ಭದ್ರಾವತಿಯಲ್ಲಿ ಶಾಸಕ ಬಿ ಕೆ ಸಂಗಮೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರ ಪುತ್ರ ಬಸವೇಶ್‌ನನ್ನು ಬಂಧಿಸುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ನಗರದ ಮಾಧವಾಚಾರ್ ವೃತ್ತದಿಂದ ತಾಲೂಕು ಕಚೇರಿಯವರೆಗೆ ಜೆಡಿಎಸ್ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಭದ್ರಾವತಿ ಶಾಸಕರೆ ಬಹಳ ದಿನ ನಿಮ್ಮ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯಲ್ಲ. ಶಾಸಕರಿಗೆ ಮತ ಹಾಕಿ ಅವರ ಕುಟುಂಬ ಮಾಡಿರುವ ಕೆಲಸಕ್ಕೆ ತಲೆತಗ್ಗಿಸುವ ಪರಿಸ್ಥಿತಿ ಭದ್ರಾವತಿ ನಾಗರಿಕರಿಗೆ ಎದುರಾಗಿದೆ. ಒಬ್ಬ ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕುವ ಮೂಲಕ ತಮ್ಮ ವ್ಯಕ್ತಿತ್ವ ತಾವೇ ತೋರಿಸಿಕೊಂಡಿದ್ದಾರೆ. ಅದನ್ನು ಮಾಧ್ಯಮಗಳ ಮೂಲಕ ಇಡೀ ರಾಜ್ಯ ನೋಡಿದೆ. ಇಂತಹ ಹಲವಾರು ಘಟನೆಗಳು ನಡೆದಿವೆ. ಅವರ ನಿರಂಕುಶಕ್ಕೆ ಲಗಾಮು ಹಾಕಬೇಕು. ಅಧಿಕಾರ ಬಳಸಿ ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ” ಎಂದು ಆರೋಪಿಸಿದರು.
“ವಿಧಾನ ಪರಿಷತ್‌ನಲ್ಲಿ ಪ್ರಭಾವಿ ಸಚಿವೆಯೊಬ್ಬರಿಗೆ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂದು ಎಂಎಲ್‌ಸಿ ಒಬ್ಬರನ್ನು ಬಂಧಿಸಲಾಗಿ, ಠಾಣೆಯಿಂದ ಠಾಣೆಗೆ ಶಿಫ್ಟ್ ಮಾಡಲಾಗುತ್ತಿತ್ತು. ಅವರ ಆಡಿಯೋ ವಿಡಿಯೋವನ್ನ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಆ ಪ್ರಕರಣದಲ್ಲಿ ತೋರಿದ್ದ ತಾಕತ್ತು, ಭದ್ರಾವತಿ ಶಾಸಕರ ಪುತ್ರರ ವಿರುದ್ಧ ಯಾಕಿಲ್ಲ. ಅವರ ಆಡಿಯೋ ಮತ್ತು ವಿಡಿಯೋವನ್ನ ಎಫ್ಎಸ್‌ಎಲ್‌ಗೆ ಯಾಕೆ ಕೊಟ್ಟಿಲ್ಲ. ರಾಮನಗರದಲ್ಲಿ ನಿಂತು ಅಬ್ಬರಿಸುವ ಡಿಸಿಎಂ ಇಲ್ಲಿನ ಶಾಸಕನ ಪುತ್ರನ ವಿರುದ್ಧ ಯಾಕೆ ಮಾತಾಡುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

“ನಮ್ಮ ತಂದೆ ಎರಡು ಬಾರಿ ಸಿಎಂ ಆಗಿದ್ದಾರೆ. ಯಾವತ್ತೂ ಅಧಿಕಾರ ಬಳಸಿಕೊಂಡು ನಾನು ಯಾವುದೇ ಕೆಲಸ ಮಾಡಿಲ್ಲ. ಆದರೆ ಭದ್ರಾವತಿ ಶಾಸಕರ ಪುತ್ರರಿಗೆ ಅಧಿಕಾರ ಕೊಟ್ಟವರು ಯಾರು. ನಾನು ರಾಜಕೀಯ ಜೀವನವನ್ನ ಈಗ ಆರಂಭಿಸಿದ್ದೇನೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಕಂಡು ಬಂದರೆ ಸಾರ್ವಜನಿಕ ಬದಕನ್ನ ಈಗಲೆ ಬಿಟ್ಟು ಹೋಗುವೆ. ಪ್ರತಿಭಟನೆ ಇಲ್ಲಿಗೆ ಮುಕ್ತಾಯವಾಗೊಲ್ಲ, ಇಲ್ಲಿಂದ ಆರಂಭವಾಗಲಿದೆ. ನಾಗರಿಕರು ಜಾಗೃತರಾಗಬೇಕು” ಎಂದು ಸವಾಲು ಹಾಕಿದರು.

