ಬ್ರಾಹ್ಮಣೇತರ ಪಕ್ಷ: ಉನ್ನತಿ ಮತ್ತು ಅವನತಿ

Date:

Advertisements

ಸನಾತನವಾದಿಗಳ ಮೇಲಾಟಕ್ಕೆ ದಿಟ್ಟ ಉತ್ತರ ನೀಡಲು ಇದೊಂದು ಉತ್ತಮ ಅವಕಾಶವಾಗಿದ್ದರಿಂದ 12 ಡಿಸೆಂಬರ್, 1920ರಂದು ಪೂರ್ವ ಪುಣೆಯ ಜೇಧೆ ಮ್ಯಾನ್ಷನ್‌ನಲ್ಲಿ ಸತ್ಯಶೋಧಕ ಭಾಸ್ಕರರಾವ ಜಾಧವ ಅವರ ಮುಂದಾಳತ್ವದಲ್ಲಿ, ಅಹ್ಮದನಗರದ ಶ್ರೀಮಂತ ಜಗದೇವ ಉರ್ಫ ಭಾವುಸಾಹೇಬ ಮಹಾರಾಜ ಪವಾರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ನಿಯಮಾನುಸಾರ ಬ್ರಾಹ್ಮಣೇತರ ಪಕ್ಷವನ್ನು ಸ್ಥಾಪಿಸಲಾಯಿತು.

ಸಾಮಾಜಿಕ ಕ್ರಾಂತಿಯ ಹರಿಕಾರ ಮಹಾತ್ಮ ಜ್ಯೋತಿಬಾ ಫುಲೆ ಅವರು 24 ಸೆಪ್ಟಂಬರ್, 1873ರಂದು ಸತ್ಯಶೋಧಕ ಸಮಾಜ ಸ್ಥಾಪನೆ ಮಾಡುವ ಮೂಲಕ ಬ್ರಾಹ್ಮಣೇತರ ಚಳವಳಿಗೆ ಮುನ್ನುಡಿ ಬರೆದರು. ನಂತರ ಮಾತೆ ಸಾವಿತ್ರಿಬಾಯಿ ಫುಲೆ, ಛತ್ರಪತಿ ಶಾಹು ಮಹಾರಾಜರು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಇದನ್ನು ಮುನ್ನಡೆಸಿದರು.

ಮುಂಬೈ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮುಖಂಡರು ಬ್ರಾಹ್ಮಣೇತರ ಚಳವಳಿಯ ಭಾಗವಾಗಿದ್ದುದು ಕಂಡುಬರುತ್ತದೆ. ಸರ್ ಸಿದ್ದಪ್ಪ ಕಂಬಳಿ ಅವರ ನೇತೃತ್ವದಲ್ಲಿ 1920ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಛತ್ರಪತಿ ಶಾಹು ಮಹಾರಾಜರು ಭಾಗವಹಿಸಿದ್ದರು.

Advertisements

1920 ಡಿಸೆಂಬರ್, 12ರಂದು ಸತ್ಯಶೋಧಕ ಚಳವಳಿಯ ಮುಖಂಡರು ಸೇರಿ ಬ್ರಾಹ್ಮಣೇತರ ಪಕ್ಷವನ್ನು ಸ್ಥಾಪನೆ ಮಾಡುತ್ತಾರೆ. ಈ ಪಕ್ಷದ ಪದಾಧಿಕಾರಿಗಳಾಗಿ ಬೆಳಗಾವಿಯ ಪಂಡಿತಪ್ಪ ಚಿಕ್ಕೋಡಿ, ಧಾರವಾಡದ ಸಿ.ಸಿ. ಶಿರಹಟ್ಟಿ, ಕಾರವಾರದ ಎಸ್.ಎಸ್. ಪಾಟೀಲ, ಬಿಜಾಪುರದ ಹಳಕಟ್ಟಿ ಮುಂತಾದವರು ಆಯ್ಕೆಯಾಗಿರುತ್ತಾರೆ.

ಡಾ. ಫ.ಗು. ಹಳಟ್ಟಿಯವರು ವಚನಸಾಹಿತ್ಯದ ಪಿತಾಮಹರೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಅವರು ಬ್ರಾಹ್ಮಣೇತರ ಚಳವಳಿಗೆ ಮಹತ್ತರ ಕೊಡುಗೆ ನೀಡಿರುವುದು ಅಲ್ಲಲ್ಲಿ ಸಿಕ್ಕುವ ದಾಖಲೆಗಳಿಂದ ಗೊತ್ತಾಗುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

ಬ್ರಾಹ್ಮಣೇತರ ಚಳವಳಿಯು ಮುಂಬೈ ಕರ್ನಾಟಕ ಭಾಗದಲ್ಲಿ ತುಂಬಾ ಪ್ರಬಲವಾಗಿ ಬೆಳೆಯುವುದಕ್ಕೆ ಲಿಂಗಾಯತ ಮುಖಂಡರು ನೀಡಿದ ಕೊಡುಗೆಯನ್ನು ಪ್ರಜ್ಞಾಪೂರ್ವಕವಾಗಿ‌ ಮರೆಮಾಚಲಾಗಿದೆ ಅನಿಸುತ್ತಿದೆ. ಇದು ಕೂಡಾ ಇವತ್ತಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಿಂದು ತುರ್ತಾಗಿ ಆಗಬೇಕಿದೆ.

