ಶೈಕ್ಷಣಿಕ ಗುಣಮಟ್ಟದಲ್ಲಿ ಸುಧಾರಣೆ ತರುವುದು ಶಾಲಾ ಹಂತದಲ್ಲಿ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಅಭಿಪ್ರಾಯಪಟ್ಟರು.
ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಸಂಯುಕ್ತಾಶ್ರಯದಲ್ಲಿ ಶಿಕ್ಷಣ ಭಾಗಿದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಬೇರೆ ಜಿಲ್ಲೆಗೆ ಹೋಲಿಸಿದರೆ ರಾಯಚೂರು ಶಿಕ್ಷಣದಲ್ಲಿ ಹೆಚ್ಚಿನದಾಗಿ ಸುಧಾರಣೆಯಾಗಬೇಕಿದೆ. ಜಿಲ್ಲೆಯಲ್ಲಿ ಶೇ.50 ರಷ್ಟು ಶಿಕ್ಷಕರ ಕೊರತೆ ಇದೆ, ಅದನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಮಾವೇಶದಲ್ಲಿ ಪಾಲ್ಗೊಂಡ ಶಿಕ್ಷಣ ಭಾಗೀದಾರರು ಎನ್‌ಜಿಒಗಳು ಮುಂದಿನ 5 ವರ್ಷಕ್ಕೆ ಕ್ರಿಯಾ ಯೋಜನೆ ತಯಾರಿಸಿಕೊಂಡು ಶಾಲೆಗಳಲ್ಲಿ ಶಿಕ್ಷಕರಿಂದಲೇ ಕಲಿಕಾ ಸಾಮರ್ಥ್ಯಕ್ಕೆ ಮಕ್ಕಳಿಗೆ ಪ್ರೇರಣೆ ನೀಡಲು ಕ್ರಮವಹಿಸಬೇಕು” ಎಂದರು.
ಕಲ್ಯಾಣ ಕರ್ನಾಟಕಕ್ಕೆ 371 ಜೆ ಕಲಂ ಈ ಭಾಗಕ್ಕೆ ಉತ್ತಮ ಅವಕಾಶ ನೀಡಿದೆ. ಪ್ರತಿ ತಾಲೂಕಿನ ಶೈಕ್ಷಣಿಕ ಗುಣಮಟ್ಟ ಸಾಧನೆ ಮಾಡಲು, ಬೇರೆ ಜಿಲ್ಲೆಯ ಮಕ್ಕಳೊಂದಿಗಿನ ಸ್ಪರ್ಧೆಗೆ ಕ್ರಿಯಾಯೋಜನೆ ಅಗತ್ಯವಿದೆ. ಜತೆಗೆ ಸಾಕಷ್ಟು ಸಂಘಟನೆಗಳು ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಮತ್ತು ಅಪೌಷ್ಟಿಕತೆ ನಿವಾರಣೆಗೆ ಒತ್ತು ನೀಡುತ್ತಿವೆ. ಸಾಕಷ್ಟು ಅನುದಾನವಿದ್ದು, ಅದರೊಟ್ಟಿಗೆ ಮಾನವ ಸಂಪನ್ಮೂಲದ ಅಗತ್ಯವಿದೆ. ಎಲ್ಲಾ ವಿಷಯವಾರು ಒಳಗೊಂಡಂತೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಮಾಡಬಹುದಾದ ಎಲ್ಲಾ ರೀತಿಯ ಕ್ರಮ, ಸಲಹೆ, ಸಹಕಾರ ನೀಡಿದಲ್ಲಿ ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವೆಂದರು.
ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಆಕಾಶ ಎಸ್ ಮಾತನಾಡಿ, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಕಳೆದ ಎರಡು ವರ್ಷಗಳಿಂದ ಶಿಕ್ಷಣ ಭಾಗೀದಾರರ ಸಮಾವೇಶ ನಡೆಸುತ್ತಿದ್ದು, ಇದರಿಂದ ಮಕ್ಕಳ ಕಲಿಕೆಗೆ ಬೇಕಾಗಿರುವ ಪೂರ್ವ ತಯಾರಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗಿದೆ” ಎಂದರು.
ರಾಜ್ಯದಲ್ಲಿ 57 ಸಾವಿರ ಶಿಕ್ಷಕರ ಕೊರತೆ ಇದೆ. ಈ ಭಾಗದಲ್ಲಿ 15 ಸಾವಿರ ಕೊರತೆ ಇದೆ. ಶಾಲಾ ಕಟ್ಟಡ, ನೀರಿನ ಸೌಲಭ್ಯ, ಶೌಚಾಲಯ ಸೇರಿ ಹಲವು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದೇವೆ, ಎಸ್‌ಎಸ್‌ಎಲ್‌ಸಿಯಲ್ಲಿ ಈ ಭಾಗದಲ್ಲಿ ಹೆಚ್ಚು ಫಲಿತಾಂಶ ಮಾಡಲು ಮೊದಲ ಕಾಪಿ ಮಾಡುವುದನ್ನು ತಡೆಗಟ್ಟಲು ವೆಬ್ ಕಾಸ್ಟಿಂಗ್ ಮಾಡಲಾಯಿತು. ನಂತರ ರಾಜ್ಯದೆಲ್ಲೆಡೆ ವಿಸ್ತರಿಸಲಾಯಿತು. ಆರಂಭದಲ್ಲಿ 65 ಶಾಲೆಗಳನ್ನು ಸೇರ್ಪಡೆ ಮಾಡಲಾಯಿತು. 3-6 ವರ್ಷದ ಮಕ್ಕಳ ಕಲಿಕೆ ಹಂತವನ್ನು ಮತ್ತಷ್ಟು ಹೆಚ್ಚಿಸಲು ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ
ಸಮಾವೇಶದಲ್ಲಿ ಮಹಾ ನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಮಲ್ಲಿಕಾರ್ಜುನ, ಕೃಷಿ ವಿವಿ ಕುಲ ಸಚಿವ ಗುರುರಾಜ ಸುಂಕದ್, ಡಯಟ್ ಪ್ರಾಚಾರ್ಯ ಆರ್. ಇಂದಿರಾ, ಪ್ರಥಮ ಫೌಂಡೇಶನ್ ಮುಖ್ಯಸ್ಥೆ ಸುಮನ್, ಲತಾ ಕೋಟೆ ಸೇರಿದಂತೆ ಅನೇಕರು ಇದ್ದರು
