈಲಿಗಾಗಿ ಹೋಯಿತು. ಈಗೇನು ಮಾಡಬೇಕು? ಉಟ್ಟುಕೊಳ್ಳುವುದಕ್ಕೆ ಮತ್ತೊಂದು ಸೀರೆ ಕೂಡ ಇಲ್ಲ. ಒಂದು ಪತ್ತಲ ತರುವುದಕ್ಕೆ ಹೇಳಿ ಹೇಳಿ ಬೇಸರ ಬಂದು ಹೋಯಿತು. ಈಗ ನಾನೇನು ಉಟ್ಟುಕೊಳ್ಳಬೇಕು?” ಎಂದು ಗೊಂದಲದ ಗಡಿಬಿಡಿಯ ದನಿಯಲ್ಲಿ ನುಡಿದಳು.

“ಸಾಕು, ಸಾಕು, ನಿನ್ನ ಮಡಿ ಮೈಲಿಗೆ ಹೇಳುವ ಹಾಗಿಲ್ಲ. ಅವೆಲ್ಲ ಮುದುಕರಿಗೆ. ನಿನಗೆ ಇನ್ನೂ ನಾಳಿನ ನೂಲ ಹುಣ್ಣಿಮೆಗೆ 16 ತುಂಬುತ್ತದೆ.”

”ಮುದುಕರಾಗದಿದ್ದರೆ ತೀರ ಹೊಲೆಯರಾಗಬೇಕಾಯಿತಲ್ಲ!”

“ನಾಯಿ ಮಲಗಿದ್ದು ಮೇಜಿನ ಮೇಲೆ. ನಿನ್ನ ಸೀರೆಯ ಸೆರಗು ಕುರ್ಚಿಗೆ ತಾಕಿದರೆ ಮೈಲಿಗೆಯೇ?”

”ಮೇಜಿನ ಮೇಲೆ ಕಾಲಿಟ್ಟಿದ್ದೀರಲ್ಲ! ಇನ್ನೇನು ಮೂರು ನಾಮದವರ ಮಡಿ ಮಾಡಬೇಕಾಯಿತು.”

ಮೂರು ನಾಮದವರ ಮಡಿಯ ಸಮಾಚಾರ ನಿಮಗೆ ಗೊತ್ತಿದೆಯೋ ಇಲ್ಲವೋ! ಅವರದು ಕೋಲು ಮಡಿ- ಎಂದರೆ ಮಡಿಪಂಚೆ ಕೋಲಿನಿಂದೆಳೆದು ಒಂದು ಬದಿಗಿಟ್ಟು ಆಮೇಲೆ ಸ್ನಾನ ಮಾಡಿ ಅದನ್ನು ಉಟ್ಟುಕೊಂಡು ದೇವರ ಪೂಜೆ ಮೊದಲಾದ ಮಡಿಯ ಕೆಲಸಗಳನ್ನೆಲ್ಲ ಮಾಡಬಹುದು. ಇತರ ಜಾತಿಯವರು ಕೊಡವನ್ನು ಬಾವಿಯಲ್ಲಿ ಬಿಟ್ಟು ಅವರೇ ಅದನ್ನು ಮೇಲಿನವರೆಗೆ ಜಗ್ಗಬಹುದು. ಬಳಿಕ ತಾವು ಕೊಡವನ್ನು ಹೊರಕ್ಕೆ ತೆಗೆದುಕೊಂಡುಬಿಟ್ಟರಾಯಿತು. ಮಡಿಯಿಂದ ಇರುವಾಗ ಗವಳಿಗರ ಹಾಲು ಮೊಸರಿನ ಬುಟ್ಟಿಯನ್ನಿಳಿಸಿಕೊಳ್ಳಬಹುದು. ಅಂತೂ ಅವರನ್ನು ಮುಟ್ಟದಿದ್ದರಾಯಿತು. ಈ ಎಲ್ಲ ಸಂಗತಿಗಳನ್ನು ನೋಡಿದರೆ ಮೂರು ನಾಮದವರು ಪ್ರಿಮಿಟಿವ್ ಏಜ್(Primitive Age)ನಲ್ಲಿರುವರೇನೋ ಎನಿಸುತ್ತದೆ. ಏಕೆಂದರೆ ಮಡಿಯ ಉದ್ದೇಶವೇನು? ಶುದ್ಧವಾಗಿರುವ ಕಾಲಕ್ಕೆ ಅಶುದ್ಧವಾದ ಯಾವುದೇ ಪದಾರ್ಥವನ್ನು ಮುಟ್ಟುವುದರಿಂದ ಮಾಲಿನ್ಯವು ತಾಗುವುದು. ಆದ್ದರಿಂದ ಅಂತಹ ಯಾವುದೇ ಪದಾರ್ಥವನ್ನು ಮುಟ್ಟಕೂಡದು; ಇದರ ಮೇಲೆ ಇತರರು ಟೀಕೆಯ ಮೇಲೆ ಭಾಷ್ಯ, ಭಾಷ್ಯದ ಮೇಲೆ ವಾರ್ತಿ ಮಾಡಿ ತೀರ ಅತಿರೇಕಕ್ಕೆ ತಂದುಬಿಟ್ಟಿರುವುದನ್ನೆಲ್ಲ ಅವರು ಅನುಸರಿಸುತ್ತಿರುವುದಿಲ್ಲ. ನಾಯಿಯ ಜಾತಿಯೇನೋ ಸ್ವಚ್ಛವಾದುದಲ್ಲ. ಎಲ್ಲೆಲ್ಲಿಯೋ ತಿರುಗುತ್ತದೆ, ಏನೇನನ್ನೆಲ್ಲಾ ತಿನ್ನುತ್ತದೆ; ಎಷ್ಟೊ ತೊನಸಿ ಚಿಕ್ಕಾಡುಗಳ ತವರೂರಾಗಿರುತ್ತದೆಂದು ಅದನ್ನು ನಿಷಿದ್ಧ ಪ್ರಾಣಿಗಳಲ್ಲಿ ಸೇರಿಸಬಹುದು. ಆದರೆ ಈಗ ನಮ್ಮ ಕುನ್ನಿ ತೀರ ಚಿಕ್ಕದು. ಅಂದರೆ 8-10 ದಿವಸದ್ದಿರಬಹುದು. ಅದು ಕೇವಲ ಹಾಲಿನ ಮೇಲೆಯೇ ಇದೆ; ಅದಕ್ಕೆ ಇತರ ಯಾವ ಆಹಾರದ ಸಂಪರ್ಕವೂ ಇಲ್ಲ. ಮೇಲೆ ನಾನು ಇಂದೇ ಸೋಪು ಹಚ್ಚಿ ತೊಳೆದಿದ್ದೇನೆ; ಬೆಳ್ಳಗೆ ಗಂಜಿಯ ಅರಿವೆಯಷ್ಟು ಶುಭ್ರವಾಗಿದೆ, ಮುದ್ದಾಗಿದೆ. ನೋಡಿದರೆ ಹಸುಗೂಸನ್ನು ನೋಡಿದಂತೆ ಎಷ್ಟೋ ಪ್ರೀತಿ ಬರುತ್ತಿದೆ. ಇಂತಹುದು ಮೇಜಿನ ಒಂದು ಮೂಲೆಯಲ್ಲಿ ಮಲಗಿಕೊಂಡಿದೆ; ಮೇಜಿನ ಮೇಲಿನ ಕೆಳಗಿನ ಪಟ್ಟಿಯ ಮೇಲೆ ನನ್ನ ಕಾಲುಗಳನ್ನು ಇಟ್ಟಿದ್ದೇನೆ. ಅವಳುಟ್ಟ ಸೀರೆಯ ಸೆರಗು ನಾನು ಕುಳಿತ ಕುರ್ಚಿಗೆ ಸೋಂಕಿತು. ಇದು ಕೂಡ ಮೈಲಿಗೆಯೆ? ಮೈಲಿಗೆ ಏನು ಎಲೆಕ್ಟಿಕ್ ಕರೆಂಟ್(Electric Current)ನಂತೆ ಒಂದು ಪದಾರ್ಥದಿಂದ ಮತ್ತೊಂದು ಪದಾರ್ಥಕ್ಕೆ ಹರಿದುಹೋಗುತ್ತದೆಯೆ? ಇಲ್ಲ- ಮೈಲಿಗೆಯು ಅದಕ್ಕೂ ಹೆಚ್ಚಿನದು; ಏಕೆಂದರೆ Wood is a bad conductor of electricity.