“ಬ್ರಾಹ್ಮಣೇತರ ಪಕ್ಷ”ದ ಅವನತಿಯ ಕುರಿತು ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಪರಿಶಿಷ್ಟ ಜಾತಿಗಳ ಒಕ್ಕೂಟದ ಸಭೆಗಳಲ್ಲಿ ಹಲವು ಬಾರಿ ಉಲ್ಲೇಖಿಸಿದ್ದಾರೆ. ಬ್ರಾಹ್ಮಣೇತರ ಪಕ್ಷದ ಉದಯ‌ ಮತ್ತು ಅವನತಿಯ ಕುರಿತು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಖ್ಯಾತ ಮರಾಠಿ ಲೇಖಕರಾದ ಜಿ.ಎ. ಉಗಲೆ ಅವರು ಬರೆದ “ಸತ್ಯಶೋಧಕ ಸಮಾಜ ಚಳವಳಿಯ ಸಮಗ್ರ ಇತಿಹಾಸ” ಎಂಬ ಕೃತಿಯನ್ನು ಮಹಾರಾಷ್ಟ್ರ ಸರಕಾರದ ಮಹಾರಾಷ್ಟ್ರ ರಾಜ್ಯ ಸಾಹಿತ್ಯ ಮತ್ತು ಸಂಸ್ಕೃತಿ ವಿಭಾಗವು ಪ್ರಕಟಿಸಿದೆ. ಈ ಕೃತಿಯಲ್ಲಿ ಭಾರತದಲ್ಲಿ ನಡೆದುಬಂದ ಬ್ರಾಹ್ಮಣೇತರ ಚಳವಳಿಯ ಮಹತ್ವದ ವಿವರ ದಾಖಲಾಗಿದೆ. ಆಸಕ್ತರು ಈ ಕೃತಿಯನ್ನು ಓದಬಹುದು.

ಬ್ರಾಹ್ಮಣೇತರ ಪಕ್ಷ: ಉನ್ನತಿ ಮತ್ತು ಅವನತಿ

ಮಾಂಟೇಗೊ-ಚೆಲ್ಮ್ಸಫೋರ್ಡ್ ಸುಧಾರಣೆಗಳು ಜಾರಿಯಾದ ತಕ್ಷಣ, ಬಹುಜನ ಸಮುದಾಯದ ನಾಯಕರು ರಾಜಕೀಯ ಹಕ್ಕುಗಳ ಪ್ರಾಪ್ತಿ ಮತ್ತು ಸರ್ಕಾರದಲ್ಲಿ ಪಾಲು ಪಡೆಯಲು ಅಥವಾ ಹಂತಹಂತವಾಗಿ ಸ್ವರಾಜ್ಯವನ್ನು ಸಾಧಿಸಲು ಒಗ್ಗೂಡುವುದಕ್ಕೆ ಹೆಚ್ಚಿನ ಅವಕಾಶ ಲಭಿಸಿತು. ಆದರೆ ಬ್ರಾಹ್ಮಣೇತರ ಸಂಘಟನೆ ಕಟ್ಟುವ ಕೆಲಸ ಸ್ವಲ್ಪ ವಿಳಂಬವಾಯಿತು. ಏತನ್ಮಧ್ಯೆ, ನವೆಂಬರ್ 1920ರಲ್ಲಿ ಮಾಂಟೇಗ್-ಚೆಮ್ಸ್ಫೋರ್ಡ್ ಸುಧಾರಣಾ ಯೋಜನೆಯಡಿಯಲ್ಲಿ ಮುಂಬೈ ಪ್ರಾಂತ್ಯ ಲೆಜಿಸ್ಲೇಟಿವ್ ಕೌನ್ಸಿಲ್ ಗೆ ಚುನಾವಣೆಗಳು ನಡೆದವು. ಈ ಚುನಾವಣೆಯ ವರೆಗೂ ಬ್ರಾಹ್ಮಣೇತರ ಪಕ್ಷಗಳು ರಚನೆಯಾಗದ ಕಾರಣ, ಬ್ರಾಹ್ಮಣೇತರ ಉಮೇದುವಾರರು ಪ್ರತ್ಯೇಕ ಚಿಹ್ನೆಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು.

ಸನಾತನವಾದಿಗಳ ಮೇಲಾಟಕ್ಕೆ ದಿಟ್ಟ ಉತ್ತರ ನೀಡಲು ಇದೊಂದು ಉತ್ತಮ ಅವಕಾಶವಾಗಿದ್ದರಿಂದ 12 ಡಿಸೆಂಬರ್, 1920 ರಂದು ಪೂರ್ವ ಪುಣೆಯ ಜೇಧೆ ಮ್ಯಾನ್ಷನ್‌ನಲ್ಲಿ ಸತ್ಯಶೋಧಕ ಭಾಸ್ಕರರಾವ ಜಾಧವ ಅವರ ಮುಂದಾಳತ್ವದಲ್ಲಿ, ಅಹ್ಮದನಗರದ ಶ್ರೀಮಂತ ಜಗದೇವ ಉರ್ಫ ಭಾವುಸಾಹೇಬ ಮಹಾರಾಜ ಪವಾರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ನಿಯಮಾನುಸಾರ ಬ್ರಾಹ್ಮಣೇತರ ಪಕ್ಷವನ್ನು ಸ್ಥಾಪಿಸಲಾಯಿತು.

