“ಧರ್ಮ ನಿಂದನೆ ಮಾಡಿದರೆ ಪೊಲೀಸ್‌ ಠಾಣೆಗೆ ಕಲ್ಲು ತೂರಿ” ಎಂದು ಯಾವ ಧರ್ಮ ಹೇಳಿದೆ?!

Date:

Advertisements

ತಮಗಾದ ಅನ್ಯಾಯಕ್ಕೋ, ಅವಮಾನಕ್ಕೋ ಕಾನೂನಿನ ಅಡಿಯಲ್ಲಿಯೇ ಪರಿಹಾರ ಕಂಡುಕೊಳ್ಳಬೇಕೇ ವಿನಃ ಆ ಕೋಪವನ್ನು ಪೊಲೀಸ್‌ ಠಾಣೆಗಳಿಗೆ ಕಲ್ಲು ತೂರುವ ಮೂಲಕ, ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ? ಮತಿಗೇಡಿ ಯುವಕರ ಅತಿರೇಕದ ವರ್ತನೆಯಿಂದ ಕೋಮು ಗಲಭೆಯಾದರೆ ಅಲ್ಲಿ ಅವಕಾಶವಾದದ ಬೆಂಕಿ ಕಾಯಿಸಿಕೊಳ್ಳಲು ರಾಜಕಾರಣಿಗಳು ಹದ್ದಿನಂತೆ ಕಾದಿರುತ್ತಾರೆ.

“ಮುಸ್ಲಿಮರು ಕಲ್ಲು ತೂರೋರು, ಬಾಂಬ್‌ ಇಡೋರು, ಭಯೋತ್ಪಾದಕರು….” ಇತ್ಯಾದಿ ವಿಶೇಷಣಗಳನ್ನು ಬಿಜೆಪಿ ಮತ್ತು ಸಂಘಪರಿವಾರ ಪ್ರೇರಿತ ಸಂಘಟನೆಗಳ ಬೆಂಬಲಿಗರು, ಬಿಜೆಪಿ ನಾಯಕರು, ಕಾರ್ಯಕರ್ತರು ಅವಕಾಶ ಸಿಕ್ಕಾಗಲೆಲ್ಲ ಬಳಸುತ್ತಾ ಬಂದಿದ್ದಾರೆ. ಬಲಪಂಥೀಯರ ಮಡಿಲ ಕೂಸು ಟಿ ವಿ ಮಾಧ್ಯಮಗಳು ಇಂತಹದೊಂದು ಸುದ್ದಿಗೆ ತಹತಹಿಸುತ್ತಿರುತ್ತವೆ. ಅದಕ್ಕೆ ಸರಿಯಾಗಿ ಮುಸ್ಲಿಂ ಯುವಕರು ಆಗಾಗ ಕುಕ್ಕರಲ್ಲಿ ಬಾಂಬ್‌ ಇಟ್ಟು ಸ್ಪೋಟಿಸೋದು, ಹೋಟೆಲಿನಲ್ಲಿ ಬಾಂಬ್‌ ಇಡುವ ಕುಕೃತ್ಯಗಳನ್ನು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಹೇಳೋದಕ್ಕೂ, ಇವರು ಮಾಡೋದಕ್ಕೂ ಸರಿ ಹೋಯ್ತು!

ಮತಾಂಧ ಹಿಂದುತ್ವ ಕಾರ್ಯಕರ್ತರು ತಮ್ಮ ಶ್ರದ್ಧಾ ಭಕ್ತಿಗಳಿಂದ ಆಚರಿಸಬೇಕಾದ ಗಣೇಶ ವಿಸರ್ಜನೆ, ಹನುಮ ಜಯಂತಿ, ಶ್ರೀರಾಮನವಮಿ ಮೆರವಣಿಗೆ ಹೀಗೆ ಬೀದಿಯಲ್ಲಿ ಸಾಗುವಾಗ ಮಸೀದಿಯ ಧ್ವಜ ಕಿತ್ತು ಭಗವಾಧ್ವಜ ನೆಡುವುದು, ಮಸೀದಿಯೊಳಗೆ ಕಲ್ಲೆಸೆಯುವುದು, ಮಸೀದಿ ಬಳಿ ಡಿ ಜೆ ಹಾಕಿ ಕುಣಿಯೋದು ಮುಂತಾದ ಕುಚೇಷ್ಠೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಮತಾಂಧರು ಯಾವುದೇ ಧರ್ಮದಲ್ಲಿದ್ದರೂ ಅದು ಇಡೀ ಧರ್ಮಕ್ಕೇ ಅಪಾಯ, ಅಷ್ಟೇ ಅಲ್ಲ ಸಮಾಜಕ್ಕೂ ಮಾರಕ ರೋಗ ಕ್ಯಾನ್ಸರ್‌ ಇದ್ದಂತೆ.