ನಾನು ಎಷ್ಟೋ ಹೇಳಿದೆ. ಅವಳು ಬೇರೆ ಕೇಳಲಿಲ್ಲ. ಮೈಲಿಗೆಯೆ ಎಂದು ಸಾಧಿಸಿದಳು. “ಬಿಡಲೇ ಬೇಕಿದ್ದರೆ ಈ ಸೀರೆ ಬಿಡು. ಆದರೆ ಈಗಲೆ ಎಂಬುದೇನು? ನಾಳೆ ಮೈ ತೊಳೆದುಕೊಳ್ಳುವಾಗ ಹೇಗೂ ಬಿಡುವಿಯಲ್ಲ” ಎಂದೆ.

ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ

“ಅದು ಹೇಗೆ ಬರುತ್ತದೆ, ಈಗಲೇ ಬಿಡಬೇಕು.”

ಅದಕ್ಕೆ ನಾನು ಮಾತನಾಡಲಿಲ್ಲ. ಮನಸ್ಸಿಗೆ ಬಂದದ್ದು ಮಾಡಲೊಲ್ಲಳೇಕೆಂದು ಸುಮ್ಮನಿದ್ದೆ. ನಾಯಿಯನ್ನು ಬೆಚ್ಚಗೆ ಅದರ ಜಾಗದಲ್ಲಿ ಹೊಚ್ಚಿ ಮಲಗಿಸಿ ಹಾಸಿಗೆಯ ಮೇಲೆ ಅಡ್ಡಾಗಿ ಓದುತ್ತಲಿದ್ದೆ. ಅವಳು ಬೇರೆ ಸೀರೆಯನ್ನುಟ್ಟುಕೊಂಡು ನನ್ನ ಹತ್ತಿರ ಬಂದಳು. ಸೀರೆಯ ಚುಂಗು ಕೈಗೆ ತಾಗಿತು- ತಣ್ಣಗೆ ಹತ್ತಿತು. ಮುಟ್ಟಿ ನೋಡಿದೆ- ಒದ್ದೆಮುದ್ದೆ!!

ಮೇಲಕ್ಕೆದ್ದೆ. ಅವಳನ್ನು ನೋಡಿದೆ- ದಿಟ್ಟಿಸಿ ನೋಡಿದೆ- ಬಿರುಗಣ್ಣಿನಿಂದ ನೋಡಿದೆ… ಈಗ ಮಳೆಗಾಲ, ಹಿಡಿದ ಮಳೆ ಬಿಟ್ಟಿರಲಿಲ್ಲ. ಅವಳು ಮಲೆನಾಡಿನವಳು. ಜ್ವರ ತಲೆಸೂಲಿಗೆ ಅವಳಲ್ಲಿ ತುಂಬಾ ಆದರ. ಅವಳು ನೆಟ್ಟಗಿರುವುದೆಂದರೆ ಕಾಯಿಲೆ ಬಿದ್ದಂತೆ. ಈಗ 8-10 ದಿನಗಳಿಂದ ಕೆಮ್ಮು ಬೇರೆ. ಅದರಲ್ಲಿ ಇನ್ನೊಂದು ವಿಶೇಷ. ಅವಳ ಕೆಮ್ಮು ಎಲ್ಲರಿಗೆ ಬರುವಂತಹುದಲ್ಲ. ಅದು ಬಂದ ಸಲಕ್ಕೊಮ್ಮೆ ವಾಂತಿಯುಂಟಾಗಿ ರಂಭಾಟವಾಗುವುದೆ! ಇಷ್ಟಲ್ಲದೆ ಅವಳಿಗೆ ಈಗ ಮೂರು ತಿಂಗಳು. ನಾವು ಇದ್ದುದು ದೂರದೇಶ- ಇಬ್ಬರೇ, ಎಂದು ಈ ಮೊದಲೇ ಹೇಳಿದ್ದೇನೆ. ‘ನೀನು’ ಎಂದು ಮಾತನಾಡಿಸುವವರಿಲ್ಲದ ಅಂತಹ ದೇಶದಲ್ಲಿ ಒದ್ದೆಮುದ್ದೆಯಾದ ಸೀರೆಯನ್ನು ವಿಚಿತ್ರ ರೀತಿಯ ಮಡಿಯ ಕಲ್ಪನೆಯಂತೆ ಮೈಲಿಗೆ ಎಂದು ತಿಳಿದುಕೊಂಡು, ಬೆಳಕು ಹರಿಯುವವರೆಗೆ ಉಟ್ಟುಕೊಂಡಿರುವುದೆಂದರೆ!!!

