ಸಂವಿಧಾನ ಶಿಲ್ಪಿ, ಭಾರತದ ಮೊದಲ ಕಾನೂನು ಸಚಿವ, ಭಾರತದ ಹಿರಿಮೆ, ಜ್ಞಾನದ ಪ್ರತೀಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗಳ ಮೇಲೆ ಹಿಂದುತ್ವವಾದಿ, ಜಾತಿವಾದಿಗಳ ದಾಳಿಗಳು ನಿರಂತವಾಗಿ ನಡೆಯುತ್ತಲೇ ಇವೆ. ಅಂಬೇಡ್ಕರ್ ಪ್ರತಿಮೆಯ ಒಂದು ಕೈಯ ಬೆರಳನ್ನು ಮುರಿದು ದುಷ್ಕರ್ಮಿಗಳು ವಿಕೃತಿ ಮರೆದಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಮಧ್ಯಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.
ದಾಮೋಹ್ ಜಿಲ್ಲೆಯ ಪಟೇರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡದ ಬಳಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿತ್ತು. ದುಷ್ಕರ್ಮಿಗಳು ರಾತ್ರಿ ವೇಳೆ ಪ್ರತಿಮೆಯ ಬಲಗೈನ ಬೆರಳನ್ನು ಮುರಿದಿದ್ದಾರೆ. ಮರುದಿನ ಬೆಳಗ್ಗೆ ಗ್ರಾಮಸ್ಥರು ಪ್ರತಿಮೆಯನ್ನು ಗಮನಿಸಿದಾಗ, ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕುಮ್ಹಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರತಿಮೆಯ ಪಕ್ಕದ ಏಣಿಯನ್ನು ಹತ್ತಿ ಬೆರಳು ಮುರಿದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೆಲ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಎಎಸ್‌ಪಿ ಸಂದೀಪ್ ಮಿಶ್ರಾ ತಿಳಿಸಿದ್ದಾರೆ.
ಈ ಹಿಂದೆ, ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಪಾತೆರಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಾ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಯ ಒಂದು ತೋಳನ್ನು ಮುರಿದುಹಾಕಲಾಗಿತ್ತು. ಘಟನೆ ನಂತರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.