ಸರ್ಕಾರದಿಂದ ಅನುದಾನ ಬರುತ್ತಿಲ್ಲ ಎನ್ನುವ ಕುಂಟು ನೆಪವೊಡ್ಡಿ ವಿಶೇಷ ಚೇತನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರನ್ನು ಹಾವೇರಿಯ ವಸತಿನಿಲಯವೊಂದು ಹೊರಹಾಕಿದೆ.
ಪಟ್ಟಣದ ಬಸವೇಶ್ವರ ನಗರದಲ್ಲಿ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಿಂದ ಶ್ರೀ ಕಲ್ಮೇಶ್ವರ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ ಕಾರ್ಯ ನಿರ್ವಹಿಸುತ್ತಿತ್ತು. ವಿಶೇಷ ಚೇತನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಶಿಕ್ಷಣ ಪಡೆದು, ಉನ್ನತ ಸ್ಥಾನಮಾನ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿತ್ತು. ಈ ವಸತಿ ನಿಲಯದಲ್ಲಿ ಹತ್ತಾರು ವರ್ಷಗಳಿಂದ ಆಶ್ರಯ ಪಡೆದು ಸಂತ್ರಸ್ತೆಯರು ಶಿಕ್ಷಣ ಕೂಡ ಮುಂದುವರೆಸಿದ್ದರು. ಆದರೆ ಈಗ ಅನುದಾನದ ಕೊರತೆ ನೆಪವೊಡ್ಡಿ ನಿಲಯದ ಆಡಳಿತ ಮಂಡಳಿ ಐದು ಮಹಿಳೆಯರನ್ನು ಹೊರಹಾಕಿದೆ.

ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲದಿದ್ದರು ಏಕಾಏಕಿ ನಿಲಯದಿಂದ ಹೊರಹಾಕಿದ್ದು, ಸಂತ್ರಸ್ತ ವಿಕಲ ಚೇತನರಿಗೆ ದಿಕ್ಕು ತೋಚದಂತಾಗಿದೆ.
ವಿಶೇಷ ಚೇತನ ವಿದ್ಯಾರ್ಥಿನಿ ಹೇಮಾ ಪ್ರಕಾಶ ಮಾತನಾಡಿ, “ಎಂಟು ವರ್ಷಗಳಿಂದ ಆಶ್ರಯ ಪಡೆದು ಪಿಯುಸಿ, ಪದವಿ ಮುಗಿಸಿ, ಮಾಸ್ಟರ್ ಪದವಿ ಮುಂದುವರೆಸುತ್ತಿದ್ದೇನೆ. ನೂರಾರು ಕನಸುಗಳೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಂಡು, ಘನತೆ ಜೀವನವನ್ನು ರೂಪಿಸಿಕೊಳ್ಳುವ ಆಸೆಗೆ ಆಶ್ರಯ ಬೇಕಿದೆ. ಸರ್ಕಾರದ ಅನುದಾನ ಬರುತ್ತಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ನಿಮ್ಮ ಮನೆಗಳಿಗೆ ಹೋಗಿ ಎಂದಿದ್ದಾರೆ. ಮನೆಗೆ ಹೋದರೆ ಸಮಾಜದಲ್ಲಿ ಬದುಕುವುದು ಬಹಳ ಕಷ್ಟವಾಗುತ್ತದೆ. ಬಸ್‌ಗಳಲ್ಲಿ, ರಸ್ತೆಗಳಲ್ಲಿ ವಿಪರೀತ ಜನಸಂದಣಿಯ ಮಧ್ಯೆ ಓಡಾಡಲು ಕಷ್ಟವಾಗುತ್ತದೆ. ನಮ್ಮ ಕನಸುಗಳಿಗೆ ತಣ್ಣೀರೆರಚಿದಂತಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಅಂಗವಿಕಲ ಒಕ್ಕೂಟದ ಸಾಮಾಜಿಕ ಕಾರ್ಯಕರ್ತೆ ಹಸೀನಾ ಹೆಡಿಯಲ ಮಾತನಾಡಿ, “2012 ರಲ್ಲಿ ರಾಜ್ಯ ಸರ್ಕಾರ ಅಂಗವಿಕಲ ಮಹಿಳೆಯರಗಾಗಿ ಪುನರ್ವಸತಿ ಕೇಂದ್ರ ಜಾರಿಗೆ ತಂದಿದೆ. ಆದರೆ ಅನುದಾನದ ಕೊರತೆ ನೆಪದ ಜತೆಗೆ ಕೇವಲ ಐದು ಜನ ಇದ್ದಾರೆ ಎಂದು ಆಶ್ರಯ ತಾಣವನ್ನು ಮುಚ್ಚುವುದು ಸರಿಯಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲಾವಾರು ಜಾಹಿರಾತು ನೀಡಿ ಅನೇಕ ವಿಕಲಚೇತನ ಮಹಿಳೆಯರಿಗೆ ನೇರವಾಗಬೇಕು” ಎಂದು ಒತ್ತಾಯಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಅನುದಾನದ ನೆಪವೊಡ್ಡಿ, ಆಶ್ರಯ ಪಡೆಯುತ್ತಿದ್ದ ಮಹಿಳೆಯರನ್ನು ಹೊರದೂಡುವ ಕೆಲಸ ಖಂಡನೀಯ. ಏಕಾಏಕಿ ಮುಚ್ಚುವುದು ಸರ್ಕಾರದ ನಿಯಮಗಳ ಉಲ್ಲಂಘನೆ ಆಗಿದೆ. ಅನುದಾನ ನೆಪ ಬಿಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು. ಅನುದಾನಿತ ಸಂಸ್ಥೆಗಳನ್ನು ಮುಚ್ಚಿದರೆ ನೇರವಾಗಿ ಇಲಾಖೆಯೇ ನಿರ್ವಹಣೆ ಮಾಡಬೇಕು. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸಬೇಕು. ನಿರ್ಲಕ್ಷ್ಯ ಧೋರಣೆ ತೋರಿದಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀನಿವಾಸ ಅಲದರ್ತಿ ಅವರು ಕಲ್ಮೇಶ್ವರ ಸಂಸ್ಥೆ ಮುಖ್ಯಸ್ಥರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಯಾವುದೇ ಕಾರಣಕ್ಕೂ ವಿಕಲಚೇತನರನ್ನು ಹೊರಗಡೆ ಕಳಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡು ಹೊರ ಹಾಕಿದ್ದ ಮಹಿಳೆಯರನ್ನು ಮತ್ತೆ ನಿಲಯಕ್ಕೆ ಕಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಹಾವೇರಿ | ಸಂಧ್ಯಾ ಸುರಕ್ಷಾ ವೃದ್ದಾಪ ವಿಕಲಚೇತನ, ವಿಧವಾವೇತನ ಪಡೆದುಕೊಳ್ಳಬೇಕಾದರೆ ಹಣ ನೀಡಬೇಕು: ಕರವೇ ಪ್ರತಿಭಟನೆ
ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಈಗ ತಾತ್ಕಾಲಿಕ ವಸತಿ ನಿಲಯ ಆಗಿದೆ. ಸರ್ಕಾರ ಪ್ರತ್ಯೇಕ ಶಾಶ್ವತ ವಸತಿ ನಿಲಯ ಆರಂಭಿಸಿದರೆ ಇಂತಹ ತೊಂದರೆಗಳು ಮರುಕಳಿಸುವುದಿಲ್ಲ. ಕೂಡಲೇ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯ ಆರಂಭಿಸಬೇಕಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.