ಗೋಮಾಳ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಭೂಹೀನರ ಅರ್ಜಿಗಳು ತಿರಸ್ಕರಿಸಲಾಗಿದೆ. ತಕ್ಷಣ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಪಟ್ಟಾ ನೀಡಬೇಕೆಂದು ಭೂಮಿ ವಸತಿ ಹಕ್ಕು ವಂಚಿತರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಬಹುತೇಕರು ಭೂರಹಿತರೇ ಆಗಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರುಗಳಿಗೆ ಸಾಮಾಜಿಕ ನ್ಯಾಯವಾಗಿ ಭೂಮಿ ಮಂಜೂರಾತಿ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡ ಮಾರೆಪ್ಪ ಹರವಿ, “ರಾಜ್ಯದ ಹಲವು ಭಾಗಗಲ್ಲಿ ಜನರು ಸಾಗುವಳಿ ಮಾಡುವ ಭೂಮಿಗಳನ್ನೇ ಸರ್ಕಾರ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ, ಗಣಿಗಾರಿಕೆಗೆ ಸೇರಿದಂತೆ ಇನ್ನಿತರೆ ಕಂಪನಿಗಳಿಗೆ ಗುತ್ತಿಗೆ ಅಥವಾ ಮಾರಾಟ ಮಾಡಿರುವ ಉದಾಹರಣೆಗಳಿವೆ. ಆದರೆ ಸಾಗುವಳಿ ಮಾಡುತ್ತಿರುವ ಬಡವರಿಗೆ ಭೂಮಿ ಕೊಡುವುದಕ್ಕೆ ಕಾನೂನಿನ ಅಡ್ಡಿಯೇಕೆ?” ಎಂದು ಪ್ರಶ್ನಿಸಿದರು.
“ಹಿಂದೆ ಇದ್ದ ಬಿಜೆಪಿ ಸರ್ಕಾರ ಭೂಮಿ ಮಂಜೂರು ಮಾಡದೆ ರೈತರನ್ನು ಒಕ್ಕಲೆಬ್ಬಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಜನ ವಿರೋಧಿ ಚಟುವಟಿಕೆ ಮಾಡುತ್ತಿದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ತಕ್ಷಣ ಭೂಮಿ ಮಂಜೂರು ಮಾಡಬೇಕು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ (ಹಕ್ಕುಪತ್ರ) ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾಠ ಕಲಿಸಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಮತ್ತೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಬಂಧನ
ಈ ವೇಳೆ ಆಂಜನೇಯ ಕುರುಬದೊಡ್ಡಿ, ಹನುಮಂತ ಜೋಗಿ, ಬಂಗಾರಿ ಗುಂಜಳ್ಳಿ , ಶ್ರೀನಿವಾಸ್ ಕೊಪ್ಪರ ಸೇರಿದಂತೆ ಹಲವು ಮಂದಿ ರೈತರು ಇದ್ದರು.