WhatsApp Image 2025 02 12 at 11.19.49 AM

ಬಾವುಸಾಹೇಬ ಮಹಾರಾಜ ಪವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಬ್ರಾಹ್ಮಣೇತರ ಪಕ್ಷದ ಸಭೆಯಲ್ಲಿ ವಿಜಯಿ ‘ಮರಾಠಾ’ ಕಾರ್ಯಕರ್ತರಾದ ಶ್ರೀಪತರಾವ ಲಕ್ಷ್ಮಣರಾವ ಶಿಂಧೆ, ಭಾಸ್ಕರರಾವ ವಿಠೋಜಿರಾವ ಜಾಧವ, ಕೇಶವರಾವ ಮಾರುತಿರಾವ ಜೇಧೆ, ಬಾಬುರಾವ ಮಾರುತಿರಾವ ಜೇಧೆ, ದಿನಕರರಾವ ಶಂಕರರಾವ ಜವಳಕರ, ಆನಂದಸ್ವಾಮಿ, ಗಂಗಾಜಿರಾವ ಕಾಳಭೋರ, ಪ್ರಾ. ಅಣ್ಣಾಸಾಹೇಬ ಬಾಬಾಜಿ ಲಠ್ಠೆ, ರಾಮಚಂದ್ರ ವಿಠ್ಠಲರಾವ್ ವಂಡೆಕರ್, ಕೇಶವರಾವ ವಿಶ್ರಾಮ ವಿಚಾರೆ, ದತ್ತಾತ್ರಯ ಭೀಮಾಜಿ ರಣದಿವೆ, ಆನಂದರಾವ ಜಗತಾಪ, ಬಾಬುರಾವ ಜಗತಾಪ, ವಾಲಚಂದ ರಾಮಚಂದ ಕೊಠಾರಿ, ಸೀತಾರಾಮ ಕೇಶವ ಬೋಲೆ, ಖಾನ್ ಬಹದ್ದೂರ ಧನಜಿಶಹಾ ಕೂಪರ್, ಕೇಶವರಾವ ಗಣೇಶರಾವ ಬಾಗಡೆ, ಪಾಂಡುರಂಗ ನಾರಾಯಣ ಜಾಧವ, ರಾಮರಾವ ಶಿಂಧೆ, ಮೋತಿಚಂದ ವೋರಾ, ಕೀರ್ತಿವಾನರಾವ ನಿಂಬಾಳ್ಕರ, ಡಾ. ವಿಠ್ಠಲರಾವ್ ನವಲೆ, ಶಾಮರಾವ್ ಭೋಸಲೆ, ನಾನಾಸಾಹೇಬ ಜಗತಾಪ, ದುಂಬ್ರೆ, ಭಿಸೆ, ಮ್ಹಾಸೆ ಇತ್ಯಾದಿ ಸತ್ಯಶೋಧಕ ನಾಯಕರು ಉಪಸ್ಥಿತರಿದ್ದರು. ಇವರಲ್ಲಿ ಧನಜೀಶ ಕೂಪರ್ ಮತ್ತು ಒಬ್ಬಿಬ್ಬರು ವ್ಯಕ್ತಿಗಳನ್ನು ಹೊರತುಪಡಿಸಿ, ಎಲ್ಲರೂ ಬ್ರಾಹ್ಮಣೇತರ ಪದಾಧಿಕಾರಿಗಳು- ಸತ್ಯಶೋಧಕ ಕಾರ್ಯಕರ್ತರಾಗಿದ್ದರು.

ಮೂಲತಃ ಸತ್ಯಶೋಧಕ ಸಮಾಜದ ಕಾರ್ಯಕರ್ತರು ಮತ್ತು ರಾಜರ್ಷಿ ಶಾಹು ಮಹಾರಾಜರು ಮುನ್ನಡೆಸುತ್ತಿದ್ದ ಚಳವಳಿಯ ಮೂಲ ಉದ್ದೇಶವನ್ನು ಸ್ಪಷ್ಟಪಡಿಸಲು ಡಾ. ರಾ.ಅ. ಕಡಿಯಾಳ ಅವರ ‘ನಾಮ್ದಾರ್ ಕೈ. ಭಾಸ್ಕರರಾವ ಜಾಧವ ಅವರ ಜೀವನ ಮತ್ತು ಕಾರ್ಯ’ ಪುಸ್ತಕದಲ್ಲಿ ನೀಡಲಾದ ದಾಖಲೆಯ ಸಾರವನ್ನು ಇಲ್ಲಿ ನೀಡಲಾಗುತ್ತಿದೆ.

ದಾಖಲೆ ಹೀಗಿದೆ

“ಡಿಸೆಂಬರ್ 12, 1920ರಂದು ನಡೆದ ಈ ಸಭೆಯಲ್ಲಿ ಭಾಸ್ಕರರಾವ ಜಾಧವ ಅವರು ಸಭೆಯ ಉದ್ದೇಶವನ್ನು ತಿಳಿಸುತ್ತ, ಅಂದಿನ ಪರಿಸ್ಥಿತಿಯಲ್ಲಿ ಬಹುಜನ ಸಮಾಜಕ್ಕೆ ಬ್ರಾಹ್ಮಣೇತರ ಪಕ್ಷದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ನಂತರ ಆರು ನಿರ್ಣಯಗಳನ್ನು ಮಂಡಿಸಿದರು.

ನಿರ್ಣಯ 1: ‘ಮುಂಬೈ’ ಪ್ರಾಂತ್ಯದಲ್ಲಿ ಬ್ರಾಹ್ಮಣೇತರರೆಲ್ಲರೂ ಸೇರಿ ಸ್ವತಂತ್ರ ಬ್ರಾಹ್ಮಣೇತರ ಪಕ್ಷ ಸ್ಥಾಪನೆಗೆ ಕಾಲ ಒದಗಿಬಂದಿದೆ ಎಂದು ಈ ಸಭೆ ಅಭಿಪ್ರಾಯಪಟ್ಟಿದೆ. ಭಾಸ್ಕರರಾವ ಅವರು ಈ ನಿರ್ಣಯವನ್ನು ಸಮರ್ಪಕವಾಗಿ ಸಮರ್ಥಿಸಿದ ನಂತರ ಎಲ್ಲರೂ ನಿರ್ಣಯವನ್ನು ಅನುಮೋದಿಸಿದರು.

ನಿರ್ಣಯ 2: ಈ ಪಕ್ಷದ ಸಂವಿಧಾನವು ಈ ಕೆಳಗಿನಂತಿರಬೇಕು.

1) ಪಕ್ಷದ ಹೆಸರನ್ನು ಡೆಕ್ಕನ್ ಬ್ರಾಹ್ಮಣೇತರ ಸಂಘ ಎಂದು ನೀಡಲಾಗುತ್ತಿದೆ.
(Deccan Non-Brahmin Leag)

2) ‘ಡೆಕ್ಕನ್’ ಪದವು ಬಾಂಬೆ ಪ್ರಾಂತ್ಯದ ಮಧ್ಯ ಮತ್ತು ದಕ್ಷಿಣ ಭಾಗಗಳು, ಬಾಂಬೆ ಮತ್ತು ಥಾಣೆ ಜಿಲ್ಲೆಗಳು ಮತ್ತು ಕಾರ್ಯಕಾರಿ ಮಂಡಳಿಯ ಒಪ್ಪಿಗೆಯೊಂದಿಗೆ ಇತರ ಭಾಗಗಳನ್ನು ಒಳಗೊಂಡಿರುತ್ತದೆ.

