ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್‌ಗೆ ಇ.ಡಿ ಸಮನ್ಸ್‌ಗೆ ನೀಡಿದ್ದ ತಡೆಯಾಜ್ಞೆ ವಿಸ್ತರಣೆಯಾಗಿದೆ.
ಇ.ಡಿ ನೀಡಿರುವ ಸಮನ್ಸ್ ರದ್ದುಕೋರಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಹೀಗಾಗಿ ಫೆ.20ರವರೆಗೆ ಇ.ಡಿ ಸಮನ್ಸ್‌ಗೆ ತಡೆಯಾಜ್ಞೆ ವಿಸ್ತರಣೆಯಾಗಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು 10 ದಿನಗಳ ಕಾಲ ಸಿಎಂ ಪತ್ನಿ ಮತ್ತು ಬೈರತಿ ಸುರೇಶ್ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಆದೇಶ ಪ್ರಕಟಿಸಿದರು.
ಫೆಬ್ರವರಿ 20ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದ್ದು ಅಲ್ಲಿಯವರೆಗೆ ಇಬ್ಬರಿಗೂ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
ಇ.ಡಿ ಬೆಂಗಳೂರು ವಲಯ ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕೃಷ್ಣನ್ ಅವರು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಿದ್ದರು. ಇ.ಡಿ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇ.ಡಿ ಪರ ಹೆ್ಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿದ್ದು, ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದಾಗ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಇದ್ದು, ಆರೋಪಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ನಿಯಮವಿಲ್ಲ ಎಂದರು.
ಸಚಿವ ಭೈರತಿ ಸುರೇಶ್ ಪರ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದರು ಇ.ಡಿ ತನಿಖಾಧಿಕಾರಿಗಳು ನಮೂನೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಭೈರತಿ ಕುಟುಂಬದವರು, ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆ. 14 ನಿವೇಶನ ಹಂಚಿಕೆಗೂ ಭೈರತಿ ಸುರೇಶ್‌ಗೂ ಸಂಬಂಧವಿಲ್ಲ. ಮುಡಾದಲ್ಲಿ ಭೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ. ಹೀಗಾಗಿ ಇ.ಡಿ ಸಮನ್ಸ್ ಕಾನೂನುಬಾಹಿರವೆಂದು ಮನವಿ ಮಾಡಿದರು.