ಒಳ್ಳೆ ಕೋಪ ಬಂತು. ಕೈ ಎತ್ತಿದೆ- ನಾನು ನಿಶ್ಚಯಕ್ಕೂ ಮೆಲ್ಲಗೆ ಒಂದು ಸಲ ಅವಳ ಗಲ್ಲವನ್ನು ಮುಟ್ಟಿಬಿಡಬೇಕೆಂದಿದ್ದೆ. ಆದರೆ ಅವಳ ಆ ಕಾಲಕ್ಕೆ ಮೋರೆ ಹೊರಳಿಸಿಬಿಟ್ಟಳೊ; ಮನದಲ್ಲಿದ್ದುದಕ್ಕಿಂತಲೂ ಕೈಗೆ ಬಲವನ್ನು ಹೆಚ್ಚಾಗಿ ಕೊಟ್ಟೆನೊ; ನಾನು ಲೆಕ್ಕ ಹಾಕಿ ಕೊಟ್ಟ ಬಲಕ್ಕಿಂತಲೂ ಎಷ್ಟೋ ಪಾಲು ಹೆಚ್ಚಾದ ಬಲವನ್ನು ನನಗೆ ತಿಳಿಯದಂತೆಯೇ ಕೈ ಪಡೆದುಕೊಂಡಿತ್ತೋ- ಪೆಟ್ಟೆಂದರೆ ಅರಿಯದಾ ಗಲ್ಲವು ಸ್ವಲ್ಪ ತಾಗುತ್ತಲೇ ಅಷ್ಟು ಬಣ್ಣವೇರಿಬಿಟ್ಟಿತೋ? ಕೆನ್ನೆಯಂತೂ ಕೆಂಪಾಯಿತು. ಐದು ಬೆಟ್ಟುಗಳೂ ಎದ್ದು ಕಾಣುವಂತೆ ಒಡೆದು ಮೂಡಿದವು; ಕನ್ನಂಬಾಡಿಯ ಕೆರೆಯೊಡೆದಂತೆ ಕಣ್ಣೀರ ಕೋಡಿ ಹರಿಯಿತೆಂದು ಬೇರೆ ಹೇಳಬೇಕಾದ್ದಿಲ್ಲ.

ಮುಂದೆ ಅವಳನ್ನು ಸಂತಯಿಸಿ ನಾರ್ಮಲ್ ಟೆಂಪರೇಚರ್(Normal Temperature)ಗೆ ತರಬೇಕಾದರೆ ಆ ರಾತ್ರಿಯೆಲ್ಲ ಹಿಡಿಯಿತು. ಹೋಗಲಿ ಮುಂದಿನ ವಿಷಯ. ಅಂತೂ ನಡೆದ ಸಂಗತಿ ಇದಿಷ್ಟು. ಪಕ್ಷಪಾತವಿಲ್ಲದೆ ನಡೆದದ್ದನ್ನು ನಡೆದಂತೆಯೇ ನಿಚ್ಚಳವಾಗಿ ಬಿಚ್ಚಿಟ್ಟಿದ್ದೇನೆ. ಪ್ರತಿವಾದಿಯ ಕಡೆಯ ಸ್ಟೇಟ್‌ಮೆಂಟನ್ನು ತೆಗೆದುಕೊಂಡರೂ ಇದರಲ್ಲಿ ಒಂದಕ್ಷರವೂ ಬದಲಾಗಲಾರದು. ಏನೋ ನನ್ನ ಹೆಸರು ಅವಳ ಬಾಯಿಯಿಂದ ಕೇಳಬೇಕು ಎಂದು ಆಸೆಯಾಯಿತು, ಕೇಳಿದೆ; ಅವಳು ಆಗಲೇ ಹೇಳಿಬಿಟ್ಟಿದ್ದರೆ ಇಷ್ಟೊಂದು ತಂಟೆಗೆ ಅವಕಾಶವೆಲ್ಲಿತ್ತು? ‘ತಪ್ಪಾರದು’? ತಾವೇ ಹೇಳಬೇಕು.

*

ವಿಶೂ ನಮ್ಮ ಅಣ್ಣನ ವರುಷದ ಮಗು. “ವಿಶೂ ಕಲಚನ್ನ ಹೇಗಿತ್ತೋ?” ಎಂದೆ. ‘ಚೀ’ ಅಂದ. ‘ಚಟ್ನೀ’ ಅಂದೆ. ‘ಚೀ’ ಅಂದ. ಅಂದರೆ ನಮ್ಮ ಮನೆಯಲ್ಲಿ ಮೆಣಸಿನಕಾಯಿ ಚಟ್ನಿಯ ಬದಲು ಬೆಲ್ಲದ ಚಟ್ನಿ ಮಾಡುವೆನೆಂದು ತಿಳಿಯಬೇಡಿರಿ. ಮಕ್ಕಳ ಸ್ವಭಾವವೇ ಹಾಗೆ. ತಿಂದುದನ್ನೆಲ್ಲಾ ‘ಚೀ’ ಎಂದು ಹೇಳುವುದು. ನಿಶ್ಚಯಕ್ಕೂ ಚಿಕ್ಕ ಮಕ್ಕಳು, ಭಾವನೆಯಲ್ಲಿ ಸಮರಸವನ್ನು ಹೊಂದಿದ ಜೀವನ್ಮುಕ್ತ ಸಹಜ ಯೋಗಿಗಳು- ಅವರಿಗೆ ಎಲ್ಲವೂ ಅಮೃತಮಯ.