3) ಬ್ರಾಹ್ಮಣೇತರ ಪದವು ಬ್ರಾಹ್ಮಣ ಜಾತಿಯನ್ನು ಹೊರತುಪಡಿಸಿ ಜಾತಿ ಮತ್ತು ಧರ್ಮದ ಜನರನ್ನು ಒಳಗೊಂಡಿದೆ.

ಸಂಘದ ಉದ್ದೇಶ
1) ಬ್ರಾಹ್ಮಣರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ದಬ್ಬಾಳಿಕೆಯಿಂದ ಬ್ರಾಹ್ಮಣೇತರರನ್ನು ಮುಕ್ತಗೊಳಿಸುವುದು.

2) ಬ್ರಾಹ್ಮಣೇತರರಲ್ಲಿ ಆತ್ಮಗೌರವ ಮತ್ತು ಸಹೋದರ ಪ್ರೇಮದ ಭಾವನೆ ಮೂಡಿಸುವುದು.

3) ಪ್ರಸ್ತುತ ಪರಿಸ್ಥಿತಿಯಲ್ಲಿ ಉದ್ಭವಿಸುವ ಪ್ರಮುಖ ವಿಷಯಗಳ ಬಗ್ಗೆ ಬ್ರಾಹ್ಮಣೇತರರಿಗೆ ತಿಳಿಸುವ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು.

4) ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿಷಯಗಳಲ್ಲಿ ಬ್ರಾಹ್ಮಣೇತರರನ್ನು ಮೇಲೆತ್ತುವುದು.

5) ಪ್ರಾತಿನಿಧಿಕ ಸಂಸ್ಥೆಗಳಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಾಮ್ರಾಜ್ಯದೊಳಗೆ ಸ್ವಯಂ ಆಡಳಿತವನ್ನು ಸಾಧಿಸಲು ಬ್ರಾಹ್ಮಣೇತರರಿಗೆ ಸಹಾಯ ಮಾಡುವುದು.

6) ಸಾಧ್ಯವಾದಲ್ಲೆಲ್ಲಾ ಸರ್ಕಾರದೊಂದಿಗೆ ಸಹಕರಿಸುವ ಮೂಲಕ ಮತ್ತು ಸಂದರ್ಭಾನುಸಾರ ನೈಜ ಹಕ್ಕುಗಳಿಗಾಗಿ ಸರ್ಕಾರವನ್ನು ವಿರೋಧಿಸುವ ಮೂಲಕ ಬ್ರಾಹ್ಮಣೇತರರ ಎಲ್ಲಾ ತೊಂದರೆಗಳನ್ನು ನಿವಾರಿಸುವುದು.

7) ಎಲ್ಲಾ ಸರ್ಕಾರಿ ಇಲಾಖೆಗಳು, ವಿಧಾನ ಪರಿಷತ್ತುಗಳು ಮತ್ತು ಇತರ ಎಲ್ಲಾ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಬ್ರಾಹ್ಮಣೇತರರ ಹಕ್ಕುಗಳನ್ನು ಸರಿಯಾಗಿ ನಿರ್ವಹಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು.

8) ಬ್ರಾಹ್ಮಣೇತರ ಸಂಘದ ನಿಯಮಗಳನ್ನು (ಕೋಡ್) ಸ್ವೀಕರಿಸುವ ಮತ್ತು ಸಂಘದ ಬಗ್ಗೆ ಸಕ್ರಿಯ ಸಹಾನುಭೂತಿ ತೋರಿಸುವ ಬ್ರಾಹ್ಮಣರನ್ನು ಸಂಘದ ಸಹವರ್ತಿಗಳು ಅಥವಾ ಸಹಾಯಕರಾಗಿ ತೆಗೆದುಕೊಳ್ಳಲಾಗುತ್ತದೆ.

ಸಂಘದ ಸದಸ್ಯರು :
1) ಪೋಷಕರು: ಒಂದು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ನೀಡುವವರು.

2) ಆಜೀವ ಸದಸ್ಯರು: ನೂರು ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವವರು.

3) ಸದಸ್ಯರು: ವಾರ್ಷಿಕ ಒಂದು ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಪಾವತಿಸುವವರು.

ನಿರ್ಣಯ 3 : ಸಂಘದ ನಿಯಮಗಳನ್ನು ರೂಪಿಸಲು ಮತ್ತು ನಿಧಿ ಸಂಗ್ರಹಿಸಲು ಈ ಕೆಳಗಿನ ಮಹನೀಯರ ‘ತಾತ್ಕಾಲಿಕ ಸಮಿತಿ’ಯನ್ನು ನೇಮಿಸಲಾಯಿತು.
1) ಶ್ರೀಮಂತ ಜಗದೇವ ಉರ್ಫ ಭಾವುಸಾಹೇಬ ಮಹಾರಾಜ ಪವಾರ, ನಗರ
2) ಪ್ರಾ. ಅಣ್ಣಾಸಾಹೇಬ ಲಠ್ಠೆ
3) ರಾವಬಹದ್ದೂರ ಭಾಸ್ಕರರಾವ ಜಾಧವ
4) ಕೇಶವ ಗಣೇಶ ಬಾಗಡೆ
5) ವಾ.ರಾ. ಕೊಠಾರಿ
6) ಶ್ರೀಪತರಾವ ಲಕ್ಷ್ಮಣರಾವ ಶಿಂಧೆ
7) ಕೇಶವ ಸೀತಾರಾಮ ಬೋಲೆ
8) ಪಾಂಡುರಂಗ ನಾರಾಯಣ ಜಾಧವ
9) ಪಂಡಿತಪ್ಪ ಚಿಕ್ಕೋಡಿ
10) ಶಾಮರಾವ ಶಂಕರರಾವ ಭೋಸಲೆ
11) ರಾಮಚಂದ್ರರಾವ ವಂಡೆಕರ
12) ಫಡ್ಯಪ್ಪ ಚೌಗುಲೆ
13) ಭುಜಂಗರಾವ ಕೆ. ದಳವಿ
14) ಗೋವಿಂದರಾವ ಬಾಕಳೆ
16) ಕೀರ್ತಿವಾನರಾವ ನಿಂಬಾಳ್ಕರ.

