ಮುಂಬೈನಲ್ಲಿ ಗಿಲಿಯಾನ್ ಬಾರೆ ಸಿಂಡ್ರೋಮ್ (ಜಿಬಿಎಸ್) ಸೋಂಕಿಗೆ ಮೊದಲ ಬಲಿಯಾಗಿದೆ. ನಾಯರ್ ಆಸ್ಪತ್ರೆಯಲ್ಲಿ ಬುಧವಾರ ಜಿಬಿಎಸ್ ಸೋಂಕಿನಿಂದಾಗಿ 53 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಜಿಬಿಎಸ್‌ನಿಂದ ಮೃತಪಟ್ಟವರ ಸಂಖ್ಯೆಯು 8ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ ಆರೋಗ್ಯ ಇಲಾಖೆ ಪ್ರಕಾರ ಫೆಬ್ರವರಿ 11ರವರೆಗೆ ಒಟ್ಟು 192 ಮಂದಿಯಲ್ಲಿ ಶಂಕಿತ ಜಿಬಿಎಸ್ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 172 ಮಂದಿಯಲ್ಲಿ ಜಿಬಿಎಸ್ ಇರುವುದು ಖಚಿತವಾಗಿದೆ. ಈವರೆಗೆ 7 ಮಂದಿ ಸಾವನ್ನಪ್ಪಿರುವುದಾಗಿ ಖಚಿತಪಡಿಸಿದೆ. ಈಗ ಮುಂಬೈನಲ್ಲಿ ಮತ್ತೋರ್ವ ವ್ಯಕ್ತಿ ಮೃತಪಟ್ಟಿರುವುದರಿಂದಾಗಿ ಜಿಬಿಎಸ್ ಸೋಂಕಿಗೆ ಬಲಿಯಾದವರ ಸಂಖ್ಯೆಯು 8ಕ್ಕೆ ಏರಿಕೆಯಾಗಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಜಿಬಿಎಸ್ ವೈರಸ್‌ನಿಂದ ಮೊದಲ ಶಂಕಿತ ಸಾವು; ಪುಣೆಯಲ್ಲಿ 100 ದಾಟಿದ ಪ್ರಕರಣಗಳು
ಹೆಚ್ಚಿನ ಪ್ರಕರಣಗಳು ಪುಣೆ ಆಸುಪಾಸಿನಲ್ಲಿ ದೃಡಪಟ್ಟಿದೆ. ಪುಣೆ ಎಂಸಿ ಪ್ರದೇಶದಲ್ಲಿ ಈವರೆಗೆ 40 ಪ್ರಕರಣಗಳು ದಾಖಲಾಗಿವೆ. ಸಮೀಪದ ಹಳ್ಳಿಗಳಲ್ಲಿ 92 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪ್ರಿಂಪ್ರಿ ಚಿಂಚ್ವಾಡ್‌ನಲ್ಲಿ 29, ಪುಣೆ ಗ್ರಾಮಾಂತರ ಪ್ರದೇಶದಲ್ಲಿ 28 ಜಿಬಿಎಸ್ ಪ್ರಕರಣಗಳು ದಾಖಲಾಗಿವೆ. ಇತರೆ ಜಿಲ್ಲೆಗಳಲ್ಲಿ ಎಂಟು ಪ್ರಕರಣಗಳು ಪತ್ತೆಯಾಗಿವೆ.
ಮಹಾರಾಷ್ಟ್ರ ಆರೋಗ್ಯ ಇಲಾಖೆ ಪ್ರಕಾರ 104 ರೋಗಿಗಳು ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 50 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 20 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.
