ಭಾರತೀಯ ಯುವ ಮಹಿಳಾ ಹಾಕಿ ಆಟಗಾರ್ತಿಯರು ಭಾನುವಾರ ಹೊಸ ಇತಿಹಾಸ ರಚಿಸಿದ್ದಾರೆ.
ಜಪಾನ್‌ನ ಕಾಕಾಮಿಗಾರಾದಲ್ಲಿ ನಡೆದ 2023ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ, ದಕ್ಷಿಣ ಕೊರಿಯಾವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ, ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಪಂದ್ಯದ ದ್ವಿತೀಯ ಕ್ವಾರ್ಟರ್‌ನ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅನು ಗಳಿಸಿದ ಗೋಲಿನ ಮೂಲಕ ಭಾರತ ಮುನ್ನಡೆ ಪಡೆದಿತ್ತು. ಆದರೆ ಇದಾದ ಮೂರೇ ನಿಮಿಷದ ಅವಧಿಯಲ್ಲಿ ಪಾರ್ಕ್ ಸಿಯೊ ಯೆನ್ ಗೋಲಿನ ಮೂಲಕ ದಕ್ಷಿಣ ಕೊರಿಯಾ ಸಮಬಲ ಸಾಧಿಸಿತು.
ನಂತರದಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಮೂರನೇ ಕ್ವಾರ್ಟರ್‌ನ 41ನೇ ನಿಮಿಷದಲ್ಲಿ ನೀಲಂ ಭಾರತಕ್ಕೆ ಗೆಲುವಿನ ಗೋಲು ತಂದಿತ್ತರು.
ದಕ್ಷಿಣ ಕೊರಿಯಾದ ಎಂಟು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ವಿಫಲಗೊಳಿಸಿದ್ದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಎಫ್‌ಐಎಚ್ ಮಹಿಳಾ ಜೂನಿಯರ್ ವಿಶ್ವಕಪ್ 2023 ಟೂರ್ನಿಗೆ ಭಾರತ ಈಗಾಗಲೇ ಅರ್ಹತೆ ಪಡೆದಿದೆ.
₹2 ಲಕ್ಷ ನಗದು ಬಹುಮಾನ
ಮಹಿಳಾ ಜೂನಿಯರ್ ಏಷ್ಯಾ ಕಪ್ 2023 ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿದೆ. ಆಟಗಾರ್ತಿಯರಿಗೆ ತಲಾ ₹2 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ ತಲಾ ₹1 ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.