ಮೈಸೂರಿನ ಉದಯಗಿರಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಈವರೆಗೆ 8 ಮಂದಿಯನ್ನು ಬಂಧಿಸಲಾಗಿದೆ. ವಿಚಾರಣೆಗೆ ಒಳಮಡಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಸುಹೇಲ್, ರಾಹಿಲ್, ಅಯಾನ್, ಸೈಯದ್ ಸಾದಿಕ್, ಶೋಹೇಬ್ ಪಾಷಾ, ಸಾದಿಕ್ ಪಾಷಾ, ಅರ್ಬಾಝ್ ಷರೀಫ್, ಇಜಾಝ್ ಎಂದು ಹೆಸರಿನಲಾಗಿದೆ. ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ, ಈ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಘಟನೆಯಲ್ಲಿ ಭಾಗಿಯಾಗಿದ್ದ 60 ಜನರ ಗುರುತು ಪತ್ತೆ ಮಾಡಲಾಗಿದೆ. ಈವರೆಗೆ 15 ಮಂದಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಘಟನೆ ನಡೆದಾಗ ಆ ಸ್ಥಳದಲ್ಲಿ ಇದ್ದ ಮೊಬೈಲ್‌ಗಳ ಸಂಖ್ಯೆಗಳನ್ನು ಟವರ್ ಸಿಗ್ನಲ್ ಮೂಲಕ ಸಿಸಿಬಿ ತಾಂತ್ರಿಕ ತಂಡ ಪತ್ತೆ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ, ಮೈಸೂರಿನ ಉದಯಗಿರಿ ನಿವಾಸಿ ಸುರೇಶ್ ಎಂಬಾತ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದ, ಅದರಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರನ್ನು ಅರೆನಗ್ನ ರೀತಿಯಲ್ಲಿ ಚಿತ್ರಿಸಿ, ಅವರ ತೊಡೆಮೇಲೆ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತಿರುವಂತೆ ಚಿತ್ರಿಸಲಾಗಿತ್ತು. ಜೊತೆಗೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತು ಅವಹೇನಾಕಾರಿ ಸಾಲುಗಳನ್ನು ಬರೆಯಲಾಗಿತ್ತು.
ಆ ಪೋಸ್ಟ್ ವೈರಲ್ ಆದ ಬಳಿಕ, ಸೋಮವಾರ ರಾತ್ರಿ, ಮುಸ್ಲಿಂ ಸಮುದಾಯ ಮುಖಂಡರು ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಆರೋಪಿ ಸುರೇಶ್‌ನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಯತ್ನಿಸಿದಾಗ, ಕಲ್ಲು ತೂರಾಟ ನಡೆದಿದೆ. ಬಳಿಕ, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದರು. ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ, ಪ್ರತಿಭಟನೆ ಸ್ಥಗಿತಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಮಂಗಳವಾರ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.