ಮಾರ್ಚ್ 12ರಂದು ಮಂಡನೆಯಾಗಲಿರುವ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ಅಭಿವೃದ್ದಿ ಮತ್ತು ವಸತಿ ಸೌಲಭ್ಯ ಒಗದಿಸಲು ವಿಶೇಷ ಅನುದಾನ ಒದಗಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಭರವಸೆ ನೀಡಿದ್ದಾರೆ.
ಬುಧವಾರ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿ ಮಹಿಳಾ ಸಂಘಟನೆಯ ಮುಖಂಡರ ನಿಯೋಗವು ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿದ್ದು, ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಸ್ಲಂ ನಿವಾಸಿಗಳಿಗೆ ವಸತಿ ಸೌಕರ್ಯ ನೀಡಲು 5,000 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಹಕ್ಕೊತ್ತಾಯ ಸಲ್ಲಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ, “ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆರಂಭಗೊಂಡು 50 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ, 50 ಸ್ಲಂಗಳನ್ನು ಮಾದರಿ ಕೊಳಚೆ ಪ್ರದೇಶಗಳಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕು. 2025-26ನೇ ಸಾಲಿನ ಬಜೆಟ್‌ನಲ್ಲಿ 2,816 ಕೊಳಗೇರಿಗಳ ಸಮಗ್ರ ಅಭಿವೃದ್ಧಿಗಾಗಿ 5,000 ಕೋಟಿ ರೂ. ಅನುದಾನ ನೀಡಬೇಕು. ಸ್ಲಂಗಳಲ್ಲಿ ವಸತಿ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ/ಒಳಚರಂಡಿ, ಶೌಚಾಲಯ, ಸಮುದಾಯ ಭವನಗಳು, ಶಾಲಾ ಕಟ್ಟಡಗಳ ಅಭಿವೃದ್ಧಿ, ಒಳಗೊಂಡ ಬೇಂಚ್ ಮಾರ್ಕ್ ಸೌಲಭ್ಯಗಳನ್ನು ಒದಗಿಸಲು ‘ಒನ್ ಟೈಮ್ ಗ್ರ್ಯಾಂಟ್’ಗಳನ್ನು ಘೋಷಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮತ್ತು ಮೇಲ್ಪಾಟು ಕಾಯಿದೆಯ ಕಲಂ-3ನ ಅಡಿಯಲ್ಲಿ ರಾಜ್ಯಾದ್ಯಂತ 704 ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲು 500 ಕೋಟಿ ರೂಗಳನ್ನು ಕೊಳಗೇರಿ ಮಂಡಳಿಗೆ ನೀಡಬೇಕು. ಸ್ಲಂಗಳಲ್ಲಿನ ಯುವಜನರಿಗಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸ್ಲಂಜನರ ಶೈಕ್ಷಣಿಕ ಮಾರ್ಗದರ್ಶನ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ನೀಡುವ 50 ಇನ್ಕ್ಯೂಬೇಷನ್ ಸೆಂಟರ್‌ಗಳನ್ನು ಸ್ಥಾಪಿಸಬೇಕು. ಅದಕ್ಕಾಗಿ 250 ಕೋಟಿ ರೂಗಳನ್ನು ನೀಡಬೇಕು. ಕೊಳಗೇರಿ ಮಂಡಳಿಯು ಈ ಹಿಂದೆ ನಿರ್ಮಿಸಿರುವ ಮಂಡಳಿಯ ವಸತಿ ಸಮುಚ್ಛಯಗಳು ಶಿಥಿಲಗೊಂಡಿದ್ದು, ಸ್ಲಂ ನಿವಾಸಿಗಳು ಜೀವಭಯದಿಂದ ಬದುಕುತ್ತಿದ್ದಾರೆ. ಆ ವಸತಿ ಸಮುಚ್ಛಗಳ ನವೀಕರಣಕ್ಕೆ 250 ಕೋಟಿ ರೂ. ಅನುದಾನ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು. 