ಕಟಾವಿಗೆ ಬಂದ 2 ಎಕರೆ ಕಬ್ಬು ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಕರಕಲಾಗಿರುವ ಘಟನೆ ಔರಾದ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಖಾನಾಪುರ ಗ್ರಾಮದ ರೈತ ಬಸಪ್ಪ ಕಂಟೆಪ್ಪ ಅವರಿಗೆ ಸೇರಿದ 2 ಎಕರೆ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಅಧಿಕ ಬಂಡವಾಳ ಹಾಕಿ 6 ಎಕರೆ ಕಬ್ಬು ಬೆಳೆಯಲಾಗಿತ್ತು. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅವರು ಡಿಸೆಂಬರ್ 4ರಂದು ಕಬ್ಬು ಕಟಾವು ಮಾಡುವುದಾಗಿ ದಿನಾಂಕ ನಿಗದಿಪಡಿಸಿದ್ದರು. ಆದರೆ ಇಲ್ಲಿಯವರೆಗೂ ಕಟಾವು ಮಾಡಲಿಲ್ಲ. ಇದೀಗ 2 ಎಕರೆ ಕಬ್ಬು ಸುಟ್ಟು ಕರಕಲಾಗಿದೆ. ಸಕ್ಕರೆ ಕಾರ್ಖಾನೆ ಅವರ ನಿರ್ಲಕ್ಷ್ಯದಿಂದ ಕಬ್ಬು ಸಂಪೂರ್ಣ ನಾಶವಾಗಿದೆ ಎಂದು ರೈತ ಕಂಟೆಪ್ಪ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಕೂಡಲೇ ಸರ್ಕಾರ ಹಾಗೂ ಎನ್‌ಎಸ್‌ಎಸ್‌ಕೆ ಅವರು ಹಾನಿಯಾದ 2 ಲಕ್ಷದಷ್ಟು ಕಬ್ಬಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.