Advertisements

ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬುದು ಮುಖ್ಯ ಅಲ್ಲ. ಪರಸ್ಪರ ಎರಡೂ ಧರ್ಮದವರು ಬೇರೆ ಧರ್ಮವನ್ನು ನಿಂದನೆ ಮಾಡುವುದರಲ್ಲಿ ಎತ್ತಿದ ಕೈ. ಕೆಲವರಿಗೆ ವ್ಯಕ್ತಿಗಳನ್ನು ನಿಂದಿಸಿದರೆ ಸಾಲದು, ಮಧ್ಯೆ ದೇವರನ್ನು ಎಳೆದು ತಂದು ನೋಯಿಸಿದರೆ ಏನೋ ವಿಕೃತ ಖುಷಿ. ಹೀಗೆ ಮಾಡಿ ಪರಸ್ಪರ ಕೋಮು ಗಲಭೆ ಆದರೆ ಅಲ್ಲಿ ಬೆಂಕಿ ಕಾಯಿಸಿಕೊಳ್ಳಲು ರಾಜಕಾರಣಿಗಳು ಹದ್ದಿನಂತೆ ಕಾದಿರುತ್ತಾರೆ. ಅಲ್ಲಿಗೆ ಪೊಲೀಸರಿಗೆ ಕೈತುಂಬ ಕೆಲಸ. ಕಾನೂನು ಮೀರಿ ವರ್ತಿಸಿ ಬಿಗುವಿನ ವಾತಾವರಣ ಸೃಷ್ಟಿ ಮಾಡೋ ರಾಜಕಾರಣಿಗಳೇ ಮತ್ತೆ “ರಾಜ್ಯದಲ್ಲಿ ಸರ್ಕಾರ ಸತ್ತಿದೆ, ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ” ಅಂತ ಬಾಯಿ ಬಡ್ಕೊತಾರೆ. ಬಹುಸಂಖ್ಯಾತರು ಎಂದುಕೊಂಡ ಹಿಂದೂಗಳಿಗೆ, ಹಿಂದುತ್ವವಾದಿಗಳಿಗೆ, ಅದರ ಬೆಂಬಲಿತ ಬಿಜೆಪಿಗೆ ಅಲ್ಪಸಂಖ್ಯಾತರು ಯಾವಾಗಲೂ ಚರ್ಚೆಯ ವಿಷಯ. ನಿಜಕ್ಕೂ ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಮುಸ್ಲಿಮರು ಈ ಹತ್ತು ವರ್ಷಗಳ ಬಿಜೆಪಿಯ ಅಧಿಕಾರಾವಧಿಯಲ್ಲಿ ತಮ್ಮ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನೇ ಸರಿಯಾಗಿ ಪಡೆಯಲಾಗದ ಹಂತ ತಲುಪಿದ್ದಾರೆ. ಅವರ ಆಹಾರ, ಉಡುಗೆ, ಹಬ್ಬ, ಆಚರಣೆ, ಪ್ರಾರ್ಥನೆ, ವ್ಯಾಪಾರ…. ಎಲ್ಲದರಲ್ಲೂ ಹಿಂದುತ್ವವಾದಿಗಳು ತಕರಾರು ತೆಗೆಯುತ್ತಿದ್ದಾರೆ.

