ತನ್ನ ಸ್ನೇಹಿತನನ್ನೇ ಕೊಲೆ ಮಾಡಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೃತ್ಯ ನಡೆದು ಬರೋಬ್ಬರಿ 14 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಆರ್.ಟಿ ನಗರದಲ್ಲಿ ಘಟನೆ ನಡೆದಿತ್ತು. ಇದೀಗ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವೈಯಾಲಿಕಾವಲ್ ನಿವಾಸಿ, ಆರೋಪಿ ಜಾನ್ ಎಂದು ಗುರುತಿಸಲಾಗಿದೆ. ಆತ ಮಲ್ಲೇಶ್ವರಂನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಆತನನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.
2011ರಲ್ಲಿ ಚೇತನ್ ಎಂಬಾತನ ಹತ್ಯೆಯಾಗಿತ್ತು. ಚೇತನ್‌ನನ್ನು ಆತನ ನಾಲ್ವರು ಗೆಳೆಯರೇ ಹತ್ಯೆಗೈದಿದ್ದರು. ಪ್ರಕರಣದಲ್ಲಿ ಅರುಣ್, ಚಾಟಿರಾಜ್ ಹಾಗೂ ಮಣಿಕಂಠನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಆದರೆ, ಜಾನ್ ಸುಳಿವು ಸಿಕ್ಕಿರಲಿಲ್ಲ. ಬಂಧತ ಮೂವರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಮೂವರಿಗೂ ಜಾಮೀನು ಕೂಡ ದೊರೆತಿತ್ತು.
ಆದರೆ, ಜಾನ್ ಮಾತ್ರ ಪತ್ತೆಯಾಗಿರಲಿಲ್ಲ. ಗುಪ್ತಚರ ಮಾಹಿತಿಯಂತೆ ಜಾನ್‌ನ ಪೋಷಕರು ವೈಯ್ಯಾಲಿಕಾವಲ್‌ನಲ್ಲಿ ವಾಸುತ್ತಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದರು. ಗ್ಯಾಸ್ ನೋಂದಣಿಗೆ ಜಾನ್‌ನ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಕಂಡುಕೊಂಡ ಪೊಲೀಸರು ಗ್ಯಾಸ್ ಏಜೆನ್ಸಿ ಮೂಲಕ ಅತ ವೈಯ್ಯಾಲಿಕಾವಲ್‌ನಲ್ಲಿ ವಾಸಿಸುತ್ತಿದ್ದಾನೆ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದರು.
ಇದೀಗ, ಜಾನ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಜಾನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.