ತಿಪಟೂರು ತಾಲೂಕಿನ ಸುಕ್ಷೇತ್ರ ರಂಗನಹಳ್ಳಿ ಶ್ರೀ ಶನೇಶ್ವರ ಸ್ವಾಮಿಯವರ 21ನೇ ಜಾತ್ರಾ ಮಹೋತ್ಸವ ಫೆ.12ರಿಂದ 15 ರವರೆಗೆ ಬಹಳ ವಿಜೃಂಭಣೆಯಿಂದ ನೆರವೇರಲಿದೆ ಎಂದು ಸಂಘದ ಸದಸ್ಯ ಚಂದ್ರಶೇಖರ್ ತಿಳಿಸಿದರು.
ರಂಗನಹಳ್ಳಿ ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗನಹಳ್ಳಿ ಶ್ರೀ ಶನೇಶ್ವರಸ್ವಾಮಿ ಜಾತ್ರ ಮಹೋತ್ಸವವು
ಬಹಳ ವೈಭವದಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿದ್ದು ಈ ಬಾರಿ ನಡೆಯುವ 21ನೇ ಜಾತ್ರಾ ಮಹೋತ್ಸವವು ಶ್ರೀ ಆಂಜನೇಯಸ್ವಾಮಿ, ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಆದಿಪರಾಶಕ್ತಿ ಕಾಳಿಕಾದೇವಿಯವರ ಆಗಮನದೊಂದಿಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಲಿದೆ ಎಂದು ತಿಳಿಸಿದರು.
ಕುಣಿಗಲ್ ಮಂಜುನಾಥ್ ಮಾತನಾಡಿ ಫೆ.12 ರಂದು ಸ್ವಾಮಿಗೆ ಪಂಚಾಮೃತ, ಅಷ್ಟೋತ್ತರ ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ಶ್ರೀ ಕ್ಷೇತ್ರ ಮಲ್ಲಾಘಟ್ಟ ಕೆರೆಯಲ್ಲಿ ಸ್ವಾಮಿಗೆ ಗಂಗಾಸ್ನಾನ ನೆರವೇರಲಿದೆ. ಫೆ.13 ರಂದು ಜಾನಪದ ಕಲಾ ತಂಡಗಳೊಂದಿಗೆ ಆಲ್ಲೂರು ಅಣಪನಹಳ್ಳಿ, ಬಸವನಹಳ್ಳಿ, ರಂಗನಹಳ್ಳಿ, ಮಾಕನಹಳ್ಳಿ, ನೊಣವಿನಕೆರೆ, ಕಾಡಸಿದ್ದೇಶ್ವರ ಮಠ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಉತ್ಸವಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಕ್ಷೇತ್ರಕ್ಕೆ ಆಗಮಿಸಿದ ಗ್ರಾಮ ದೇವತೆ ಗಳೊಂದಿಗೆ ‘ಅಗ್ನಿಕುಂಡ’ ಪ್ರವೇಶ, ಸಂಜೆ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಆಗಮನದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಫೆ.15 ರಂದು ಶ್ರೀ ಗುರುಪರದೇಶಿ ಕೇಂದ್ರ ಮಹಾಸ್ವಾಮೀಜಿಗಳಿಂದ ವಾಸ್ತುಬಲಿ ಪೂಜೆ ಹಾಗೂ ತೀರ್ಥಪ್ರಸಾದ ವಿನಿಯೋಗ, ಕಾಮಿಡಿ ಕಿಲಾಡಿಗಳು ಹಾಸ್ಯ ಕಲಾವಿದರಿಂದ ‘ಹಾಸ್ಯ ಸೋತ್ಸವ’ ಕಾರ್ಯ ಕ್ರಮ, ಮಧ್ಯಾಹ್ನ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಸರ್ವಧರ್ಮ ಸಮ್ಮೇಳನ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ತಿಪಟೂರು ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಸಚಿವರಾದ ಡಾ.ಜಿ. ಪರಮೇಶ್ವರ್ ಮತ್ತು ಕೆ.ಎನ್ ರಾಜಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ ‘ಸಂಗೀತ ರಸ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದ್ಯಸರಾದ ದೊದ್ದೇಗೌಡ. ಡಿ ಬಿ ಮಂಜುನಾಥ್, ಉಮೇಶ್, ಗಿರೀಶ್ ಮೊದಲಾದವರು ಹಾಜರಿದ್ದರು.
ವರದಿ – ಮಿಥುನ್ ತಿಪಟೂರು