ಸರ್ಕಾರಿ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ರಕ್ತದಿಂದ ಸಹಿ ಸಂಗ್ರಹ ಮಾಡಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವಿಚಿತ್ರವಾಗಿ ಮನವಿ ಸಲ್ಲಿಸಿತು.
ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, “ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 15-20 ವರ್ಷಗಳಿಂದ ದುಡಿಯುತ್ತಿರುವ ನೌಕರರು ಅತ್ಯಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಜತೆಗೆ ಏಜೆನ್ಸಿಗಳು ಒತ್ತಡದಿಂದ ಸಿಬ್ಬಂದಿಗಳನ್ನೂ ಕಡಿತ ಮಾಡಿದ್ದರಿಂದ ಕೆಲಸದ ಹೊರೆ ಹೆಚ್ಚಾಗಿ ಅನಾರೋಗ್ಯದಿಂದ ಬಳಲುವಂತಾಗಿದೆ. ಇತ್ತ ಸಮಯಕ್ಕೆ ಸರಿಯಾಗಿ ವೇತನ ಕೂಡಾ ಪಾವತಿಯಾಗುತ್ತಿಲ್ಲ. ಈ ಕಡೆ ವೇತನವೂ ಇಲ್ಲ, ಆ ಕಡೆ ಬರುವ ವೇತನವೂ ಸರಿಯಾದ ಸಮಯಕ್ಕೂ ಬರುತ್ತಿಲ್ಲ. ಇದರಿಂದ ನೌಕರರು ಸಂಕಷ್ಟದಲ್ಲಿ ಪರದಾಡುವಂತಾಗಿದೆ” ಎಂದು ಅಸಮಾಧಾನಗೊಂಡರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತಮ್ಮ ನ್ಯಾಯುತವಾದ ಬೇಡಿಕೆಗಳಿಗಾಗಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಬಳ್ಳಾರಿ, ವಿಜಯನಗರ, ವಿಜಾಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಬೀದರ್ ಮಾದರಿಯಲ್ಲಿ ಸಹಕಾರ ಸಂಘ ರಚಿಸಿ ವೇತನ ಪಾವತಿಸುವುದಾಗಿ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ 25 ದಿನಗಳಿಂದ ನೂರಾರು ಮಹಿಳೆಯರು ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾಡಳಿತ ಇತ್ತ ಗಮನಹರಿಸುತ್ತಿಲ್ಲ” ಎಂದು ಸಂಘದ ಮುಖಂಡರು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ| ವಿದ್ಯಾರ್ಥಿಗಳಿಗಾಗಿ ಆನಾಪಾನ ಧ್ಯಾನ ಕಾರ್ಯಕ್ರಮ
ಈ ವೇಳೆ ಸಂಘದ ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ, ರಾಜ್ಯ ಜಂಟಿ ಕಾರ್ಯದರ್ಶಿ ಹುಲಗಣಾ ಚಲವಾದಿ, ಜೇವರ್ಗಿ ತಾಲೂಕು ಅಧ್ಯಕ್ಷ ಕಲ್ಯಾಣಿ ಪೂಜಾರಿ, ಜಿಲ್ಲಾಧ್ಯಕ್ಷ ಪರಶುರಾಮ ಹಡಲಗಿ, ಸೇಡಂ ತಾಲೂಕು ಅಧ್ಯಕ್ಷ ನರಸಮ್ಮ ಕೊರಡಂಪಳ್ಳಿ, ಚಿಂಚೋಳಿ ತಾಲೂಕು ಕಾರ್ಯದರ್ಶಿ ಸಂಜುಕುಮಾರ ಮೇತ್ರ, ಬಾಬು ಹೊಸಮನಿ ಇನ್ನಿತರರು ಇದ್ದರು.
