ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವುದನ್ನು ಕಂಡು ನಮ್ಮ ಸರ್ಕಾರ ಸುಮ್ಮನೇ ಕೂರಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಗೆ ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
“ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರ ನಾಯಕರ ಬಗ್ಗೆ ಇಲ್ಲಸಲ್ಲದ ಮಾಹಿತಿ ಇರುವ ಪೋಸ್ಟ್ ಮಾಡುವುದನ್ನು ನಮ್ಮ ಸರ್ಕಾರ ಸಹಿಸಲ್ಲ. ಈ ಬಗ್ಗೆ ಕಡಿವಾಣ ಹಾಕುತ್ತೇವೆ” ಎಂದರು.
“ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪೋಸ್ಟ್‌ಗಳಿಗೆ ಕಡಿವಾಣ ಹಾಕಲಾಗುವುದು. ಈ ಜವಾಬ್ದಾರಿ ನಮ್ಮ ಇಲಾಖೆಗೆ ಬರಲಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.