ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಸಂಕಷ್ಟದಲ್ಲಿದೆ. ಪಕ್ಷವು ಭವಿಷ್ಯ ಕಳೆದುಕೊಳ್ಳುತ್ತಿದೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಆವಾಗ ಬೇಕಿದ್ದರೂ ಪತನಗೊಳ್ಳಬಹುದು ಎಂದು ಬಿಜೆಪಿ ಮಾಜಿ ಸಂಸದ, ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ನಿಪಾನಿಯಾದಲ್ಲಿ ಮಾತನಾಡಿದ ಸಿಂಗ್, “ಅರವಿಂದ್ ಕೇಜ್ರಿವಾಲ್ ಇನ್ನು ಮುಂದೆ ಯಾವುದೇ ಚುನಾವಣೆಯನ್ನು ಗೆಲ್ಲುವುದಿಲ್ಲ” ಎಂದು ಹೇಳಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ಹಿಂದಿನ ಕೇಂದ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸಂಸದರಾಗಿದ್ದರು. ಕುಸ್ತಿ ಫೆಡರೇಷನ್‌ನ ಅಧ್ಯಕ್ಷರೂ ಆಗಿದ್ದರು. ಅವರು ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ 2023ರಲ್ಲಿ ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದರು.
ಅವರ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಮುಂದಾಗಿದ್ದರು. ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ, ದಾಳಿಗಳು ನಡೆದಿದ್ದವು. ಆದಾಗ್ಯೂ, ಕುಸ್ತಿಪಟುಗಳು ಹೋರಾಟ ಮುಂದುವರೆಸಿದ್ದರು. ಅವರ ಹೋರಾಟಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತಪವಾಗಿತ್ತು. ಪರಿಣಾಮ, ಆರೋಪಿ ಬ್ರಿಜ್ ಭೂಷಣ್ ಸಿಂಗ್ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಕಳೆದ ವಾರ ದೆಹಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಒಟ್ಟು 70 ಸ್ಥಾನಗಳ ಪೈಕಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು, ಸರ್ಕಾರ ರಚಿಸಲು ಮುಂದಾಗಿದೆ. ಎಎಪಿ 22 ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಅಧಿಕಾರ ಕಳೆದುಕೊಂಡಿದೆ.