ಲಾಟರಿ ವಿತರಕರು ಕೇಂದ್ರ ಸರ್ಕಾರಕ್ಕೆ ಸೇವಾ ತೆರಿಗೆ ಪಾವತಿಸುವ ಹೊಣೆಯನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಈ ಮೂಲಕ ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಿಕ್ಕಿಂ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದು, ಈ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್‌ಕೆ ಸಿಂಗ್ ಅವರನ್ನು ಒಳಗೊಂಡ ಪೀಠವು ವಜಾಗೊಳಿಸಿದೆ.
ಇದನ್ನು ಓದಿದ್ದೀರಾ? ಮುಡಾ ಪ್ರಕರಣ | ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸ್ನೇಹಮಯಿ ಕೃಷ್ಣ ನಿರ್ಧಾರ
“ಯಾವುದೇ ಸಂಸ್ಥೆಯೂ ಸಂಬಂಧವಿಲ್ಲದ ಕಾರಣ ಪ್ರತಿವಾದಿಗಳು (ಲಾಟರಿ ವಿತರಕರು) ಸೇವಾ ತೆರಿಗೆ ಪಾವತಿಸಲು ಹೊಣೆಗಾರರಾಗುವುದಿಲ್ಲ. ಆದರೆ ಪ್ರತಿವಾದಿಗಳು ಸಂವಿಧಾನದ ಪ್ರಕಾರವಾಗಿ ರಾಜ್ಯವು ವಿಧಿಸುವ ತೆರಿಗೆಯನ್ನು ಪಾವತಿಸುವುದನ್ನು ಮುಂದುವರಿಸಬೇಕು” ಎಂದು ನ್ಯಾಯಮೂರ್ತಿ ನಾಗರತ್ನ ತೀರ್ಪು ನೀಡುತ್ತಾ ತಿಳಿಸಿದ್ದಾರೆ.
“ಲಾಟರಿ ಟಿಕೆಟ್‌ಗಳ ಖರೀದಿದಾರ ಮತ್ತು ಸಂಸ್ಥೆಯ ನಡುವಿನ ವಹಿವಾಟಿನ ಮೇಲೆ ಸೇವಾ ತೆರಿಗೆ ವಿಧಿಸಲಾಗುವುದಿಲ್ಲ. ಎಲ್ಲಾ ವಾದ ವಿವಾದವನ್ನು ಗಮನಿಸಿದಾಗ ಭಾರತ ಸರ್ಕಾರ ಮತ್ತು ಇತರರು ಸಲ್ಲಿಸಿದ ಮೇಲ್ಮನವಿಗಳಲ್ಲಿ ನಮಗೆ ಯಾವುದೇ ಅರ್ಹತೆ ಕಂಡುಬರುವುದಿಲ್ಲ. ಆದ್ದರಿಂದ ಈ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ” ಎಂದು ಪೀಠ ಹೇಳಿದೆ.
ಇದನ್ನು ಓದಿದ್ದೀರಾ? ಮೊದಲ ಮದುವೆ ಮುಂದುವರೆದಿದ್ದರೂ, ಮಹಿಳೆ 2ನೇ ಪತಿಯಿಂದ ಜೀವನಾಂಶ ಪಡೆಯಬಹುದು: ಸುಪ್ರೀಂ ಕೋರ್ಟ್
ಸೇವಾ ತೆರಿಗೆ ವಿಧಿಸುವ ಹಕ್ಕು ನಮಗೂ ಇದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಆದರೆ ಸಿಕ್ಕಿಂ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಲಾಟರಿಗಳ ಮೇಲೆ ತೆರಿಗೆ ವಿಧಿಸುವುದು ರಾಜ್ಯ ಸರ್ಕಾರ ಮಾತ್ರ, ಕೇಂದ್ರ ಸರ್ಕಾರವಲ್ಲ ಎಂದು ಹೇಳಿದೆ.
ಲಾಟರಿ ಸಂಸ್ಥೆ ಫ್ಯೂಚರ್ ಗೇಮಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸಿಕ್ಕಿಂ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ 2013ರಲ್ಲಿಯೇ ಕೇಂದ್ರ ಸರ್ಕಾರ ಲಾಟರಿ ಮೇಲೆ ಸೇವಾ ತೆರಿಗೆ ವಿಧಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
