ಇತ್ತೀಚಿನ ದಿನಗಳಲ್ಲಿ ಕಲೆಯ ಬಗ್ಗೆ ಜನ ಸಾಮಾನ್ಯರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಜನರಲ್ಲಿ ಕಲೆಯ ಬಗ್ಗೆ ಅರಿವು ಮೂಡಿಸಿ ಕಲೆಯನ್ನು ಜನಪರವಾಗಿಸಬೇಕು ಎಂದು ಲಲಿತ ಕಲಾ ಮಂಡಳಿ ಸದಸ್ಯ ಸಂಚಾಲಕಿ ರಾಜೇಶ್ವರಿ ಮೋಪಗಾರ ಹೇಳಿದರು.
ವಿಜಯಪುರದ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಘ ವಿಜಯಪುರ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ”ನಿಮ್ಮೊಂದಿಗೆ ನಾವು” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ, ಕಲಾ ವಿಮರ್ಶೆ, ಒಂದು ದಿನದ ಶಾಲಾ ಮಕ್ಕಳ ಚಿತ್ರಕಲಾ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿ, “ನಿಮ್ಮೊಂದಿಗೆ ನಾವು ಕಾರ್ಯಕ್ರಮದ ಮುಖ್ಯ ಉದ್ದೇಶವೇ ಕಲೆಯನ್ನು ಜನಪರವಾಗಿಸಬೇಕು. ಜನರಲ್ಲಿ ಕಲೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂಬುದಾಗಿದೆ. ಇದರೊಂದಿಗೆ ಕಲಾಭಿಮಾನಿಗಳ ದೊಡ್ಡ ಸಮೂಹವನ್ನು ನಿರ್ಮಿಸಿಕೊಳ್ಳಬೇಕು” ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ ಮಾತನಾಡಿ, “ಕಲೆಯ ಕುರಿತು ಸರ್ಕಾರದ ಜನಪರ ಯೋಜನೆಗಳು ತುಂಬಾ ಶ್ಲಾಘನೀಯ. ಈ ರೀತಿಯ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಆಯೋಜನೆಗೊಳ್ಳಬೇಕು. ಕಲಾವಿದರಲ್ಲಿ ಮಾತ್ರವಲ್ಲದೆ ಸಾಮಾನ್ಯ ಜನರಲ್ಲೂ ಕಲೆಯ ಕುರಿತು ಅರಿವು ಮೂಡಿಸುವ ಕೆಲಸಗಳಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಸೀತಮ್ಮನಗುಡ್ಡದ ಕೆಎಸ್‌ಐಎಸ್‌ಎಫ್ ಬಳಿ ಅಪಘಾತ; ಇಬ್ಬರಿಗೆ ಮಂದಿಗೆ ಗಂಭೀರ, ಹದಿನಾಲ್ಕು ಮಂದಿಗೆ ಗಾಯ
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪಿರ್ ವಾಲಿಕರ್, ಕನ್ನಡ ಪ್ರಾಧಿಕಾರದ ಸದಸ್ಯೆ ದಾಕ್ಷಾಯಿಣಿ ಹುಡೆದ್, ರಾಜರಾಜೇಶ್ವರಿ ಮಹಿಳಾ ಕಲಾಸಂಘದ ಸದಸ್ಯೆ ಲಲಿತಾ ಬಳಗಾನೂರ, ಬಿ ಕೆ ಶ್ರೀದೇವಿ, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಹಾಜರಿದ್ದರು.
