ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ಸೇವಾ ಸೌಲಭ್ಯ ಒದಗಿಸುವುದು ಸೇರಿದಂತೆ ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಕಚೇರಿ ಎದುರು ಸೋಮವಾರದಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸಂಘದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸೆಪ್ಟೆಂಬರ್‌ನಲ್ಲಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸರ್ಕಾರ ಭರವಸೆಯಂತೆ ಕೈಬಿಡಲಾಗಿತ್ತು. ಆದರೆ ಬೇಡಿಕೆ ಈಡೇರಿಸಲು ರಚಿಸಿರುವ ಸಮಿತಿಯು ನಿಷ್ಕ್ರಿಯೆಗೊಂಡಿರುವುದರಿಂದ ಸಮಸ್ಯೆಗಳು ಇದುವರೆಗೂ ಬಗೆಹರಿದಿಲ್ಲ ಎಂದು ಗ್ರಾಮ ಆಡಳಿತಾಧಿಕಾರಿಗಳು ಆರೋಪಿಸಿದ್ದಾರೆ.
ನಮ್ಮ ಸಮಸ್ಯೆಗಳ ಕುರಿತು ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ರಾಜ್ಯ ಸಂಘದ ನಿರ್ದೇಶನದಂತೆ ರಾಜ್ಯಾದ್ಯಂತ ಮುಷ್ಕರ ಕೈಗೊಂಡಿದ್ದು, ಕರ್ತವ್ಯದ ಸಮಯದಲ್ಲಿ ಸಮರ್ಪಕವಾಗಿ ಸೇವೆಗೆ ಅಗತ್ಯವಾಗಿರುವ ಸುಸಜ್ಜಿತ ಕಚೇರಿ, ಕುರ್ಚಿ, ಟೇಬಲ್, ಲ್ಯಾಪ್‌ಟಾಪ್, ಮೊಬೈಲ್, ಸಿಮ್, ಸ್ಕಾನರ್ ಸೌಲಭ್ಯ ಒದಗಿಸಬೇಕು. ಅಂತರ ಜಿಲ್ಲಾ ವರ್ಗಾವಣೆ ಕಲ್ಪಿಸಬೇಕೆಂಬ ಬೇಡಿಕೆ ಈಡೇರಿಸಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಅಧ್ವಾನದ ಆಗರ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆ
ಧರಣಿ ವೇಳೆ ಕಂದಾಯ ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ಸಂಘದ ತಾಲೂಕು ಅಧ್ಯಕ್ಷ ಪರಶುರಾಮ್, ಗೌರವಾಧ್ಯಕ್ಷ ಶಂಕರರೆಡ್ಡಿ, ಖಜಾಂಚಿ ಮಂಜುನಾಥ್, ಕಾರ್ಯದರ್ಶಿ ಪುನೀತ್, ದೀಪ, ವಿದ್ಯಾ ಇದ್ದರು.