ಚಿತ್ರದುರ್ಗದ ಬಳಿಕ ದಾವಣಗೆರೆಯಲ್ಲೂ ಇತ್ತೀಚಿಗೆ ನಡೆದ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ದಾವಣಗೆರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮತಗಳ ಮರು ಎಣಿಕೆಗೆ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಎನ್ ಎಸ್ ಯು ಐ ಅಧ್ಯಕ್ಷ ಸೈಯದ್ ಸುಹೇಲ್ “ಯುವ ಕಾಂಗ್ರೆಸ್ ದಾವಣಗೆರೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಂಚನೆ ಆಗಿದ್ದು, ಪಾರದರ್ಶಕವಾಗಿ ನಡೆದಿಲ್ಲ, ಅಕ್ರಮವಾಗಿರುವ ಶಂಕೆ ವ್ಯಕ್ತವಾಗಿದೆ. ಮರು ಎಣಿಕೆ ಮಾಡಿ ಚುನಾವಣಾ ಫಲಿತಾಂಶ ಘೋಷಿಸಿ, ಅರ್ಹ ಅಭ್ಯರ್ಥಿ ಆಯ್ಕೆ ಮಾಡಬೇಕು” ಎಂದು ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದರು.
“ಕರ್ನಾಟಕ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರೆಹಮತ್ ಪೈಲ್ವಾನ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಗೆ 28-30 ಸಾವಿರ ಸದಸ್ಯತ್ವ ತಂದುಕೊಟ್ಟಿದ್ದಾರೆ. ಆದರೆ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ 10067 ಮತ ಗಳಿಸಿದ್ದಾರೆ. ಉಳಿದ ಮತಗಳು ಏನಾದವು ಎನ್ನುವ ಶಂಕೆ ವ್ಯಕ್ತವಾಗಿದೆ. ಹೊನ್ನಾಳಿ ವಿಧಾನಸಭಾ ವ್ಯಾಪ್ತಿಯ ಏಳು ಸಾವಿರ ಮತ ತಡೆಹಿಡಿಯಲಾಗಿದೆ. ಅದರಲ್ಲಿ ಐದು ಸಾವಿರ ಮತಗಳು ರೆಹಮತ್ ಅವರಿಗೆ ಸೇರಿದ್ದು ಎಂಬ ಮಾಹಿತಿ ಇದೆ” ಎಂದು ಅನುಮಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೇಡಿಕೆ ಈಡೇರಿಸುವಂತೆ ಗ್ರಾಮ ಆಡಳಿತಾಧಿಕಾರಿಗಳ ಮೌನ ಪ್ರತಿಭಟನೆ
“ನಮಗೆ ಪರಿಪೂರ್ಣ ಫಲಿತಾಂಶ ಬೇಕು, ಇದರಲ್ಲಿ ರೆಹಮತ್ ಪೈಲ್ವಾನ್‌ರವರ ಸದಸ್ಯತ್ವದ ಮತ್ತು ಮತಗಳ ಬಗ್ಗೆ ಖಚಿತವಾದ ಮಾಹಿತಿ ನೀಡಬೇಕು. ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಜೈಲುವಾಸ ಅನುಭವಿಸಿದ್ದರು. ವಿಧ್ಯಾರ್ಥಿ ಘಟಕದ ಅಧ್ಯಕ್ಷರಾಗಿ, 12 ವರ್ಷಗಳಿಂದ ಕಾಂಗ್ರೆಸ್ ಗಾಗಿ ದುಡಿಯುತ್ತಿದ್ದಾರೆ. ರೆಹಮತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಆಯ್ಕೆ. ಚುನಾವಣೆಯಲ್ಲಿ ಅವರಿಗೆ ಅನ್ಯಾಯವಾಗಿದೆ. ನಾವು ಚುನಾವಣೆ ಅಧಿಕಾರಿಗಳಿಗೆ ಹಲವು ಬಾರಿ ಕರೆ ಮಾಡಿದರೂ, ನಮ್ಮ ಕರೆಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಪಕ್ಷದ ಚುನಾವಣೆಗಳಲ್ಲಿ ಈ ರೀತಿಯ ಕೆಲಸಗಳು ಏಕೆ ನಡೆಯುತ್ತಿವೆ. ಚುನಾವಣಾ ಸಮಿತಿ ಯಾಕೆ ಈ ರೀತಿ ವರ್ತಿಸಿದೆ ತಿಳಿಯುತ್ತಿಲ್ಲ. ದಯವಿಟ್ಟು ರೆಹಮತ್ ಪೈಲ್ವಾನ್‌ರವರ ಸದಸ್ಯತ್ವ ಮತಗಳನ್ನು ಮರು-ಎಣಿಸಿ ಸರಿಯಾದ ಫಲಿತಾಂಶ ಘೋಷಿಸಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಡಿ.ಮನೋಜ್. ಜಾವೀದ್, ಮಹಮ್ಮದ್ ಬಿಲಾಲ್, ಸುಹಾಸ್ ಪಾಲ್ಗೊಂಡಿದ್ದರು.
