ಜಿಲ್ಲೆಯ ರೈತಾಪಿಗಳು ಮಹಿಳಾ ಸಂಘಗಳೇ ಮೊದಲಾಗಿ ನಾಗರೀಕರಿಗೆ ಕಿರುಸಾಲ ನೀಡುತ್ತಾ ಅವರನ್ನು ಬಡ್ಡಿಯ ಸುಳಿಗೆ ತಳ್ಳುವ ಮೈಕ್ರೋ ಫೈನಾನ್ಸ್ಗಳ ಹಾವಳಿಗೆ ತಿಲಾಂಜಲಿ ಇಡಲು ಜಿಲ್ಲಾಡಳಿತ, ರಾಜ್ಯ ಸರಕಾರ, ರಾಜ್ಯಪಾಲರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ.ಭಾಸ್ಕರ್ ಮೂಲಕ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ಧ ಕ್ರಮವಹಿಸಬೇಕು,ರಾಜ್ಯಪಾಲರು ರಾಜ್ಯ ಸರಕಾರ ಕಳಿಸಿದ ಸುಗೀವಾಜ್ಞೆಗೆ ಅಂಕಿತ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಶ್, ಕೇಂದ್ರ ಸರಕಾರ ಶೇ೪೮ ರಷ್ಟು ಸಾಲವಿತರಣೆಗೆ ಕಡಿವಾಣ ಹಾಕಿದೆ.ಇದನ್ನು ಮನಗಂಡಿರುವ ರಾಜ್ಯ ಸರಕಾರ ಮೈಕ್ರೋಪೈನಾನ್ಸ್ ಹಾವಳಿ ತಡೆಯಲು ಸುಗ್ರೀವಾಜ್ಞೆಯ ಕರಡನ್ನು ಅನುಮೋಧನೆಗೆ ರಾಜ್ಯಪಾಲರಿಗೆ ಕಳಿಸಿಕೊಟ್ಟಿದೆ. ಅಂಕಿತ ಹಾಕಬೇಕಾದ ರಾಜ್ಯಪಾಲರು ಈಗಿರುವ ಕಾನೂನುಗಳನ್ನೇ ಇನ್ನಷ್ಟು ಬಿಗಿಮಾಡಿ ಸಂತ್ರಸ್ಥರಿಗೆ ನೆರವಾಗಬೇಕು. ಈಬಿಲ್ಲನ್ನು ಮತ್ತೊಮ್ಮೆ ಸಂಪುಟದಲ್ಲಿಟ್ಟು ಚರ್ಚೆ ಮಾಡಿ ಕಳಿಸಿಕೊಡಿ ಎಂದು ಸುಗ್ರೀವಾಜ್ಞೆಯ ಕಡರನ್ನು ಹಿಂದಿರುಗಿಸಿದ್ದಾರೆ. ಇದರಿಂದಾಗಿ ರೈತರ ಆತ್ಮಹತ್ಯೆಗಳು ಮತ್ತಷ್ಟು ಹೆಚ್ಚಾಗಲಿದ್ದು, ಸರಕಾರ ಕೂಡ ಇದನ್ನು ಮರುಪರಿಶೀಲಿಸಿ ರೈತರ ಪರವಾದ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಗೌರಿಬಿದನೂರು ತಾಲೂಕು ಅಧ್ಯಕ್ಷ ಲೋಕೇಶ್‌ಗೌಡ, ಮಾತನಾಡಿ ರಾಜ್ಯದಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿದೆ. ಸಾಲ ನೀಡುವಾಗ ನಯವಾಗಿ ವರ್ತಿಸುವ ಕಂಪನಿಗಳು ಸಾಲ ಪಡೆದಾದ ಮೇಲೆ ರೌಡಿಗಳ ಹಾಗೆ ವರ್ತಿಸುತ್ತಾರೆ. ಸಾಲದ ಕಂತು ಪಡೆಯಲು ಬೆಳ್ಳಂಬೆಳಿಗ್ಗೆ ಮನೆಗೆ ಬರುವ ವಸೂಲಿಗಾರರು ಕಂತು ಕಟ್ಟುವವರೆಗೆ ಮನೆಬಿಟ್ಟು ಹೋಗುವುದೇ ಇಲ್ಲ.ಸಣ್ಣ ಪುಟ್ಟ ಲೇವಾದೇವಿಗಾರರೂ ಕೂಡ ಇದೇ ಹಾದಿ ತುಳಿದಿರುವುದು ರೈತರು ,ಬಡ ಕೂಲಿ ಕಾರ್ಮಿಕರನ್ನು ಚಿಂತೆಗೀಡುಮಾಡುವAತೆ ಮಾಡಿದೆ. ರಾಜ್ಯ ಪಾಲರು ಸರಕಾರದ ಸುಗ್ರೀವಾಜ್ಞೆಯ ಬಿಲ್ಲಿಗೆ ಸಹಿಹಾಕಿ ರೈತರ ಹಿತಕಾಪಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಚಿಂತಾಮಣಿ ತಾಲೂಕು ಅಧ್ಯಕ್ಷ ಕದಿರೇಗೌಡ,ಕಾರ್ಯದರ್ಶೀ ಆಂಜಿನಪ್ಪ,ರಾಜ್ಯ ಮುಖಂಡ ಬೆಳ್ಳೂಟಿ ಮುನಿಕೆಂಪಣ್ಣ, ಜಿ.ವಿ.ರಘುನಾಥರೆಡ್ಡಿ,ಜಿಲ್ಲಾ ಗೌರವಾಧ್ಯಕ್ಷ ವೆಂಕಟರಾಮಯ್ಯ , ರಾಜಣ್ಣ,ಬಿ.ಮುನಿಯಪ್ಪ. ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಬಿ.ಮುನೇಗೌಡ ಕಾರ್ಯದರ್ಶಿ ನವೀನ್ ಆಚಾರ್ಯ ಇದ್ದರು.
