ಎಂಎಸ್‌ಪಿ ಜಾರಿಗಾಗಿ ಆಗ್ರಹಿಸಿ ಪಂಜಾಬ್-ಹರಿಯಾಣ ಗಡಿಯಲ್ಲಿ ಹಲವು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರೈತರೊಬ್ಬರು ಪ್ರತಿಭಟನಾ ಸ್ಥಳದಿಂದ ಮನೆಗೆ ಮರಳಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವ ಘಟನೆ ಪಂಜಾಬ್ ಸಂಗ್ರೂರ್ ಜಿಲ್ಲೆಯಲ್ಲಿ ನಡೆದಿದೆ.
ಜಜಿಲ್ಲೆಯ ಲೆಹ್ರಾಗಾಗ ಪ್ರದೇಶದ ಅಲಂಪುರ್ ಗ್ರಾಮದ ಸುರಿಂದರ್ಜಿತ್ ಸಿಂಗ್ (59) ಮೃತಪಟ್ಟಿರುವ ರೈತ. ಅವರು ರೈತ ಸಂಘಟನೆ ಬಿಕೆಯುನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ.
ಸುರಿಂದರ್ಜಿತ್ ಅವರು ಖಾನೌರಿ ಪ್ರತಿಭಟನಾ ಸ್ಥಳದಲ್ಲಿ ದೀರ್ಘಕಾಲದಿಂದ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗ್ಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಬಗ್ಗೆ ತೀವ್ರ ದುಃಖಿತರಾಗಿದ್ದರು ಎಂದು ರೈತ ನಾಯಕರು ಹೇಳಿದ್ದಾರೆ.
ಫೆಬ್ರವರಿ 12 ರಂದು, ಜ್ವರ ಮತ್ತು ಇತರ ಕಾಯಿಲೆಗಳಿಗೆ ಸುರಿಂದರ್ಜಿತ್ ತುತ್ತಾಗಿದ್ದಾರೆ. ಹೀಗಾಗಿ, ಅವರನ್ನು ಮನೆಗೆ ಕಳುಹಿಸಲಾಗಿತ್ತು. ದುರಂತವೆಂದರೆ, ಅವರು ಮನೆಗೆ ಮರಳಿದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರ ಸಾವು ಪ್ರತಿಭಟನಾ ನಿರತ ರೈತರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.