    ಬುದ್ಧಿ ಬಲಿತ ಹಾಗೆಲ್ಲಾ, ವಿಶ್ವವನ್ನೆ ವ್ಯಾಪಿಸಿದ ನನ್ನ ವಿಶಾಲ ಭಾವನೆ, ಬೆಲ್ಲದಲ್ಲಷ್ಟೇ ಬೆರೆತುಕೊಂಡಿತು. ಹೊರಗೆ ಎಲ್ಲಿ ಹೋಗಿದ್ದರೂ ಅವ್ವ ಸಾರಿಗೆ ಬೆಲ್ಲ ಹಾಕುವ ಹೊತ್ತಿಗೆ ತಪ್ಪದೆ ಇರುತ್ತಿದ್ದೆನಂತೆ. ನನ್ನ ಕಣ್ಣು ತಪ್ಪಿಸಿ ಬೆಲ್ಲ ಕಾಯ್ದುಕೊಳ್ಳಬೇಕಾದರೆ ಅವ್ವನಿಗೆ ಒಂದು ಕೃತಾವಸ್ಥೆಯಾಗುತ್ತಿತ್ತು. ಅವನನ್ನು ಯಾವಾಗಲೂ ನವರಾತ್ರಿ ಎಂದೆ? ಮಣ್ಣೆತ್ತಿನ ಅಮಾಸಿ ಎಂದೆ? ಎಂದು ಪೀಡಿಸುತ್ತಿದ್ದೆನಂತೆ. ಈಗಲೂ ಹಾಗೇ ಎಂದರೆ ನೀವು ನಕ್ಕುಬಿಡಬಹುದು. ಆಗ ಬಾಯಿ ಬಿಟ್ಟು ಕೇಳುತ್ತಿದ್ದೆ, ಈಗ ಮನದಲ್ಲಿಯೆ ಬಚ್ಚಿಟ್ಟುಕೊಂಡಿರುತ್ತೇನೆ, ಅಂತೂ ಇದ್ದುದೇನೋ ನಿಜ. ಈಗ ಮನೆಯಲ್ಲಿ ವಾರಕ್ಕೆ ಇದಿಷ್ಟೆಂದು ಬೆಲ್ಲವೆಂದು ತಂದರೆ ಎರಡು ದಿವಸದಲ್ಲಿಯೇ, ತೀರಿಹೋಗುತ್ತದೆ. ಆಮೇಲೆ ಇನ್ನುಳಿದಷ್ಟು ದಿನ ಬೆಲ್ಲವಿಲ್ಲದೆ ಇರುವುದೂ ಕಷ್ಟ. ಮತ್ತೆ ತರುವುದೂ ಕಷ್ಟ. ಹೀಗಾಗಿ ಬೇಸತ್ತು ಈಗ ಪ್ರತಿ ದಿವಸ ಒಂದು ಬಿಲ್ಲಿಯ ಬೆಲ್ಲ ತರುವುದು ಎಂದು ಗೊತ್ತುಮಾಡಿಬಿಟ್ಟಿದ್ದೇನೆ. ‘ಸೀ’ ನನಗೆ ಇಷ್ಟೊಂದು ಬೇಕಾಗಿದ್ದರೂ ನಾಲ್ಕಾರು ಕರಗಡಬು ತಿನ್ನುತ್ತಲೆ ಬಾಯಿಯೆ ಕಟ್ಟಿಹೋಗಬೇಕೆ? ಆಗ ಏನಾದರೂ ನಂಜಿಕೊಂಡು ಹೊಸಬಾಯಿ ಮಾಡಿಕೊಳ್ಳದಿದ್ದರೆ ಮುಂದೆ ಒಂದು ತುತ್ತನ್ನೂ ಬಾಯಿಯಲ್ಲಿಕ್ಕುವುದು ಸಾಧ್ಯವಿಲ್ಲ. ಉಪ್ಪಿನಕಾಯಿ ಮಾವಿನಕಾಯಿಯದು, ನಿಂಬೇಕಾಯಿಯದು, ಅಥವಾ ಹಸಿಮೆಣಸಿನಕಾಯಿ, ಚಟ್ನಿ, ರಸ, ಏನಾದರೂ ಬೇಕು ಎಂದರೆ ನಾಲಗೆಯು ಚೆನ್ನಾಗಿ ಮಸೆದು ಹದವಾಗುವುದು. ಆಗ ನಾಲ್ಕು ಅಲ್ಲ ಎಂಟು ಕಡುಬುಗಳನ್ನಾದರೂ ಹಗುರಾಗಿ ತೆಗೆದುಕೊಂಡು ಬಿಡಬಹುದು.