2017-18ರ ಬಜೆಟ್ ಭಾಷಣದಲ್ಲಿ ಘೋಷಿಸಿರುವ ‘ನಗರ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಕಾರ್ಯಗತಗೊಳಿಸಿ ನಗರದಲ್ಲಿರುವ ನಿವೇಶನ ರಹಿತರಿಗೆ ವಸತಿ ಸೌಲಭ್ಯ ದೊರಕಿಸಲು ಮತ್ತು ಬಡವರು ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯದ ಜನರಿಗೆ ಸ್ವಂತ ಮನೆಯನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಬೇಕು. ಸಾಮಾಜಿಕ ಅಸಮಾನತೆಯ ಭಾಗವಾದ ಸ್ಲಂಜನರ ಆರ್ಥಿಕ ಅಭಿವೃದ್ಧಿಗೆ ‘ನಗರ ಉದ್ಯೋಗ ಖಾತ್ರಿ ಯೋಜನೆ’ಯನ್ನು ಘೋಷಿಸಬೇಕು. ವಸತಿ ವಿಷಯ ಸಂವಿಧಾನದ ರಾಜ್ಯ ಪಟ್ಟಿಯಲ್ಲಿರುವುದರಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಬದಲಾಗಿ ‘ಮುಖ್ಯಮಂತ್ರಿಗಳ ಶ್ರಮ ನಿವಾಸ್ ಯೋಜನೆ’ಯೆಂದು ಘೋಷಿಸಿ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ನಿಯೋಗದ ಮನವಿಯನ್ನು ಆಲಿಸಿದ ಸಚಿವ ಜಮೀರ್ ಅಹಮದ್ ಖಾನ್, “ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ 50 ವರ್ಷ ಪೂರೈಯಿಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಕನಿಷ್ಠ 50 ಸ್ಲಂಗಳನ್ನು ಮಾದರಿ ಸ್ಲಂಗಳನ್ನಾಗಿ ಅಭಿವೃದ್ಧಿ ಪಡಿಸಲು ಮತ್ತು ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು 2025-2026ನೇ ಸಾಲಿನ ಬಜೆಟ್‌ನಲ್ಲಿ 500 ರೂ. ಕೋಟಿ ಅನುದಾನ ನೀಡಲಾಗುತ್ತದೆ. ಈಗಾಗಲೇ, ರಾಜ್ಯದ ಖಾಸಗಿ ಕೊಳಚೆ ಪ್ರದೇಶಗಳ ಭೂಸ್ವಾಧೀನಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುವುದು. ವಸತಿ ಗ್ಯಾರಂಟಿ ನೀಡಲು 6,000 ಕೋಟಿ ರೂ. ನಿಗಧಿಮಾಡಲಾಗಿದ್ದು, ಈ ಬಜೆಟ್‌ನಲ್ಲಿ 2,462 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.
“ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆಯನ್ನು ಬಲಪಡಿಸುವ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಅದಕ್ಕಾಗಿ, ತಜ್ಞರ ಸಮಿತಿ ರಚಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ರಾಜ್ಯದಲ್ಲಿ ಪಿಎಂಎವೈ ವಸತಿ ಸೌಲಭ್ಯ ಪಡೆಯಲಿರುವ ಪರಿಶಿಷ್ಟ ಜಾತಿ/ಪಂಗಡದ ಕುಟುಂಬಗಳಿಗೆ ಎಸ್‌ಸಿ/ಎಸ್‌ಟಿ ಅನುದಾನದಡಿ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು” ಎಂದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ಅಬ್ಬಯ್ಯ, ಆಯುಕ್ತ ಡಾ.ಅಶೋಕ್, ಮುಖ್ಯ ಇಂಜಿನಿಯರ್ ಸುಧೀರ್, ಮಂಡಳಿಯ ಸದಸ್ಯರು ಹಾಗೂ ಸಾವಿತ್ರಿ ಬಾಪೂಲೆ ಮಹಿಳಾ ಸಂಘಟನೆಯ ಸಂಚಾಲಕಿ ಚಂದ್ರಮ್ಮ, ಮಂಜುಬಾಯಿ, ಸ್ಲಂ ನಾಂದೋಲನ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ಆಂಜಿನಯ್ಯ, ಹಣಮಂತಕಟ್ಟಿಮನಿ, ರಾಮಕೃಷ್ಣ, ವಳ್ಳಿಯಮ್ಮ,ಅಸ್ಮ,ರೇಷ್ಮಾ, ವೀರಭದ್ರ, ಶರಣು ಇದ್ದರು.