ನಿರ್ಣಯ 4 : ಈ ಕೆಳಕಂಡ ಮಹನೀಯರನ್ನು ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಿಸಲಾಯಿತು.

1) ರಾಮಚಂದ್ರರಾವ ವಂಡೆಕರ, ಮುಂಬೈ
2) ಕೇಶವ ಗಣೇಶ ಬಾಗಡೆ, ಪುಣೆ
3) ಖಾನಬಹದ್ದೂರ್ ಡಿ.ಬಿ. ಕೂಪರ್, ಸತಾರಾ
4) ಎಸ್.ಬಿ. ಧುಮ್ಮಾ ವಕೀಲ, ಸೊಲ್ಲಾಪುರ
5) ಕೀರ್ತಿವಾನರಾವ ನಿಂಬಾಳ್ಕರ, ನಾಸಿಕ್
6) ಓಂಕಾರರಾವ ಲಕ್ಷ್ಮಣ ಚೌಧರಿ, ಪೂರ್ವ ಖಾಂದೇಶ್
7) ಸೌದಾನಕರ ವಕೀಲ, ಪ. ಖಾಂದೇಶ್
8) ಶಂಕರರಾವ್ ಜೆ. ಝುಂಜಾರರಾವ, ಥಾಣೆ
9) ದಾಜಿರಾವ ಅ. ವಿಚಾರೆ, ರತ್ನಾಗಿರಿ
10) ಸಿ. ಸಿ. ಶಿರಹಟ್ಟಿ, ಧಾರವಾಡ
11) ಹಳಕಟ್ಟಿ, ಬಿಜಾಪುರ
12) ಎಸ್. ಎಸ್. ಪಾಟೀಲ, ಕಾರವಾರ

ನಿರ್ಣಯ 5: ಸಂಘದ ವತಿಯಿಂದ ಒಂದು ಅಥವಾ ಎರಡು ದಿನಪತ್ರಿಕೆಗಳು ಮತ್ತು ಒಂದು ಇಂಗ್ಲೀಷ್ ವಾರಪತ್ರಿಕೆ ಪ್ರಕಟಿಸಲು ಒಂದು ಕಂಪನಿ ಸ್ಥಾಪಿಸಬೇಕು. ಬಂಡವಾಳವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಸಿ.ಕೆ. ಬೋಲೆ ಮತ್ತು ರಾಮಚಂದ್ರರಾವ ವಂಡೆಕರ ಅವರನ್ನು ನಿಯೋಜಿಸಿತು.

ನಿರ್ಣಯ 6: ನಮ್ಮ ನಮ್ಮಲ್ಲಿ ಇರುವ ಮತಭೇದವನ್ನು ತೊರೆಯಬೇಕು ಎಂಬುದು ಈ ಸಭೆಯ ಸಲಹೆಯಾಗಿದೆ.

ಭಾಸ್ಕರರಾವ್ ಜಾಧವ, ಅಣ್ಣಾಸಾಹೇಬ ಲಠ್ಠೆ, ಕೇಶವ ಗಣೇಶ ಬಾಗಡೆ, ಕೇಶವ ಸೀತಾರಾಮ ಬೋಲೆ, ಖಾನ್ ಬಿ. ಕೂಪರ್, ಪಾಂಡುರಂಗರಾವ ಜಾಧವ, ಗಂಗಾಜಿರಾವ್ ಕಾಳಭೋರೆ, ರಾಮಚಂದ್ರರಾವ ವಂಡೆಕರ ಮೇಲಿನ ಸಭೆಯಲ್ಲಿ ಬ್ರಾಹ್ಮಣೇತರ ಪಕ್ಷದ ‘ಆಡಳಿತ ಮಂಡಳಿ’ಯನ್ನು ರಚಿಸಲಾಯಿತು. ಈ ಮಂಡಳಿಯಲ್ಲಿ ಹನ್ನೆರಡು ಮಂದಿ ಮರಾಠರು ಮತ್ತು ಉಳಿದವರು ಮರಾಠೇತರರು. ಇವರಲ್ಲಿ ಲಿಂಗಾಯತ, ಜೈನ, ಭಂಡಾರಿ, ಒಬ್ಬರು ಲೇವಾ ಪಾಟಿದಾರ, ಒಬ್ಬರು ಪಾರ್ಸಿ, ಒಬ್ಬರು ಬಡಗಿ ಮತ್ತು ಒಬ್ಬರು ಶಿಂಪಿಗರು.

