ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಫೆಬ್ರವರಿ 6ರಿಂದ ಹೋರಾಟ ನಡೆಸುತ್ತಿರುವ ದಲಿತ ಮಹಿಳೆಗೆ ಇನ್ನೂ ಪರಿಹಾರ ದೊರಕದಿದ್ದು, ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.
ಶಿವಮೊಗ್ಗ ನಗರದ ನಿವಾಸಿ ಉಮಾದೇವಿ ನ್ಯಾಯಕ್ಕಾಗಿ ಧರಣಿ ಕೂತಿದ್ದಾರೆ. ಹಸೂಡಿ ಗ್ರಾಮದ ಸರ್ವೇ ನಂಬರ್ 134/6ರಲ್ಲಿನ ಎರಡು ಎಕರೆ ಜಮೀನನ್ನು ಪಿಟಿಸಿಎಲ್ ಕಾಯ್ದೆಯಡಿ ಮರು ಸ್ವಾಧೀನ ಮಾಡಿಕೊಡಬೇಕೆಂದು ಈ ಹಿಂದೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 11-12-1985ರಂದು ಆದೇಶವಾಗಿತ್ತು. ಜೆ ಜೆ ವೆಂಕಟೇಶ್ ಎಂಬವವರು ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದರು.
ತೀರ್ಪಿನ ವಿರುದ್ಧ ಪ್ರತಿವಾದಿಯು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ನಂತರ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯಗಳು ತೀರ್ಪು ನೀಡಿದ್ದು ಜಮೀನನ್ನು ತೆರವುಗೊಳಿಸಬೇಕಿದೆ. ಅಧಿಕಾರಿಗಳು ನೋಟಿಸ್ ನೀಡಿ ಶೀಘ್ರದಲ್ಲಿ ಮರು ಸ್ವಾಧೀನಪಡಿಸಿಕೊಡಬೇಕಿದೆ. ಈ ಸಂಬಂಧ ಉಮಾದೇವಿ ಹೋರಾಟಕ್ಕೆ ಕುಳಿತಿದ್ದಾರೆ. ಕಾನೂನುಯುತವಾಗಿ ಬರಬೇಕಾದ ಭೂಮಿಗಾಗಿ ಬೇಡಿಕೊಳ್ಳುವಂತಾಗಿದೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಶಾಸಕ ಸಂಗಮೇಶ್ ರಾಜಿನಾಮೆಗೆ ಆಗ್ರಹಿಸಿ ಫೆ.14 ರಂದು ಜೆಡಿಎಸ್ ಪ್ರತಿಭಟನೆ
“ಆದೇಶ ಪ್ರತಿ ಸ್ಪಷ್ಟವಾಗಿದೆ. ದಿನಾಂಕ 09-01-2025ರಂದು ಹೈಕೋರ್ಟ್ ನೀಡಿರುವ ಆದೇಶದಂತೆ ಜಮೀನನ್ನು ಜೆ ಜೆ ವೆಂಕಟೇಶ್ ಅವರಿಂದ ಬಿಡಿಸಿಕೊಡಬೇಕಾಗಿದೆ. ಇಲ್ಲಿವರೆಗೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ” ಎಂದು ಉಮಾದೇವಿ ಆರೋಪಿಸುತ್ತಿದ್ದಾರೆ.
ಉಪವಿಭಾಗಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಉಚ್ಚ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡದೆ ಬರೀ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯು ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದು, “ನ್ಯಾಯ ಸಿಗುವವರೆಗೂ, ಜಮೀನನ್ನು ಉಮಾದೇವಿಯವರಿಗೆ ಸ್ವಾಧೀನಪಡಿಸಿ ಕೊಡುವವರೆಗೂ ಧರಣಿ ಮುಂದುವರಿಸುತ್ತೇವೆ” ಎಂದು ಸಮಿತಿ ಹೇಳಿದೆ.