ಮೋದಿ ಅವಧಿಯಲ್ಲಿ ಗೋಮಾಂಸ ರಫ್ತಿನಲ್ಲಿ ವಿಶ್ವ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ, ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದಲ್ಲಿ ಮುಸ್ಲಿಮರನ್ನು ಗೋಮಾತೆಯ ಭಕ್ಷಕರು, ಗೋಕಳ್ಳರು ಎಂದು ಹಂಗಿಸಲಾಗುತ್ತಿದೆ. ಬಡವರ ಮನೆಗಳಲ್ಲಿ ಹೆಚ್ಚು ಮಕ್ಕಳು ಇರೋದು ಎಲ್ಲ ಧರ್ಮಗಳಲ್ಲೂ ಸಾಮಾನ್ಯವಾಗಿದೆ. ಆದರೆ ಪ್ರಧಾನಿ ಮೋದಿಯಾದಿಯಾಗಿ ಎಲ್ಲರೂ “ಹೆಚ್ಚು ಮಕ್ಕಳನ್ನು ಹೆರೋರು, ಹೆಚ್ಚು ಪಾಲು ಸರ್ಕಾರಿ ಸವಲತ್ತು ಪಡೆಯೋರು” ಎಂದು ಮುಸ್ಲಿಮರನ್ನು ಅವಮಾನಿಸಿದ್ದಾರೆ. ಈಗ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಹೀಗಾದರೆ ಹಿಂದೂಗಳು ಅಲ್ಪಸಂಖ್ಯಾತರಾಗಲಿದ್ದಾರೆ ಎಂಬುದೊಂದು ನರೇಟಿವ್‌ ಹರಿಯಬಿಟ್ಟು, ಅದರ ಪರಿಣಾಮವಾಗಿ ಹಿಂದೂ ಧಾರ್ಮಿಕ ಮುಖಂಡರು, ಸ್ವಾಮೀಜಿಗಳೆಲ್ಲ ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ, ಕಡ್ಡಾಯವಾಗಿ ನಾಲ್ಕು ಮಕ್ಕಳನ್ನು ಹಡೆಯಿರಿ ಎಂದು ಕರೆ ಕೊಡುತ್ತಿದ್ದಾರೆ. ಎಲ್ಲಾ ವಿಷಯಗಳಲ್ಲೂ ಹೀಗೆ ಸ್ಪರ್ಧೆಗೆ ಬಿದ್ದಿದ್ದಾರೆ.

STONEEEE
ಸಾಂಕೇತಿಕ ಚಿತ್ರ

ಈ ಎಲ್ಲ ಸವಾಲುಗಳನ್ನು ಎದುರಿಸಲು ಮುಸ್ಲಿಂ ಸಮುದಾಯ ಹರಸಾಹಸ ಪಡುತ್ತಿರುವಾಗಲೇ, “ಅಲ್ಪಸಂಖ್ಯಾತರನ್ನು ಕಲ್ಲು ಹೊಡೆಯೋರು” ಎಂದು ಬಿಜೆಪಿ ಸಂಘಪರಿವಾರ ಬಿಂಬಿಸುತ್ತಿರುವುದನ್ನು ನಿಜ ಮಾಡಲು ಕೆಲ ಮತಿಗೇಡಿ ಮುಸ್ಲಿಂ ಯುವಕರು ಮತ್ತು ಕೆಲವು ಧಾರ್ಮಿಕ ಮುಖಂಡರು ಹೊರಟಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ರಾಜ್ಯದಲ್ಲಿ 2020ರಿಂದ ಈ ಐದು ವರ್ಷಗಳಲ್ಲಿ ಮುಸ್ಲಿಂ ಯುವಕರು ಪೊಲೀಸ್‌ ಠಾಣೆಗಳ ಮೇಲೆ ಕಲ್ಲು ತೂರಿರುವ ಮೂರು ಘಟನೆಗಳು ನಡೆದಿವೆ. ಹೀಗೆ ಪೊಲೀಸರ ಮೇಲೆಯೇ ಕಲ್ಲು ತೂರುವ ಆರೋಪಿಗಳು ಮತ್ತೆ ಸೇರುವುದು ಪೊಲೀಸರ ಕೈಗೆ. ಆದರೂ ಮುಂದೆ ಆಗಬಹುದಾದ ಅನಾಹುತ, ಬದುಕಿಗೆ ಮುಳುವಾಗುವ ಸಂಕಷ್ಟಗಳ ಅರಿವಿಲ್ಲದೇ, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರ ಪ್ರಚೋದನಕಾರಿ ಹೇಳಿಕೆಗಳಿಗೆ ಬಲಿಯಾಗಿ ಕುಟುಂಬಗಳನ್ನು ಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ತಮಗಾದ ಅನ್ಯಾಯಕ್ಕೋ, ಅವಮಾನಕ್ಕೋ ಕಾನೂನಿನ ಅಡಿಯಲ್ಲಿಯೇ ಪರಿಹಾರ ಕಂಡುಕೊಳ್ಳಬೇಕೇ ವಿನಃ ಆ ಕೋಪವನ್ನು ಪೊಲೀಸ್‌ ಠಾಣೆಗಳಿಗೆ ಕಲ್ಲು ತೂರುವ ಮೂಲಕ, ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ?

ಪೊಲೀಸ್‌ ಠಾಣೆಯ ಮೇಲೆ ಕಲ್ಲು ತೂರಾಟದ ನಾಲ್ಕು ಪ್ರಕರಣಗಳು, ಒಂದೇ ಸಮುದಾಯ!

