ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 209 ರನ್‌ಗಳ ಅಂತರದಲ್ಲಿ ಮಣಿಸಿದ ಆಸ್ಟ್ರೇಲಿಯಾ, ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ ಆಸೀಸ್ ಪಡೆ 444 ರನ್‌ಗಳ ಕಠಿಣ ಗುರಿಯನ್ನು ಮುಂದಿಟ್ಟಿತ್ತು. ಆದರೆ ಅಂತಿಮ ದಿನವಾದ ಭಾನುವಾರ 234 ರನ್‌ಗಳಿಸುವಷ್ಟರಲ್ಲಿ ರೋಹಿತ್ ಪಡೆ ಆಲೌಟ್ ಆಯಿತು.
ಈ ಬಾರಿಯ ಡಬ್ಲ್ಯೂಟಿಸಿ ಗೆಲುವಿನೊಂದಿಗೆ, ಆಸ್ಟ್ರೇಲಿಯಾ ತಂಡವು ಎಲ್ಲಾ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವೆಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಮತ್ತೊಂದೆಡೆ, 2014ರ ಬಳಿಕ, ಐಸಿಸಿ ಆಯೋಜಿಸುವ ಟೂರ್ನಿಯ ನಾಲ್ಕನೇ ಫೈನಲ್‌ನಲ್ಲೂ ಭಾರತ ಪ್ರಶಸ್ತಿಯಿಂದ ದೂರ ಉಳಿದಿದೆ. ಕಳೆದ ಬಾರಿಯೂ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಮುಗ್ಗರಿಸಿತ್ತು.
444 ರನ್ ಟಾರ್ಗೆಟ್-234 ರನ್‌ಗಳಿಗೆ ಆಲೌಟ್!
8 ವಿಕೆಟ್ ನಷ್ಟದಲ್ಲಿ 270 ರನ್‌ಗಳಿಸಿದ್ದ ವೇಳೆ ಶನಿವಾರ ಆಸೀಸ್, ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತ್ತು. ಆ ಮೂಲಕ ಟೀಮ್ ಇಂಡಿಯಾ ಗೆಲುವಿಗೆ 444 ರನ್‌ಗಳ ಕಠಿಣ ಗುರಿ ನಿಗದಿಪಡಿಸಿತ್ತು.
ಫೈನಲ್ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ, 3 ವಿಕೆಟ್ ನಷ್ಟದಲ್ಲಿ 164 ರನ್‌ಗಳಿಸಿತ್ತು. ಅಂತಿಮ ದಿನದಲ್ಲಿ ರೋಹಿತ್ ಪಡೆ ಗೆಲುವಿಗೆ, 7 ವಿಕೆಟ್‌ಗಳ ನೆರವಿನಿಂದ 280 ರನ್ ಗಳಿಸಬೇಕಾಗಿತ್ತು.
44 ರನ್‌ಗಳಿಂದ ಭಾನುವಾರ ಬ್ಯಾಟಿಂಗ್ ಆರಂಭಿಸಿದ್ದ ವಿರಾಟ್ ಕೊಹ್ಲಿ49 ರನ್ ಮತ್ತು 20 ರನ್‌ಗಳಿಸಿದ್ದ ಅಜಿಂಕ್ಯಾ ರಹಾನೆ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇವರಿಬ್ಬರು ನಿರ್ಗಮಿಸುತ್ತಲೇ ಭಾರತದ ಪತನ ಆರಂಭವಾಗಿತ್ತು. ಎಸ್ ಭರತ್ 23 ರನ್‌ಗಳಿಸಿ ತುಸು ಪ್ರತಿರೋಧ ತೋರಿದರು.
ರವೀಂದ್ರ ಜಡೇಜಾ ಶೂನ್ಯ ಸುತ್ತಿದರೆ, ಉಮೇಶ್ ಯಾದವ್ ಮತ್ತು ಸಿರಾಜ್ ತಲಾ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಮುಹಮ್ಮದ್ ಶಮಿ 13 ರನ್ ಗಳಿಸಿ ಅಜೇಯರಾಗುಳಿದರು.
ಟೀಮ್ ಇಂಡಿಯಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯಾವುದೇ ಬ್ಯಾಟರ್‌ಗಳು ಅರ್ಧ ಶತಕದ ಗಡಿಯನ್ನೂ ದಾಟಲಿಲ್ಲ. 49 ರನ್‌ಗಳಿಸಿದ ಕೊಹ್ಲಿಯವರದ್ದೇ ಸರ್ವಾಧಿಕ ಗಳಿಕೆ.
ವಿಜೇತ ತಂಡದ ಪರ ಸ್ಪಿನ್ನರ್ ನಾಥನ್ ಲಿಯಾನ್ 4 ಮತ್ತು ಸ್ಕಾಟ್ ಬೊಲಾಂಡ್ 3 ವಿಕೆಟ್ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಟ್ರಾವಿಡ್ ಹೆಡ್ ಪಡೆದುಕೊಂಡರು.