ನಾರಾಯಣಪುರ ಜಲಾಶಯದ ಕೃಷ್ಣಾ ನದಿ ಹಿನ್ನೀರು ಬಳಸಿ, ವಿದ್ಯುತ್ ಉತ್ಪಾದಿಸುವ ಮುರುಡೇಶ್ವರ ಪವರ್ ಕಂಪೆನಿಯು ಬಾಕಿ ಉಳಿಸಿಕೊಂಡಿರುವ ₹75 ಲಕ್ಷಕ್ಕೂ ಹೆಚ್ಚು ತೆರಿಗೆಯನ್ನು ವಸೂಲಿ ಮಾಡಿ, ನಾಗಬನಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಬಳಸಬೇಕೆ ಎಂದು ಒತ್ತಾಯಿಸಿ ಯುವಜನ ಸೇನೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಪಂಚಾಯತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
ಯುವಜನ ಸೇನೆ ಅಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, “24 ವರ್ಷಗಳಲ್ಲಿ ಅಂದಾಜು ₹2ಕೋಟಿಯಿಂದ ₹3ಕೋಟಿಯಷ್ಟು ತೆರಿಗೆ ವಂಚಿಸಲಾಗಿದೆ. 2000ದಿಂದ 2024ರವರೆಗೆ ಕಂಪನಿಯು ವಿದ್ಯುತ್ ಉತ್ಪಾದನೆಯ ವಾಣಿಜ್ಯ ತೆರಿಗೆ ಕಟ್ಟಿಲ್ಲ. ಪಿಡಿಒ ಅವರಿಂದ ಜಿಲ್ಲಾಧಿಕಾರಿವರೆಗೂ ಪತ್ರ ವ್ಯವಹಾರ ನಡೆಸಿದ್ದರೂ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ವಂಚಿಸಿ ನಷ್ಟವುಂಟು ಮಾಡಿದ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಖೋಬಾ ಸಿಂಗ್ ಜಾದವ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ಈವರೆಗೆ ಕೈಗೊಂಡ ಕ್ರಮಗಳ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಎನ್ ಎಸ್ ಮುಸಳಿ ಆಗಮಿಸಿ ಬೇಡಿಕೆ ಪರಿಶೀಲಿಸಲು ಕಾಲಾವಕಾಶ ಕೇಳಿದರು.
ಆಕ್ರೋಶಗೊಂಡ ಹೋರಾಟಗಾರರು, “ಈ ಕುರಿತು ಅನೇಕ ಬಾರಿ ಪಿಡಿಒ, ತಾಲೂಕು ಪಂಚಾಯಿತಿಯ ಈ ಹೊಂದಿನ ಇಒ ಗಮನಕ್ಕೂ ತಂದಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ತೆರಿಗೆ ವಂಚನೆ ಕುರಿತು ಕ್ರಮ ಕೈಗೊಳ್ಳುವದಾಗಿ, ಬಾಕಿ ತೆರಿಗೆ ತುಂಬಿಸಿಕೊಳ್ಳುವುದಾಗಿ ಲಿಖಿತ ಪತ್ರ ನೀಡಿದರೆ ಮಾತ್ರ ಧರಣಿ ಕೈಬಿಡುತ್ತೇವೆ” ಎಂದು ಹೋರಾಟಗಾರರು ಪಟ್ಟುಹಿಡಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಅಪರಾಧಿಗೆ 1 ವರ್ಷ ಸಜೆ
ಈ ವೇಳೆ ಸಂಘಟನೆಗಳ ಮುಖಂಡರುಗಳಾದ ಗಿರಿಯಪ್ಪ ತಳವಾರ, ಮಲ್ಲು ಬಿಜ್ಜುರ, ರಾಜು ಮಾಸಬಿನಾಳ, ಸಂಗಯ್ಯ ಸಾರಂಗ ಮಠ, ಶಿವು ಒನಕಿಹಾಳ, ರಫೀಕ್ ತಗ್ಗಿನಮನಿ, ಬಾಬು ತಡ್ಲಿಮನಿ, ಗುರು ತಂಗಡಗಿ, ಶಕೀಲ್ ಅವಟಿ, ರಾಹುಲ್ ಚಲವಾದಿ, ರಮೇಶ ಚಲವಾದಿ, ಶರಣ ಕಂಬಳಿ, ವೀರೇಶ ವಡ್ಡರ, ಸಂಗಮೇಶ ತಳವಾರ, ಶೇಖಪ್ಪ ಚಲವಾದಿ ಮಂಜುನಾಥ ತಿಳಗೂರ ಸೇರಿದಂತೆ ಇತರರು ಇದ್ದರು.