2020ರಲ್ಲಿ ರಾಜ್ಯದಲ್ಲಿ ಕೋಮುವಾದಿ, ಮುಸ್ಲಿಂ ವಿರೋಧಿ ಎನಿಸಿಕೊಂಡಿದ್ದ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಕೊರೋನಾದಿಂದ ದೇಶವೇ ತತ್ತರಿಸಿತ್ತು. ಆಗಲೂ ಕೆಲವರಿಗೆ ಧರ್ಮದ ಅಮಲು ಇಳಿಸಿರಲಿಲ್ಲ. ಆಗಸ್ಟ್‌ 11ರ ಸಂಜೆ ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ವ್ಯಾಪ್ತಿಯ ಡಿ ಜಿ ಹಳ್ಳಿ -ಕೆ ಜೆ ಹಳ್ಳಿ ಪೊಲೀಸ್‌ ಠಾಣೆಗೆ ರಾತ್ರಿ ಏಕಾಏಕಿ ನುಗ್ಗಿದ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿ ಸಿಕ್ಕ ಸಿಕ್ಕ ವಾಹನಗಳನ್ನು ಸುಟ್ಟು ಹಾಕಿದ್ದರು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೂ ನುಗ್ಗಿ ದಾಂಧಲೆ ನಡೆಸಿದ್ದರು.

ಕಾರಣವಾಗಿದ್ದು ದೇವ ನಿಂದನೆಯ ಫೇಸ್‌ಬುಕ್‌ ಪೋಸ್ಟ್!‌ ಅಶ್ಲೀಲವಾಗಿ ಚಿತ್ರಿಸಿದ್ದ ಹಿಂದೂ ದೇವರ ಚಿತ್ರವನ್ನು ಮುಸ್ಲಿಮ್ ವ್ಯಕ್ತಿಯೊಬ್ಬ ತನ್ನ ಫೇಸ್‍ಬುಕ್ ವಾಲ್‍ನಲ್ಲಿ ಹಂಚಿಕೊಂಡಿದ್ದ. ಇದನ್ನು ಆಕ್ಷೇಪಿಸಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ಎಂಬಾತ ಅಶ್ಲೀಲವಾಗಿ ಚಿತ್ರಿಸಿದ್ದ ಮಹಮದ್ ಪೈಗಂಬರ್ ಅವರ ಚಿತ್ರವನ್ನು ಆತನ ಕಮೆಂಟ್ ಬಾಕ್ಸಿನಲ್ಲಿ ಹಾಕಿದ್ದ. ಮಹಮ್ಮದ್ ಅನುಯಾಯಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ರಾತ್ರಿ ಸುಮಾರು 8-9 ಗಂಟೆಯ ಹೊತ್ತಿಗೆ, ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಯ ಹೊರಗೆ ದೊಡ್ಡ ಜನಸಮೂಹವೇ ಜಮಾಯಿಸಿತ್ತು. ಶಾಸಕರ ಸೋದರಳಿಯನೆಂದು ಹೇಳಲಾಗುವ ನವೀನ್‌ನನ್ನು ಬಂಧಿಸುವಂತೆ ಒತ್ತಾಯಿಸಿದ ಮುಸ್ಲಿಂ ಯುವಕರು ಅಕ್ಕ ಪಕ್ಕದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು. ಶಾಸಕರು ಮನೆಯಲ್ಲಿ ಇರಲಿಲ್ಲ. ಪ್ರತಿಭಟನಾಕಾರರು ಮನೆಯ ಮೇಲೆ ಕಲ್ಲು ತೂರಲು ಪ್ರಾರಂಭಿಸಿದರು. ಶಾಸಕರ ಮನೆಯ ಹೊರಗೆ ನಿಲ್ಲಿಸಿದ್ದ ಕಾರುಗಳಿಗೂ ಬೆಂಕಿ ಹಚ್ಚಿ ಅಪಾರ ಹಾನಿ ಮಾಡಿದರು. ಅವರು ಸುಟ್ಟು ಹಾಕಿದ್ದು ಘಟನೆಗೆ ಸಂಬಂಧವೇ ಇಲ್ಲದ ಸಾರ್ವಜನಿಕರದ್ದು.