    ಹಾಗೇ… ನಾವಿಬ್ಬರೂ ಇಲ್ಲಿಯವರೆಗೆ ಎಷ್ಟೊಂದು ಅನ್ಯೋನ್ಯವಾಗಿದ್ದೆವು. ಒಂದು ದಿನವಾದರೂ ಒಬ್ಬರು ಮುನಿಸುಗೊಂಡುದಿಲ್ಲ. ಆದರೆ ನಡುವಿನಲ್ಲಿ ಇದು ಹೇಗೋ ಬಂದು ಶಿವನ ಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಎಲ್ಲವನ್ನೂ ಕುಲಕುಮಲಕು ಮಾಡಿಬಿಟ್ಟಿತು. ಅಂದಿನ ಪರಿಸ್ಥಿತಿಯನ್ನು ನೋಡಲಾಗಿ ಕಡೆಯವರೆಗೆ ಬಾಳುವೆಯೆ ಎಲ್ಲಿ ಕದಡಿಹೋಗುವುದೋ ಎಂದು ಬೆದರಿಕೊಂಡಿದ್ದೆ. ದೇವರ ದಯೆಯಿಂದ ಹಾಗೇನೂ ಆಗಲಿಲ್ಲ. ”I thought it to be death but it was love” ಎಂದು ಶ್ರೀಮತಿ ಬ್ರೌನಿಂಗಳು (Mrs. Browning) ಎಂದ ಹಾಗೆ ವೈರಿಯಾಗಿ ಬಂದಿದೆ ಎಂದು ಬಗೆದ ಮನಸ್ತಾಪವು ನಮಗೆ ಎಣೆಯಿಲ್ಲದಷ್ಟು ಹಿತವನ್ನು ಮಾಡಿ ನಮ್ಮನಲುಮೆಯ ನಾಲಿಗೆಯನ್ನು ಮಸೆದು ಹೊಸಬಾಯಿ ಮಾಡಿತು.

    ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

    ಇದೆಲ್ಲ ನಡೆದಂದಿನಿಂದ ಅವಳನ್ನು ಕಂಡರೆ, ಹಿಂದೆಂದೂ ಎನಿಸದ ವಿಚಿತ್ರ ಪ್ರೀತಿಯೋ, ಮೋಹವೋ, ಆಕರ್ಷಣೆಯೋ, ಏನೋ ಎನಿಸುತ್ತದೆ. ಹೇಳಲಿಕ್ಕೆ ಬಾರದು. ಅವಳಿಲ್ಲದ ಒಂದು ಗಳಿಗೆ ಒಂದು ಯುಗವೆಂದು ನಾನು ಹೇಳಿದರೆ, ‘ಕವಿಕಲ್ಪನೆ’ ಎಂದು ನೀವು ಅಂದುಬಿಡಬಹುದೆಂದು ನಾನು ಹಾಗೆ ಅನ್ನುವುದಿಲ್ಲವಷ್ಟೇ!

    ಮರುದಿನವೆ ಒಂದು ಪತ್ತಲವನ್ನು ಕೊಂಡು ತಂದೆ. ಒಂದು ಜರದ ಪೋಲಕವನ್ನು ಹೊಲಿಸಿಕೊಂಡು ಬಂದೆ; ತರುತ್ತಲೇ ಅವನ್ನು ಅವಳು ತೊಟ್ಟುಕೊಂಡಳು.

    ”ನಿಮ್ಮದೇವರ ಮುಂದೆಯೂ ಇಡಲಿಲ್ಲ. ಅರಿಶಿಣ ಕುಂಕುಮವನ್ನೂ ಏರಿಸಲಿಲ್ಲ. ಉಟ್ಟು ಕೊಂಡುಬಿಟ್ಟೆಯಲ್ಲ!” ಅವಳು ಒಮ್ಮೆಲೆ ಬೆಚ್ಚಿದವಳಂತೆ “ಮೊದಲು ತೊಟ್ಟುಕೊಂಡೇ, ಆಮೇಲೆ ಎಲ್ಲವನ್ನೂ ದೇವರಿಗೆ ಅರ್ಪಿಸುವುದು.”

    hosaba 03

    ನನಗೆ ಅರ್ಥವಾಗಲಿಲ್ಲ.

    ಅವಳನ್ನೇ ದಿಟ್ಟಿಸಿ ನೋಡುತ್ತಲಿದ್ದೆ- ಜಗತ್ತಿಗೆ ಹೊಸ ಜೀವಿಯೊಂದನ್ನು ತರುವುದಕ್ಕಾಗಿ ತಳೆದ ಪುಷ್ಟವಾದ ದೇಹವನ್ನೂ, ಸರ್ವಾಂಗವನ್ನು ತುಂಬಿ ತುಂಬಿ ಸೂಸಿ ಹೊರಸೂಸಿ ಬರುತ್ತಲಿರುವ ಮಿಸುನಿಯ ಮಿರುಗನ್ನೂ, ಹೃದಯವನ್ನು ಆದರಿಸುವ ಮನೋಹರವಾದ ಮೋರೆಯ ಕಾಂತಿಯನ್ನೂ, ತುಂಬಿದ ದೇಹಕ್ಕೆ ಒಪ್ಪುವಂತಿರುವ ಪೋಲಕ, ಗುಲಾಬಿ ಪತ್ತಲವನ್ನೂ ಹುಚ್ಚನಂತೆ ನೋಡುತ್ತಾ ನಿಂತುಬಿಟ್ಟೆ.

    ಉಟ್ಟಾಯಿತು, ತೊಟ್ಟಾಯಿತು, ಮುಗುಳುನಗೆಯೊಡನೆ ನನ್ನ ಕಡೆ ನೋಡಿದಳು. ನಾನೊಂದು ಹುಚ್ಚು ನಗೆ ನಕ್ಕೆ. ಅವಳು ಓಡಿ ಬಂದು ನನ್ನನ್ನು ಬಿಗಿಯಾಗಿ ಅಪ್ಪಿಬಿಟ್ಟಳು.

    “ದೇವರಿಗೆ ಅರ್ಪಣೆ.”