ಬ್ರಾಹ್ಮಣೇತರ ಪಕ್ಷವು ಮುಂಬೈ ಪ್ರದೇಶ ಮತ್ತು ವಿದರ್ಭ ಪ್ರಾಂತ್ಯದಲ್ಲಿ ಉತ್ತಮ ಜಾಲವನ್ನು ಹೆಣೆದಿತ್ತು. ಮೂರು ವರ್ಷಕ್ಕೊಮ್ಮೆ ನಡೆಯುವ ಪರಿಷತ್ ಚುನಾವಣೆಯಲ್ಲಿ ಬ್ರಾಹ್ಮಣೇತರ ಪಕ್ಷದ ಸದಸ್ಯರ ಸಂಖ್ಯೆ ಕಣ್ಣಿಗೆ ರಾಚುತ್ತಿತ್ತು. ಏತನ್ಮಧ್ಯೆ, ಭಾಸ್ಕರರಾವ್ ಜಾಧವ ಅವರು ಮಾರ್ಚ್ 1922ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ, ಅವರು 1922-23ರಲ್ಲಿ ಬಾಂಬೆ ಕೌನ್ಸಿಲ್‌ಗೆ ಸರ್ಕಾರದಿಂದ ನೇಮಕಗೊಂಡರು. ಇದೇ ವೇಳೆ ಅವರು ಬ್ರಾಹ್ಮಣೇತರ ಪಕ್ಷಕ್ಕೆ ರಾಷ್ಟ್ರೀಯರೂಪ ನೀಡಲು ಯತ್ನಿಸಿದರು. ಕ್ರಿ.ಶ. 1923ರ ಕೌನ್ಸಿಲ್ ಚುನಾವಣೆಯಲ್ಲಿ, ಭಾಸ್ಕರರಾವ ಜಾಧವ ಅವರು ಬ್ರಾಹ್ಮಣೇತರ ಪಕ್ಷದಿಂದ ಚುನಾಯಿತರಾದರು ಮತ್ತು 1924ರಲ್ಲಿ ಶಿಕ್ಷಣ ಸಚಿವರಾದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಬೃಹತ್ ಸಮಾವೇಶಗಳನ್ನು ಆಯೋಜಿಸತೊಡಗಿತ್ತು. ಬ್ರಾಹ್ಮಣೇತರ ಪಕ್ಷವನ್ನು ಸಹ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಭಾಸ್ಕರರಾವ ಜಾಧವ ಮತ್ತು ಅವರ ಒಡನಾಡಿಗಳು 1924ರಲ್ಲಿ ಬೆಳಗಾವಿಯಲ್ಲಿ ಬ್ರಾಹ್ಮಣೇತರ ಪಕ್ಷದ ಮೊದಲ ರಾಷ್ಟ್ರೀಯ ಸಮಾವೇಶ ನಡೆಯಿತು. ಮದ್ರಾಸ್ ಬ್ರಾಹ್ಮಣೇತರ ಮುಖಂಡ ರಾಮಸ್ವಾಮಿ ಮುದಲಿಯಾರ್ ಅವರು ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನದಲ್ಲಿ ಭಾಗಿಯಾಗಿದ್ದ ಅಮರಾವತಿ ಜಿಲ್ಲೆ ಮೋರ್ಶಿಯ ಸತ್ಯಶೋಧಕ ನ್ಯಾಯವಾದಿ ನಾರಾಯಣರಾವ ಗಣಪತರಾವ ಅಮೃತಕರ ಮತ್ತು ಅಹ್ಮದನಗರ ಜಿಲ್ಲೆ ವಾಘುಂಡೆಯ ಸತ್ಯಶೋಧಕ ಬ್ರಾಹ್ಮಣೇತರ ಕಾರ್ಯಕರ್ತ ಆನಂದಸ್ವಾಮಿ ಮತ್ತು ಅವರ ಸಂಗಡಿಗರು ವಿದರ್ಭದ ಅಮರಾವತಿಯಲ್ಲಿ 1925ರ ಡಿಸೆಂಬರ್ 27, 28 ಮತ್ತು 29 ರಂದು ಎರಡನೇ ‘ಅಖಿಲ ಭಾರತ ಬ್ರಾಹ್ಮಣೇತರ ಪಕ್ಷದ ಸಮಾವೇಶ’ವನ್ನು ಆಯೋಜಿಸಿದರು. ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿ ರಾಜೇಸಾಹೇಬ ಪಿ. ರಾಮರಾಯ ನಿಮ್ಗಾರ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪಗೊಂಡಿತು. ಬ್ರಾಹ್ಮಣೇತರ ಹೋರಾಟಗಾರರಾದ ರಾವಬಹದ್ದೂರ ಶ್ರೀನಿವಾಸರಾವ ಗೋವಿಂದರಾವ ನಾಯ್ಡು ಅವರು ಈ ಸಮಾವೇಶದ ಸ್ವಾಗತಾಧ್ಯಕ್ಷರಾಗಿದ್ದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯನ್ನು ನಡೆಸುವ ಮೂಲಕ ಬ್ರಾಹ್ಮಣೇತರ ಪಕ್ಷವನ್ನು ಗ್ರಾಮ ಮಟ್ಟದಿಂದ ಶಕ್ತಿಯುತವಾಗಿ ಸಂಘಟಿಸುವ ಪ್ರಯತ್ನಗಳನ್ನು ಮಾಡಲು ನಿರ್ಧರಿಸಲಾಯಿತು; ಆದರೆ ಈ ಪಕ್ಷವು ಮುಂಬೈ ಪ್ರದೇಶ, ವಿದರ್ಭ, ಮಧ್ಯಪ್ರದೇಶವನ್ನು ಮೀರಿ ವಿಸ್ತರಿಸಲು ಸಾಧ್ಯವಾಗಲಿಲ್ಲ.

