ಮದುವೆಗೂ ಮುನ್ನ ಮೈಸೂರಿನ ಭಾರತೀಯ ಅಂಚೆ ಇಲಾಖೆ ಅಧಿಕಾರಿಗಳು ವಿಶೇಷ ವಿನ್ಯಾಸದ ನಟ ಡಾಲಿ ಧನಂಜಯ್ ಹಾಗೂ ಡಾ ಧನ್ಯತಾ ಭಾವಚಿತ್ರವಿರುವ 12 ಅಂಚೆ ಚೀಟಿಗಳ ಪಟವಿರುವ ವಿಶೇಷ ಉಡುಗೊರೆಯೊಂದನ್ನು ನೀಡಿದ್ದು, ನಟ ಡಾಲಿ ಧನಂಜಯ ಸಂತಸ ವ್ಯಕ್ತಪಡಿಸಿದ್ದಾರೆ.
ಧನಂಜಯ ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಭಾರತೀಯ ಅಂಚೆ ಇಲಾಖೆ ಇನ್ ಲ್ಯಾಂಡ್ ಲೆಟರ್ ಮಾದರಿಯಲ್ಲಿ ಹಂಚಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಬಹು ಜನರ ಮೆಚ್ಚಿಗೆಗೆ ಪಾತ್ರವಾಗಿತ್ತು.

ಇದೀಗ ʼಶುಭ ವಿವಾಹ’ ಎಂಬ ಶೀರ್ಷಿಕೆ ಒಳಗೊಂಡ 12 ಸ್ಟ್ಯಾಂಪ್ ಗಳನ್ನು ಮೈಸೂರಿನ ಅಂಚೆ ಅಧಿಕಾರಿಗಳು ಧನಂಜಯ ಅವರನ್ನು ಭೇಟಿ ಮಾಡಿ ಉಡುಗೊರೆಯಾಗಿ ನೀಡಿರುವುದು ನವ ಜೋಡಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ. ಧನಂಜಯ್ ಅವರ ಮೂಲಕ ಇನ್ ಲ್ಯಾಂಡ್ ಕವರ್ ಬಳಕೆ ಹೆಚ್ಚಿದ್ದು, ಬೇಡಿಕೆಯೂ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ರೈತ ಸಾಲಗಾರನಲ್ಲ; ಸರ್ಕಾರವೇ ರೈತನಿಗೆ ಬಾಕಿದಾರ: ವಿಶ್ವ ರೈತಚೇತನ ಪ್ರೊ. ಎಂಡಿಎನ್ ನೆನಪು
ಇದೇ ತಿಂಗಳ 15 ಮತ್ತು16 ರಂದು ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಧನಂಜಯ ಮತ್ತು ಧನ್ಯತಾ ಮದುವೆ ನಡೆಯಲಿದೆ. ಈಗಾಗಲೇ ಮದುವೆ ಶಾಸ್ತ್ರ, ಸಂಪ್ರದಾಯಗಳ ಕಾರ್ಯಕ್ರಮಗಳು ನಡೆಯುತ್ತಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. ಅಭಿಮಾನಿಗಳು ಮದುವೆಯ ದಿನ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದಾರೆ.