KG halli DG Halli violence
ಡಿ ಜಿ ಹಳ್ಳಿಯಲ್ಲಿ ಮತಾಂಧರು ಸುಟ್ಟು ಹಾಕಿದ್ದ ವಾಹನಗಳು

ಇದೇ ವೇಳೆ, ಮತ್ತೊಂದು ಗುಂಪು, ಪೊಲೀಸ್ ಠಾಣೆಗೆ ತೆರಳಿ ಶಾಸಕರ ಸೋದರಳಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಹೋಗುತ್ತಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದರು ಎಂಬ ಆರೋಪದಲ್ಲಿ ಠಾಣೆಯ ಮೇಲೆ ಕಲ್ಲು ತೂರಿದ್ದಲ್ಲದೇ ಪೊಲೀಸ್‌ ವಾಹನಗಳನ್ನು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಗಲಭೆಯಲ್ಲಿ ಕೆಲವರು, ಪೆಟ್ರೋಲ್ ಬಾಂಬ್ ಅನ್ನು ಸಹ ಬಳಸಿದ್ದರು ಎಂದು ವರದಿಯಾಗಿತ್ತು. ಪರಿಸ್ಥಿತಿಯು ನಿಯಂತ್ರಣಕ್ಕೆ ಬಾರದಾಗ, ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ನಡೆದ ಗೋಲಿಬಾರ್ ನಲ್ಲಿ ಮೂವರು ಪ್ರತಿಭಟನಾಕಾರರು ಬಲಿಯಾದರು. ಗಲಭೆಯಲ್ಲಿ 60 ಪೊಲೀಸರು ಗಾಯಗೊಂಡಿದ್ದರು. ಈ ಕೃತ್ಯದಲ್ಲಿ ಭಾಗಿಯಾದವರು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಪಕ್ಷದ ಬೆಂಬಲಿಗರು ಎಂದು ಹೇಳಲಾಗಿದೆ.

ಡಿ ಜಿ ಹಳ್ಳಿ, ಕೆ ಜೆ ಹಳ್ಳಿ ಘಟನೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಮುಸ್ಲಿಮರಿಗೆ ಕಾಂಗ್ರೆಸ್‌ ಬೆಂಬಲವಿದೆ ಎಂಬ ಬಿಜೆಪಿಯ ಆರೋಪ ಅವರ ಸರ್ಕಾರವಿದ್ದಾಗಲೂ ಮಾಡಿದ್ದರು. ಘಟನೆಯ ನಂತರ ನೂರಕ್ಕೂ ಹೆಚ್ಚು ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು. ಹಲವರು ಅಮಾಯಕರು ಎಂಬುದು ಮುಸ್ಲಿಂ ಸಮುದಾಯದ ವಾದವಾಗಿತ್ತು. ಆದರೆ ಪೊಲೀಸ್‌ ಠಾಣೆಯ ಮೇಲೆ ಈ ಮಟ್ಟದಲ್ಲಿ ದಾಳಿ ನಡೆಸಿದ್ದು ಕರ್ನಾಟಕದ ಇತಿಹಾಸದಲ್ಲಿ ಮೊದಲನೆಯದಿರಬೇಕು. ಅದೂ ರಾಜಧಾನಿ ಬೆಂಗಳೂರಿನಲ್ಲಿ ನಡೆದು ಹೋಗಿತ್ತು. ಈ ಪ್ರಕರಣದ ಕೆಲ ಆರೋಪಿಗಳು ಈಗಲೂ ಜೈಲಿನಲ್ಲಿದ್ದಾರೆ. ಆದರೆ ಪೈಗಂಬರ್‌ ನಿಂದಿಸಿ ಪೋಸ್ಟ್‌ ಹಾಕಿದ್ದ ನವೀನ್‌ ಜಾಮೀನಿನ ಮೇಲೆ ಹೊರಗಿದ್ದಾನೆ. ಸಾಮಾಜಿಕ ಜಾಲತಾಣದ ಒಂದು ಪೋಸ್ಟ್‌, ಅದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರೂ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿದ್ದು ಅಕ್ಷಮ್ಯ. ಸಾರ್ವಜನಿಕ ಆಸ್ತಿ ಹಾಳುಗೆಡಹುವ ಹಕ್ಕು ಯಾರಿಗೂ ಇಲ್ಲ. ಯಾರದ್ದೋ ಪ್ರಚೋದನೆಗೆ ಬಲಿಯಾಗಿ ದಾಂಧಲೆ ನಡೆಸಿದ ಮುಸ್ಲಿಂ ಯುವಕರ ಕಾರಣಕ್ಕೆ ಇಡೀ ಸಮುದಾಯ ಕಲ್ಲು ಹೊಡೆಯೋರು ಎಂದು ಹಣೆಪಟ್ಟಿ ಅಂಟಿಸಿಕೊಂಡಿತ್ತು. ಆದರೆ ಆ ನಂತರವೂ ಮುಸ್ಲಿಂ ಯುವಕರು ಬುದ್ದಿ ಕಲಿತಿಲ್ಲ. ಇದೇ ರೀತಿಯ ಪ್ರಕರಣ 2022ರಲ್ಲಿ ಹುಬ್ಬಳ್ಳಿಯಲ್ಲಿ ಪುನರಾವರ್ತನೆಯಾಯ್ತು.