ಬ್ರಾಹ್ಮಣೇತರ ಪಕ್ಷವನ್ನು ಸಜ್ಜುಗೊಳಿಸುವ, ಸಂಘಟಿಸುವ, ಸ್ಥಾಪಿಸುವ, ಬೆಂಬಲಿಸುವ ಮತ್ತು ವಿಸ್ತರಿಸುವಲ್ಲಿ ಸತ್ಯಶೋಧಕ ಬ್ರಾಹ್ಮಣೇತರ ಕಾರ್ಯಕರ್ತರ ಎಲ್ಲಾ ಪ್ರಯತ್ನಗಳು ನಡೆದವು. ಈ ಕಾರ್ಯದ ಹೆಚ್ಚಿನ ಶ್ರೇಯಸ್ಸು ಭಾಸ್ಕರರಾವ ಜಾಧವ ಮತ್ತು ಕೇಶವರಾವ ಮತ್ತು ಬಾಬುರಾವ ಜೇಧೆ ಮತ್ತು ಅವರ ಕುಟುಂಬಗಳಿಗೆ ಸಲ್ಲುತ್ತದೆ. ಅದಕ್ಕಾಗಿ ಅವರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರು. ‘ದೇಶದ ಶತ್ರು’ (ದೇಶಾಚೆ ದುಷ್ಮನ್) ಪುಸ್ತಕಕ್ಕಾಗಿ ಕೇಶವರಾವ ಜೇಧೆ ಅವರು ಕೆಲವು ದಿನಗಳ ಕಾಲ ಯರವಾಡ ಜೈಲಿನಲ್ಲಿ ಇರಬೇಕಾಯಿತು. ಆದರೆ ನಂತರ ಕೇಶವರಾವ ಜೇಧೆ ಮತ್ತು ಅವರ ಸ್ನೇಹಿತರು ಕಾಂಗ್ರೆಸ್ಸಿಗರಾದರು. ಅಲ್ಲಿಂದ ಬ್ರಾಹ್ಮಣೇತರ ಪಕ್ಷದ ಅವನತಿ ಪ್ರಾರಂಭವಾಯಿತು. ಸುಮಾರು 15-20 ವರ್ಷಗಳಿಂದ ಜೇಧೆ ಸಹೋದರರು ಮತ್ತು ಸತ್ಯಶೋಧಕ-ಬ್ರಾಹ್ಮಣೇತರ ಕಾರ್ಯಕರ್ತರು ಪುಣೆ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸತ್ಯಶೋಧಕ-ಬ್ರಾಹ್ಮಣೇತರ ಚಳವಳಿಯ ದೊಡ್ಡ ಪ್ರಾಬಲ್ಯವನ್ನು ಸೃಷ್ಟಿಸಿದ್ದರು.

1920ರಿಂದ 1938ರವರೆಗೆ, ಬ್ರಾಹ್ಮಣೇತರ ಪಕ್ಷವು ಅಧಿಕಾರವನ್ನು ಹೊಂದಿತ್ತು. ಈ ಅವಧಿಯಲ್ಲಿ ಬ್ರಾಹ್ಮಣೇತರ ಪಕ್ಷದ ಚುನಾಯಿತ ಸದಸ್ಯರು ಪ್ರಾಥಮಿಕ ಶಿಕ್ಷಣ, ಕಾರಾಗೃಹದಲ್ಲಿರುವ ಕೈದಿಗಳ ಚಿಕಿತ್ಸೆ, ದೇವದಾಸಿ ಪದ್ಧತಿ, ಸಾಮಾಜಿಕ ಸಮಸ್ಯೆಗಳು, ವಿವಿಧ ಇಲಾಖೆಗಳಲ್ಲಿ ಬ್ರಾಹ್ಮಣೇತರರಿಗೆ ಅತ್ಯಲ್ಪ ಉದ್ಯೋಗ, ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಸದನದಲ್ಲಿ ಹೋರಾಟ ನಡೆಸಿದರು. ಗ್ರಾಮ ಮಟ್ಟದಲ್ಲಿ ಕುಲಕರ್ಣಿಯು ತನ್ನನ್ನು ‘ಗ್ರಾಮದ ದೊರೆ’ ಎಂಬಂತೆ ವರ್ತಿಸುತ್ತಾನೆ. ಅವನಿಂದಾಗುವ ಶೋಷಣೆಯ ವಿವರಣೆಯನ್ನು ಸತ್ಯಾನ್ವೇಷಕ-ಬ್ರಾಹ್ಮಣೇತರ ನಾಯಕ ‘ದೀನಮಿತ್ರ’ ಸಂಪಾದಕ ಮುಕುಂದರಾವ ಪಾಟೀಲ ಅವರು ತಮ್ಮ ‘ಕುಲಕರ್ಣಿ ಲೀಲಾಮೃತ’ ಕವನದಲ್ಲಿ ವಿಷದಪಡಿಸಿದ್ದಾರೆ (1913). ಈ ಗ್ರಾಮ ಮಟ್ಟದ ಸರ್ಕಾರಿ ಹುದ್ದೆಯನ್ನು ರದ್ದುಪಡಿಸಿ ವೇತನ ಪಡೆಯುವ ತಲಾಠಿಗಳನ್ನು ನೇಮಿಸುವಂತೆ ಮುಂಬೈ ಪ್ರದೇಶದಿಂದ ಸತ್ಯಶೋಧಕರು ಸರ್ಕಾರಕ್ಕೆ ಸಾವಿರಾರು ಅರ್ಜಿಗಳನ್ನು ಕಳುಹಿಸಿದರು.