    (ಕೃಪೆ: ಮಲ್ಲಿಗೆ ಮಾಸಪತ್ರಿಕೆ. ‘ಸಂಪಿಗೆ’, ಕುಲಕರ್ಣಿ ಶ್ರೀನಿವಾಸ, ಸಾಧನಕೇರಿ, ಧಾರವಾಡ; 1933)

    ***

    ಕುಲಕರ್ಣಿ ಶ್ರೀನಿವಾಸರ ‘ಹೊಸಬಾಯಿ’

    ದಿ. ಶ್ರೀನಿವಾಸ ಕುಲಕರ್ಣಿಯವರು (ಕುಲಕರ್ಣಿ ಶ್ರೀನಿವಾಸ ಕೊನ್ಹೇರ 1911-1971) ನಾಟ್ಯಾಚಾರ್ಯರೆಂದೇ ನಮ್ಮ ನಾಡಿನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಪಂಡಿತ ತಾರಾನಾಥರು ಆರಂಭಿಸಿದ್ದ “ಪ್ರೇಮ” ಪತ್ರಿಕೆಯನ್ನು ಧಾರವಾಡಕ್ಕೆ ತಂದು, ಅದಕ್ಕೆ ಹೊಸ ರೂಪ ಕೊಟ್ಟು ಸ್ವತಃ ಸಂಪಾದಕರಾಗಿ ಕೆಲವು ವರ್ಷ ಪತ್ರಿಕೆಯನ್ನು ನಡೆಸಿದರು. ಅವರು ಬರೆದದ್ದು ಬಹಳ ಕಡಿಮೆ. “ಸಂಪಿಗೆ” (1933) ಎಂಬುದೊಂದು ಆರು ಬರೆಹಗಳ ಚಿಕ್ಕ ಸಂಕಲನ ಮಾತ್ರ ಬಹಳ ಹಿಂದೆಯೇ ಪ್ರಕಟವಾಗಿದೆ. ಇವುಗಳ ಜೊತೆಗೆ ‘ನಮ್ಮ ನಾಟಕ’ ಎಂಬ ಸಣ್ಣ ಕತೆಯೊಂದು ಪ್ರತ್ಯೇಕ ಪುಸ್ತಿಕೆಯಾಗಿ ಬಂದಿದೆ. ‘ತಾನು ಪಾಪಿ’ ಎಂಬ ಇನ್ನೊಂದು ಕತೆ ಅವರೇ ಸಂಪಾದಿಸಿರುವ “ಹತ್ತು ಕತೆಗಳು” (1937) ಸಂಕಲನದಲ್ಲಿದೆ.

    ‘ಸಂಪಿಗೆ’ಯ ಬರೆಹಗಳೆಲ್ಲ ‘ಪ್ರಣಯದ ಹುಚ್ಚಾಟಗಳು’ ಎಂದು ಲೇಖಕರೇ ಕರೆದಿದ್ದಾರೆ. ಇವುಗಳನ್ನೆಲ್ಲ ಸಣ್ಣಕತೆಗಳೆಂದು ಕರೆಯಲಿಕ್ಕಾಗುವುದಿಲ್ಲ. ರಾಗಿಣೀ ದೇವಿಯನ್ನು ಕುರಿತ ಕೊನೆಯ ಬರೆಹ ಒಂದು ವ್ಯಕ್ತಿಚಿತ್ರವಾಗಿದ್ದು ಸಂಕಲನದ ಉಳಿದ ಬರೆಹಗಳೊಂದಿಗೆ ಹೊಂದುವದಿಲ್ಲ. ಆದರೆ ಉಳಿದ ಐದು ಬರೆಹಗಳು ಸಣ್ಣಕತೆ, ಲಲಿತ ಪ್ರಬಂಧಗಳ ಹಿತಮಿತವಾದ ಮಿಶ್ರಣಗಳಾಗಿವೆ. ಇವುಗಳಲ್ಲಿ ಸಣ್ಣಕತೆಗಳ ಕಥಾ ಸರಣಿಯನ್ನೂ, ಲಲಿತ ಪ್ರಬಂಧಗಳ ಲಾಲಿತ್ಯ ಸ್ವಚ್ಛಂದತೆಗಳನ್ನೂ ಕೂಡಿಯೇ ಸವಿಯಬಹುದಾಗಿದೆ. ಇವುಗಳಲ್ಲಿ ‘ಸಂಪಿಗೆ’, ‘ಒಂದೇ ಬಿಲ್ಲಿ’, ‘ತಲೆಸೂಲಿ’ಗಳಲ್ಲಿ ಲಲಿತ ಪ್ರಬಂಧದ ಅಂಶಗಳೇ ಹೆಚ್ಚಾಗಿವೆ. ‘ಹೊಸಬಾಯಿ’, ‘ಅವಳ ಕಾಗದ’ಗಳಲ್ಲಿ ಸಣ್ಣಕತೆಯ ಅಂಶಗಳು ಪ್ರಧಾನವಾಗಿವೆ.

    ಇಲ್ಲಿಯ ಬರೆಹಗಳೆಲ್ಲ ಮದುವೆಯಾದ ಹೊಸದರಲ್ಲಿಯ ತರುಣ ದಂಪತಿಗಳ ಪ್ರಣಯ ಚಿತ್ರಗಳಾಗಿದ್ದು, ತಮ್ಮ ಹಿತಮಿತವಾದ ವಿನೋದದಿಂದ, ಸದಭಿರುಚಿಯಿಂದ ಮೃದುವಾದ ಸರಳ ಬರವಣಿಗೆಯಿಂದ ಆಕರ್ಷಿಸುತ್ತವೆ. ಅಲ್ಲದೆ ಆ ಪ್ರಣಯದ ಚಿತ್ರಗಳು ನಿರುದ್ದಿಶ್ಯ ವಿನೋದಕ್ಕಾಗಿ ಮಾತ್ರ ಹುಟ್ಟಿರದೆ, ಬದುಕಿನ ತಾತ್ವಿಕ ನೆಲೆಗಳನ್ನೂ ಶೋಧಿಸುವ ಕೆಲಸ ಮಾಡುವದರಿಂದ ಹೆಚ್ಚು ಮಹತ್ವದವಾಗಿದೆ. ಆಗಾಗ ನಂತರದ ಎ.ಎನ್. ಮೂರ್ತಿರಾಯರ ಲಲಿತ ಪ್ರಬಂಧಗಳನ್ನು ಇವು ನೆನಪಿಗೆ ತರುತ್ತವೆ.