ತಹಶೀಲ್ದಾರ್ ಕಚೇರಿಯ ಎದುರು ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಜೆಡಿಎಸ್ ಉಪಾಧ್ಯಕ್ಷ ಕೆಬಿ ಪ್ರಸನ್ನ ಕುಮಾರ್, “ನಾವು ಮರಳು ವಿಚಾರದಲ್ಲಿ ಕುಮ್ಮಕ್ಕು ನೀಡಿದ್ದೇವೆಂದು ಇಲ್ಲಿನ ಶಾಸಕರು ನುಡಿದಿದ್ದಾರೆ. ನಾವು ಇದರಲ್ಲಿ ಭಾಗಿಯಿಲ್ಲ. ಪದೇ ಪದೇ ಇದನ್ನಹೇಳುವ ಬದಲು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ನಾವು ಸಿದ್ದ. ನೀವು ಬಂದು ಆಣೆ ಮಾಡಲು ಸಿದ್ದರಿದ್ದೀರಾ” ಎಂದು ಪ್ರಶ್ನಿಸಿದರು.
ಶಾರದಾ ಅಪ್ಪಾಜಿ ಗೌಡ ಮಾತನಾಡಿ, “ಭದ್ರಾವತಿಯಲ್ಲಿ ಪ್ರತಿ ಎರಡು ಅಂಗಡಿಗೆ ಒಂದು ಅಂಗಡಿಯಂತೆ ಓಸಿ ಬರೆಯುತ್ತಾರೆ. ಅದಕ್ಕೆ ಶಾಸಕರ ಬೆಂಬಲಿಗರಿದ್ದಾರೆ. ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ. ಅಪ್ಪಾಜಿಗೌಡರು ಇದ್ದಾಗ ಅಭಿವೃದ್ಧಿ ಆಗಿದ್ದು ಬಿಟ್ಟರೆ ಈಗ ಅಭಿವೃದ್ಧಿ ಇಲ್ಲ. ಶಿಫ್ಟ್ ವೈಸ್ ಓಸಿ ಆಡಿಸಲಾಗುತ್ತಿದೆ. ಅಧಿಕಾರಿಗಳು ಅಧಿಕಾರಿಗಳಾಗಿ ಕೆಲಸ ಮಾಡಲಿ” ಎಂದರು.
ಈ ಸುದ್ದಿ ಓದಿದ್ದೀರಾ?: ಭದ್ರಾವತಿ | ಅಡಿಕೆ ಕಳ್ಳನ ಬಂಧನ; ಲಕ್ಷಾಂತರ ಮೌಲ್ಯದ ಅಡಿಕೆ ವಶಕ್ಕೆ
ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ಅಜಿತ್ ಗೌಡ, ಶಾಸಕಿ ಶಾರದ ಪೂರ್ಯನಾಯ್ಕ್, ಮಧು, ಬಿಜೆಪಿಯ ಧರ್ಮಪ್ರಸಾದ್ ಮೊದಲಾದವರು ಭಾಗಿಯಾಗಿದ್ದರು.