ಹುಬ್ಬಳ್ಳಿ ಕಲ್ಲು ತೂರಾಟ

ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಯೊಬ್ಬ ಮಾಡಿದ್ದ ಅವಹೇಳನಕಾರಿ ಪೋಸ್ಟ್ ನಿಂದ ಅಸಮಾಧಾನಗೊಂಡ ಅಲ್ಪಸಂಖ್ಯಾತ ಸಮುದಾಯದ ಸುಮಾರು 150 ಜನರು ಕಲ್ಲು ಮತ್ತು ದೊಣ್ಣೆಗಳೊಂದಿಗೆ ಹಳೆ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಬಳಿಕ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಕರ್ತವ್ಯದಲ್ಲಿದ್ದ ಹಲವು ಪೊಲೀಸರು ಗಾಯಗೊಂಡಿದ್ದರು. ಅಲ್ಲಿದ್ದ ಹಲವಾರು ಸರ್ಕಾರಿ ಮತ್ತು ಖಾಸಗಿ ವಾಹನಗಳು ಜಖಂಗೊಂಡಿದ್ದವು. ಹಳೇ ಹುಬ್ಬಳ್ಳಿ ಟೌನ್ ಪೊಲೀಸರು ಆರೋಪಿಗಳ ವಿರುದ್ಧ ಗಲಭೆ, ಕೊಲೆ ಯತ್ನ, ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮತ್ತು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬರೋಬ್ಬರಿ 146 ಆರೋಪಿಗಳನ್ನು ಬಂಧಿಸಿದ್ದರು. ಇತ್ತೀಚೆಗೆ ಆರೋಪಿಗಳ ಮೇಲಿನ ಪ್ರಕರಣವನ್ನು ವಾಪಸ್‌ ಪಡೆಯುವ ನಿರ್ಧಾರವನ್ನು ಕರ್ನಾಟಕ ಸರ್ಕಾರದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಇದು ಬಿಜೆಪಿಯ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ, ಮುಸ್ಲಿಮರ ತುಷ್ಟೀಕರಣ ಮಿತಿಮೀರಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡಿತ್ತು ಈ ನಿರ್ಧಾರ. ಮುಸ್ಲಿಮರ ಕಡೆಯಿಂದ ಏನೇ ತಪ್ಪುಗಳಾದರೂ ಅದಕ್ಕೆ ಕಾಂಗ್ರೆಸ್‌ ಬೆಂಬಲ ಕಾರಣ, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಮುಸ್ಲಿಮರ ಸಮಾಜಘಾತಕ ಕೃತ್ಯಗಳಿಗೆ ಬೆಂಬಲಿಸುತ್ತಿದೆ ಎಂಬ ಆರೋಪವೂ ಕಾಂಗ್ರೆಸ್‌ ಗೆ ಶಾಶ್ವತವಾಗಿ ಅಂಟಿಕೊಂಡಿದೆ.

ಕಳೆದ ಭಾನುವಾರ (ಫೆ. 9) ಮೈಸೂರಿನ ಉದಯ ಗಿರಿ ಪೊಲೀಸ್‌ ಠಾಣೆಯ ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಿದ್ದರು. ಇದಕ್ಕೂ ಕಾರಣವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದ ಪೋಸ್ಟ್. ದೆಹಲಿಯ ಬಿಜೆಪಿಯ ಗೆಲುವನ್ನು ಸಂಭ್ರಮಿಸಬೇಕಿದ್ದ ಬಿಜೆಪಿ ಕಾರ್ಯಕರ್ತ ಸುರೇಶ್‌ ಎಂಬಾತ ಸಂಸದ ರಾಹುಲ್ ಗಾಂಧಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿವಸ್ತ್ರಗೊಳಿಸಿದ ಭಾವಚಿತ್ರಕ್ಕೆ ತಲೆ ಮೇಲೆ ಮುಸ್ಲಿಮರು ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದ ಬರೆದು ಪೋಸ್ಟ್ ಮಾಡಿದ್ದ. ಇದು ಮುಸ್ಲಿಂ ಸಮುದಾಯದವರು ಕೆರಳುವಂತೆ ಮಾಡಿತ್ತು. ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌. ಆತನನ್ನು ವಶಕ್ಕೆ ನೀಡುವಂತೆ ನೂರಾರು ಮಂದಿ ಮುಸ್ಲಿಂ ಯುವಕರು ಉದಯಗಿರಿ ಠಾಣೆ ಬಳಿ ಬಂದು ಗಲಾಟೆ ಮಾಡಿ, ಕಲ್ಲು ತೂರಿದ್ದಾರೆ. ಆಗ ಪೊಲೀಸರು ಅಶ್ರುವಾಯು ಸಿಡಿಸಿ, ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಉದಯಗಿರಿ 1

ಆರೋಪಿಗಳನ್ನು ಸಾರ್ವಜನಿಕರಿಗೆ ಒಪ್ಪಿಸುವ ಕಾನೂನು ನಮ್ಮಲ್ಲಿದೆಯೇ? ಅಥವಾ ಮುಸ್ಲಿಮರಿಗೆ ಮಾತ್ರ ಪ್ರತ್ಯೇಕ ಕಾನೂನು ಇದೆಯೇ? ಧಾರ್ಮಿಕ ನಿಂದನೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯವಹಿಸಿ ಚಾರ್ಜ್‌ಶೀಟ್‌ ಹಾಕದೇ ಇದ್ದರೆ, ಹಾಕುವಂತೆ ಅಲ್ಲಿನ ಶಾಸಕರ ಮೂಲಕ ಒತ್ತಡ ಹೇರಿಬಹುದು. ಶಾಸಕ ತನ್ವೀರ್‌ ಸೇಠ್‌ ಮುಸ್ಲಿಂ ಸಮುದಾಯದವರು. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಆಗುತ್ತದೆ. ಆದರೆ, ಕಲ್ಲು ತೂರಿ ದಾಂಧಲೆ ಮಾಡಿದ ಈ ಯುವಕರೂ ಈಗ ಜೈಲು ಪಾಲಾಗಿದ್ದಾರೆ. ಈಗ ಅವರ ಮೇಲೆ ʼಪೊಲೀಸರ ಕೊಲೆ ಯತ್ನʼದ ಪ್ರಕರಣ ದಾಖಲಾದರೆ, ಅವರ ಬಿಡುಗಡೆ ಸುಲಭವಿಲ್ಲ. ಅಷ್ಟೇ ಅಲ್ಲ ಪೊಲೀಸರ ಕೈಗೆ ಸಿಕ್ಕ ನಂತರ ಅವರು ಕೊಡುವ ಟ್ರೀಟ್ಮೆಂಟ್‌ ಬೇರೆಯದೇ ಇರುತ್ತದೆ.

“ಧರ್ಮ ರಕ್ಷಣೆ ಮಾಡಿ, ತಕ್ಕ ಉತ್ತರ ಕೊಡಿ” ಎಂಬ ಮುಸ್ಲಿಂ ಧಾರ್ಮಿಕ ಮುಖಂಡನ ಮಾತು ಕೇಳಿದ ಯುವಕರು ಜೈಲು ಪಾಲಾಗಿದ್ದಾರೆ. ಅವರನ್ನು ಬಿಡಿಸಿ ತರಲು, ಅವರ ಕುಟುಂಬದವರು ಕೋರ್ಟಿಗೆ ಅಲೆಯಬೇಕು. ಕರೆಕೊಟ್ಟ ಮತಾಂಧನಿಗೆ ಏನೂ ಆಗಲ್ಲ. ಇದೇ ಸತ್ಯ.

ದಾವಣಗೆರೆ: ಲಾಕಪ್‌ ಡೆತ್‌ ಆರೋಪ, ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ

2024ರ ಮೇನಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಠಾಣೆ ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿ ಪರಿಣಾಮವಾಗಿ 11 ಪೊಲೀಸರು ಗಾಯಗೊಂಡಿದ್ದರು. 10ಕ್ಕೂ ಹೆಚ್ಚು ವಾಹನ ಜಖಂಗೊಂಡಿದ್ದವು.

ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸ್​ ಠಾಣೆ ವ್ಯಾಪ್ತಿಯ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ ಮಟ್ಕಾ ಆಡಿಸುತ್ತಿದ್ದ ಎಂದು ಠಾಣೆಗೆ ಕರೆ ತಂದಿದ್ದರು. ಪೊಲೀಸರು ಠಾಣೆಗೆ ಕರೆ ತರುತ್ತಿದ್ದಂತೆ, ಆದಿಲ್​​ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾನೆ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಮೃತ ಕುಟುಂಬಸ್ಥರು ಪೊಲೀಸ್​ ಠಾಣೆ ಮೇಲೆ ದಾಳಿ ಮಾಡಿದ್ದರು.

nagamangala
ಮಂಡ್ಯದ ನಾಗಮಂಗಲದಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಉದ್ವಿಘ್ನತೆ ಉಂಟಾಗಿತ್ತು

ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ

ಸೆಪ್ಟೆಂಬರ್ 12ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ತಡೆದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಮಸೀದಿ ಆವರಣದಿಂದ ಮುಸ್ಲಿಂ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಮೊದಲೇ ಮಸೀದಿಯ ಆವರಣದೊಳಗೆ ಕಲ್ಲು, ಬಾಟಲಿಗಳನ್ನು ಸಂಗ್ರಹಿಸಿಟ್ಟು ಮೆರವಣಿಗೆಯ ಮೇಲೆ ತೂರಿದ್ದಾರೆ ಎಂದು ವರದಿಯಾಗಿತ್ತು. ಕೆರಳಿದ ಹಿಂದೂ ಯುವಕರು ಮುಸ್ಲಿಮರ ಅಂಗಡಿಗಳಿಗೆ ಹುಡುಕಿ ಹುಡುಕಿ ಬೆಂಕಿ ಇಟ್ಟು ಸುಟ್ಟು ಅಟ್ಟಹಾಸ ಮೆರೆದಿದ್ದರು. ಕಲ್ಲೆಸೆದ ಪುಂಡರು ಯಾರೋ, ವ್ಯಾಪಾರ ನಷ್ಟ ಅನುಭವಿಸಿದವರು ಎರಡೂ ಸಮುದಾಯಗಳ ಅಮಾಯಕರು. ಇಷ್ಟಾದರೂ ಪಾಠ ಕಲಿತಿಲ್ಲ.

ಒಂದು ಕಡೆ ಹಿಂದುತ್ವದ ಧಾರ್ಮಿಕ ಭಯೋತ್ಪಾದನೆ, ಮತ್ತೊಂದೆಡೆ ಮುಸ್ಲಿಂ ಧಾರ್ಮಿಕ ಭಯೋತ್ಪಾದನೆ. ಎರಡಕ್ಕೂ ಬಲಿಯಾಗುವುದು, ಜೀವನ ನಾಶ ಮಾಡಿಕೊಳ್ಳುವುದು ಶಿಕ್ಷಣ, ಬುದ್ದಿಯಿಲ್ಲದ ಬಡ ಕುಟುಂಬದ ಯುವಕರು. ಅವಮಾನ ಅನುಭವಿಸೋರು ಈ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಮಾಯಕ, ಸಭ್ಯ ಮುಸ್ಲಿಮರು. ಯಾವುದೇ ತಪ್ಪು ಮಾಡದೆಯೂ ಮುಸ್ಲಿಮರು ಎಂಬ ಕಾರಣಕ್ಕೆ ಅಪಮಾನದಿಂದ ತಲೆ ತಗ್ಗಿಸುವಂತಾಗಿದೆ. ಸಮುದಾಯದ ಮುಖಂಡರು, “ನಾವು ಕಲ್ಲು ಹೊಡೆಯೋರಲ್ಲ” ಎಂಬ ಸಂದೇಶವನ್ನು ಕೊಡುವಂತಾಗಬೇಕು. ಅದು ಬಿಟ್ಟು ಧರ್ಮ ರಕ್ಷಣೆಗೆ ಕಾನೂನು ಕೈಗೆ ತೆಗೆದುಕೊಳ್ಳಲು ಪ್ರೇರಣೆ ನೀಡುವುದಲ್ಲ. ಅಂತಹ ಪ್ರೇರಕರನ್ನು ಸಮುದಾಯವೇ ದೂರ ಇಡಬೇಕು.

ಮುಸ್ಲಿಮರು ಕಲ್ಲು ಹೊಡೆಯೋರು ಮತ್ತು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಮುಸ್ಲಿಮರ ಸಮಾಜಘಾತಕ ಕೃತ್ಯಗಳಿಗೆ ಬೆಂಬಲಿಸುತ್ತಿದೆ ಎಂಬ ಎರಡು ಆರೋಪಗಳನ್ನು ಶಾಶ್ವತವಾಗಿ ಇಲ್ಲವಾಗಿಸುವ ಜವಾಬ್ದಾರಿ ಮುಸ್ಲಿಂ ಸಮುದಾಯ ಮತ್ತು ಕಾಂಗ್ರೆಸ್‌ ಪಕ್ಷದ ಮೇಲೆ ಇದೆ. ಸರ್ಕಾರ, ಇಂತಹ ಘಟನೆಗಳಾದಾಗ ಪಕ್ಷ ಧರ್ಮ ನೋಡದೇ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ ಈ ದಿನ ಸಂಪಾದಕೀಯ | ಹೆಣ್ಣಿನ ಮೇಲೆ ಅಮಾನುಷ ಲೈಂಗಿಕ ಕ್ರೌರ್ಯಕ್ಕೆ ವಿವಾಹವು ಪರವಾನಗಿಯೇ?

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X