    ‘ಹೊಸಬಾಯಿ’ಯಲ್ಲಿ ಕುಲಕರ್ಣಿಯವರ ಬರವಣಿಗೆಯ ಈ ಎಲ್ಲಾ ಗುಣಗಳೂ ಒಡೆದು ಕಾಣುವಂತೆ ಪ್ರಕಟವಾಗಿವೆ. ಇದರಲ್ಲಿ ಲಲಿತ ಪ್ರಬಂಧದ ಅಂಶಗಳು ಇದ್ದರೂ ಅವನ್ನು ಜೀರ್ಣಿಸಿಕೊಂಡು ಸಣ್ಣಕತೆಯ ಅಂಶಗಳು ಹೆಚ್ಚು ಗಟ್ಟಿಯಾಗಿ ಬಂದಿವೆ. ಇದರ ವಸ್ತುವೂ ಕೂಡ ಪ್ರಣಯ ವಿನೋದವೇ. ಆದರೆ, ಗಂಡ-ಹೆಂಡಿರ ನಡುವೆ ನಡೆಯುವ ಸಣ್ಣದೊಂದು ಪ್ರಸಂಗ ಸ್ವಲ್ಪ ದೀರ್ಘಕ್ಕೇ ಹೋಗಿಬಿಡುತ್ತದೆ. ಇಲ್ಲಿ ಆರಂಭದಲ್ಲಿ ಬರುವ ಗಂಡ-ಹೆಂಡತಿಯರ ನಡುವಿನ ಹುಸಿ ಜಗಳ ಕಥೆಯ ವಸ್ತುವಿಗೆ ಪೀಠಿಕೆ ಹಾಕುತ್ತದೆ. ಈ ಜಗಳದ ನಂತರದ ರಾಜಿಗೆ ಕಾರಣವಾಗುವ ನಾಯಿಕುನ್ನಿಯೇ ಮುಂದಿನ ಗಂಭೀರ ಪ್ರಸಂಗಕ್ಕೂ ಕಾರಣವಾಗುವುದು ಕಥೆಯ ಸಂವಿಧಾನದ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ನಾಯಿಯಿಂದಾಗಿ ಮೈಲಿಗೆಯಾಯಿತೆಂದು ಉಟ್ಟ ಸೀರೆಯನ್ನು ಬದಲಿಸಿ, ಬೇರೆ ಸೀರೆ ಇಲ್ಲದ್ದಕ್ಕಾಗಿ ಹಸಿ ಸೀರೆಯನ್ನೇ ಉಟ್ಟುಕೊಂಡು ಬಂದ ಹೆಂಡತಿಯನ್ನು ನೋಡಿ ಅವಳ ಮಡಿ ಮೈಲಿಗೆಯ ಹುಚ್ಚು ಕಲ್ಪನೆಯಿಂದಾಗಿ ಸಿಟ್ಟಿಗೆದ್ದ ಗಂಡ ಅವಳ ಕಪಾಳಕ್ಕೆ ಹೊಡೆಯುವುದು ಕೂಡ ನಿಜವಾಗಿಯೂ ವಿರಸದ ಪ್ರಸಂಗವೇನೂ ಅಲ್ಲ. ಬಸುರಿಯಾದ ಹೆಂಡತಿಯ ಆರೋಗ್ಯದ ಬಗೆಗಿನ ತೀವ್ರ ಕಾಳಜಿಯ, ಅವಳ ಮೇಲಿನ ನಿಜವಾದ ಪ್ರೀತಿಯ ಅಭಿವ್ಯಕ್ತಿಯೇ ಅದು. ಆದರೂ ಅವಳ ದುಃಖದ ಮುಂದೆ ಅವನ ಪಶ್ಚಾತ್ತಾಪದಲ್ಲಿ ಗಂಡ-ಹೆಂಡತಿಯ ನಡುವಿನ ಸಂಬಂಧದ ಶೋಧ ನಡೆದು, ಕತೆ ಕೇವಲ ವಿನೋದದ ಮಟ್ಟವನ್ನು ದಾಟಿ ಗಂಭೀರ ಆಶಯಗಳನ್ನು ಒಳಗೊಳ್ಳಲು ಪ್ರಯತ್ನಿಸುತ್ತದೆ. ಈ ಸೀರೆಯ ಪ್ರಸಂಗ ಮರುದಿನದ ಹೊಸ ಸೀರೆಯ ಪ್ರಸಂಗಕ್ಕೆ ದಾರಿಮಾಡಿಕೊಡುವದು ಕತೆಯ ಸೇಂದ್ರಿಯ ಸಂವಿಧಾನಕ್ಕೆ ಇನ್ನೊಂದು ಉದಾಹರಣೆ.

    ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ

    ಕತೆಯ ಕೊನೆಯ ವಾಕ್ಯದಲ್ಲಿ ಚಮತ್ಕಾರವೇನೋ ಇದೆ. ಆದರೆ ಇಲ್ಲಿ ದೇವರ ಉಲ್ಲೇಖ ಸ್ವಲ್ಪ ಹೆಚ್ಚಾಯಿತೇನೋ ಅನಿಸುತ್ತದೆ. ಆದರೂ ಅಂಥಾ ಮಡಿಮೈಲಿಗೆಯ ಹೆಣ್ಣಿಗೆ, ಕತೆಯಲ್ಲಿ ವರ್ಣಿತವಾಗಿರುವ ಅವಳ ವ್ಯಕ್ತಿತ್ವಕ್ಕೆ ಅದು ಹೊರತಾದುದೆಂದೇನೂ ಅನಿಸುವದಿಲ್ಲ. ಹೀಗೆ ಆ ಒಂದು ಕ್ಷಣದ ವಿರಸವೇ ಅವರ ನಡುವಿದ್ದ ನಿಜವಾದ ನಿರಂತರ ಪ್ರೀತಿಯನ್ನು ಇನ್ನಷ್ಟು ತೀವ್ರವಾಗಿಸುತ್ತದೆ, ಗಟ್ಟಿಗೊಳಿಸುತ್ತದೆ.