ಸತ್ಯಶೋಧಕ ಸಮಾಜವು ಅದರ ಸ್ಥಾಪನೆಯ ಸಮಯದಿಂದ (1873) ಧಾರ್ಮಿಕ ಕಾರ್ಯಗಳಲ್ಲಿ ಪುರೋಹಿತರ ಮಧ್ಯಸ್ಥಿಕೆಯನ್ನು ನಿರಾಕರಿಸಿ, ಸ್ವಂತ ಆಚರಣೆಗಳನ್ನು ಜಾರಿಯಲ್ಲಿ ತರಲಾಯಿತು. ಈ ಧೋರಣೆಯಿಂದಾಗಿ ಪುರೋಹಿತಶಾಹಿ ವರ್ಗ ವಿಚಲಿತಗೊಂಡಿತು. ಸಾವಿರಾರು ವರ್ಷಗಳ ಧಾರ್ಮಿಕ ಹಕ್ಕುಗಳು ಮತ್ತು ‘ದಕ್ಷಿಣೆ’ಗೆ ಭಂಗವುಂಟಾಯಿತು. ಸತ್ಯಶೋಧಕರ ವಿರುದ್ಧ ಕೋರ್ಟ್ ಕಚೇರಿಗಳೂ ನಡೆದವು. ಆದರೆ ಬ್ರಾಹ್ಮಣೇತರ ಪಕ್ಷದ ಸ್ಥಾಪನೆಯಾದ ನಂತರ ಮುಂಬೈ ವಿಧಾನ ಪಪರಿಷತ್ ಸದಸ್ಯರಾಗಿದ್ದ ಬ್ರಾಹ್ಮಣೇತರ ನಾಯಕ ಸಿ.ಕೆ. ಬೋಲೆ ಅವರು ‘ಜೋಶಿ ವತನ್’ ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯನ್ನು 1926ರಲ್ಲಿ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು. ಇದು ಬ್ರಾಹ್ಮಣೇತರ ಪಕ್ಷಕ್ಕೆ ದೊರೆತ ದೊಡ್ಡ ಸಾಮಾಜಿಕ ಗೆಲುವು ಎಂದು ಪರಿಗಣಿಸಲಾಗುತ್ತದೆ. ಇದಕ್ಕೂ ಮುನ್ನ ಸಿ.ಕೆ. ಬೋಲೆಯವರ ‘ಸಾರ್ವಜನಿಕ ಜಲಮೂಲಗಳನ್ನು ಅಸ್ಪೃಶ್ಯರಿಗಾಗಿ ಮುಕ್ತಗೊಳಿಸಬೇಕು’ ಎಂಬ ಮಸೂದೆಯನ್ನು ಸಹ ಅಂಗೀಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿಯೇ 1927ರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಾಡ್ ಕೆರೆ ಪ್ರವೇಶದ ಹೋರಾಟವನ್ನು ಕೈಗೆತ್ತಿಕೊಂಡರು. ಈ ಸಾಮಾಜಿಕ ಹೋರಾಟದಲ್ಲೂ ಸಹಿತ ಸತ್ಯಶೋಧಕರು-ಬ್ರಾಹ್ಮಣೇತರ ನಾಯಕರು ಮುಂಚೂಣಿಯಲ್ಲಿದ್ದರು.

ರಾಜರ್ಷಿ ಶಾಹು ಮಹಾರಾಜರು ಜುಲೈ 1918ರಲ್ಲಿ ಮಾಡಿದ ಒಂದು ಭಾಷಣದಲ್ಲಿ, ಮೊಟ್ಟಮೊದಲ ಬಾರಿಗೆ ಬಹುಜನ ಸಮುದಾಯವನ್ನು ‘ಬ್ರಾಹ್ಮಣೇತರ’ ಎಂದು ಕರೆದರು. ಬಹುಶಃ ಈ ಘಟನೆಯಿಂದ ಪ್ರೇರಿತವಾಗಿ, ಪಕ್ಷಕ್ಕೆ ‘ಬ್ರಾಹ್ಮಣೇತರ ಪಕ್ಷ’ ಎಂಬ ಹೆಸರನ್ನು ತರಲಾಯಿತು ಎಂಬುದನ್ನು ತಳ್ಳಿಹಾಕುವಂತಿಲ್ಲ.

‘ಬ್ರಾಹ್ಮಣೇತರ’ ಪಕ್ಷದ ನಾಮಾಂತರದ ಪ್ರಯತ್ನಗಳೂ ನಡೆದವು. ಬ್ರಾಹ್ಮಣೇತರ ಪಕ್ಷಕ್ಕೆ ಶೇತ್ಕರಿ ಪಕ್ಷ, ಬಹುಜನ ಪಕ್ಷ, ಜರಿಪಟಕಾ ಪಕ್ಷ ಮುಂತಾದ ಪರ್ಯಾಯ ಹೆಸರುಗಳು ಬಂದವು; ಆದರೆ ‘ಬ್ರಾಹ್ಮಣೇತರ ಪಕ್ಷ’ ಎಂಬುದೇ ಮುಂದುವರೆಯಿತು. ಆದರೆ 1937ರಲ್ಲಿ ಕೂಪರ್ ಮತ್ತು ನವಲೆ ಅವರು ಬ್ರಾಹ್ಮಣೇತರ ಪಕ್ಷವನ್ನು ಒಡೆದು ‘ನಾಗರಿಕ ಶೇತ್ಕರಿ’ ಪಕ್ಷ ಸ್ಥಾಪಿಸಿದರು. ಅದಕ್ಕೂ ಮುನ್ನ ಕೇಶವರಾವ ಜೇಧೆ, ದಿನಕರರಾವ ಜವಳಕರ ಕಾಂಗ್ರೆಸ್ ಕಡೆ ವಾಲಿದ್ದರು. ಪ್ರೊ. ಅಣ್ಣಾಸಾಹೇಬ ಲಠ್ಠೆ ಅವರು 1934ರಲ್ಲಿ ಕಾಂಗ್ರೆಸ್ ಸೇರಿದರು. ಅಂತಿಮವಾಗಿ 1938ರಲ್ಲಿ ಬ್ರಾಹ್ಮಣೇತರ ಪಕ್ಷವು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಂಡಿತು.

(ಖ್ಯಾತ‌ ಮರಾಠಿ ಲೇಖಕರು ಮತ್ತು ಸತ್ಯಶೋಧಕ ಸಮಾಜದ ಮುಖಂಡರಾಗಿದ್ದ ಶ್ರೀ ಜಿ.ಎ. ಉಗಲೆ ಅವರ “ಸತ್ಯಶೋಧಕ ಸಮಾಜ ಚಳವಳಿಚ್ಯಾ ಸಮಗ್ರ ಇತಿಹಾಸ” ಕೃತಿಯ ಆಯ್ದ ಭಾಗ. ಕನ್ನಡಕ್ಕೆ- ಅನಿಲ ಹೊಸಮನಿ)

ಅನಿಲ ಹೊಸಮನಿ
ಅನಿಲ ಹೊಸಮನಿ, ವಿಜಯಪುರ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅನಿಲ ಹೊಸಮನಿ, ವಿಜಯಪುರ
ಅನಿಲ ಹೊಸಮನಿ, ವಿಜಯಪುರ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X