    ಕತೆಯಲ್ಲಿ ಲಲಿತ ಪ್ರಬಂಧಗಳಲ್ಲಿರುವಂತೆ ಅಲ್ಲಲ್ಲಿ ಒಂದೆರಡು ಹೊರಬೆಳವಣಿಗೆಗಳೂ ಬಂದಿವೆ. ಒಂದು, ಮಡಿಯ ವಿಚಾರ; ಇನ್ನೊಂದು, ಸಿಹಿ ಊಟದಲ್ಲಿ ನಂಜಿಕೊಳ್ಳಲು ಬೇಕಾದ ಉಪ್ಪಿನಕಾಯಿಯದು. ಆದರೆ ಕತೆಯ ಬೆಳವಣಿಗೆಯಲ್ಲಿ ಇವೆರಡೂ ಚೆನ್ನಾಗಿ ಸೇರಿಕೊಂಡು ಕತೆಯ ಅರ್ಥಕ್ಕೆ ಪುಷ್ಟಿಯನ್ನು ಕೊಟ್ಟಿವೆ. ಮಡಿಯ ಪ್ರಸಂಗ ಹೆಂಡತಿಯ ಮಡಿಯ ಕಲ್ಪನೆಯನ್ನು ವಿನೋದಕ್ಕೊಡ್ಡುವದಷ್ಟೇ ಅಲ್ಲ, ಮುಂದೆ ಹೆಂಡತಿ ಮಡಿಯನ್ನೇ ಅತಿರೇಕಕ್ಕೊಯ್ದು ಸೀರೆ ಇಲ್ಲದಿದ್ದರೂ ಹಸಿ ಸೀರೆಯನ್ನೇ ಉಟ್ಟುಕೊಂಡು ಬಂದಾಗ ಇಂಥ ಹಾಸ್ಯಾಸ್ಪದ ನಡತೆಯಿಂದಾಗಿ ಗಂಡನಿಗೆ ಸಿಟ್ಟು ತರಿಸುವ ಕಾರಣವಾಗುತ್ತದೆ. ಉಪ್ಪಿನಕಾಯಿಯ ಪ್ರಸಂಗ ಅಗತ್ಯಕ್ಕಿಂತ ಸ್ವಲ್ಪ ಉದ್ದವಾಗಿದ್ದರೂ, ‘ಹೊಸಬಾಯಿ’ಯ ಕೇಂದ್ರ ಪ್ರತಿಮೆಯನ್ನು ಪರಿಚಯ ಮಾಡಿಸುತ್ತದೆ. ಕೊನೆಯಲ್ಲಿ ಈ ಪ್ರತಿಮೆಯೇ ಇಡೀ ಕತೆಯ ಅರ್ಥವನ್ನು ಹೇಳುವಂತೆ ಮಾಡಲಾಗಿದೆ. ಈ ಪ್ರತಿಮೆ ಕೇವಲ ದಾಂಪತ್ಯಜೀವನದಲ್ಲಿಯ ಪ್ರೀತಿಯ ಬಗೆಗಷ್ಟೇ ಅಲ್ಲದೆ, ಒಟ್ಟು ಜೀವನದಲ್ಲಿ ಅವಶ್ಯವಾದ ಅನುಭವದ ವೈವಿಧ್ಯದ ಬಗೆಗೂ ಭಾಷ್ಯವಾಗುತ್ತದೆ. ಜೀವನದಲ್ಲಿ ಕೇವಲ ಸಿಹಿ, ಪ್ರೀತಿ, ಸುಖಗಳಷ್ಟೇ ಇದ್ದರೆ ಸ್ವಾರಸ್ಯವಿಲ್ಲ; ಇವುಗಳ ರುಚಿಯನ್ನು ಹೆಚ್ಚಿಸಲು ಆಗಾಗ ಖಾರ, ವಿರಸ, ದುಃಖಗಳೂ ಬೇಕು; ಆದರೆ ಇವೇ ದೊಡ್ಡವಾಗಿ ಬದುಕನ್ನೇ ನುಂಗಬಾರದು, ಅಷ್ಟೇ. ಇದು ಕತೆಯ ನೀತಿ ಎಂದು ಕತೆಯೇ ವಾಚ್ಯವಾಗಿ ವಿವರಿಸಿದ್ದರೂ, ಇದು ಕತೆಯ ಒಟ್ಟಿನ ಲವಲವಿಕೆಯನ್ನು ಕೆಡಿಸಿಲ್ಲ ಎಂಬುದು ಮಹತ್ವದ್ದಾಗಿದೆ.

    ಈ ಕತೆ ಅ.ನ.ಕೃ. ಅವರು ಸಂಪಾದಿಸಿರುವ “ಕಾಮನ ಬಿಲ್ಲು”(1933)ವಿನಲ್ಲಿ ಸ್ಥಾನ ಪಡೆದಿದೆ. ಆದರೆ ಅಲ್ಲಿ ಸಂಪಾದಕರು ಕತೆಗಾರರ ಬಗ್ಗೆ ವ್ಯಕ್ತಪಡಿಸಿರುವ ಭರವಸೆಯನ್ನು ಕುಲಕರ್ಣಿಯವರು ಈಡೇರಿಸಲಿಲ್ಲ. ಅನಂತರ ಅವರು ಬರೆಯುವದನ್ನೇ ಬಿಟ್ಟರೆಂದು ಕಾಣುತ್ತದೆ. ಹೀಗಾಗಿ ಬೇರೆ ಇತಿಹಾಸ, ಸಮೀಕ್ಷೆಗಳಲ್ಲೆಲ್ಲೂ ಅವರ ಹೆಸರಿನ ಪ್ರಸ್ತಾಪ ಬಂದಿಲ್ಲ.

    (ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)

    eedina
    ಈ ದಿನ ಡೆಸ್ಕ್‌
    Website |  + posts

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

    ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

    ದೇವುಡು ಅವರ ಕತೆ | ಮೂರು ಕನಸು

    ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

    ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

    ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

    ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

    ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

    Download Eedina App Android / iOS

    X