ರಕ್ತದಾನದಿಂದ ಆರೋಗ್ಯ ಕೆಡುತ್ತದೆ, ಸುಸ್ತಾಗುತ್ತದೆ ಎನ್ನುವ ಮೌಢ್ಯಗಳು ಜನರಲ್ಲಿ ಬೇರೂರಿವೆ. ಹಾಗೆಲ್ಲ ಆಗುವುದಿಲ್ಲ. ಬದಲಾಗಿ ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ಮನುಷ್ಯ ಹೊಸ ಚೈತನ್ಯ ಪಡೆಯುತ್ತಾನೆ. ಒಂದು ಜೀವ ಉಳಿಸಿದೆನಲ್ಲ ಎಂಬ ಸಾರ್ಥಕತೆಯ ಭಾವ ಮೂಡುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಮಲಾಪುರ ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಗರದ ವಿದ್ಯಾರಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿನ್ನೆ (ಫೆ.14) ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಆಸಕ್ತ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
“ರಕ್ತದಾನದ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಕಾರ್ಯಕ್ರಮ, ಶಿಬಿರಗಳು ಮತ್ತಷ್ಟು ಬರಬೇಕಿದೆ. ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗುವಂತಹ ಮನಸ್ಥಿತಿ ಮೂಡಿಸಿಕೊಳ್ಳುವುದು ಇಂದಿನ ದಿನಮಾನಗಳನ್ನು ಮಹತ್ವದ್ದಾಗಿದೆ” ಎಂದರು.

ಶಿಬಿರದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗಳಾದ ಹರ್ಷವರ್ಧನ್, ಮೇಘನಾ, ಮೌನ ಹಾಗೂ ಯೋಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಶ್ರೀಧರ, ರಾಜಕುಮಾರ್, ಜಿ.ಬಸವರಾಜು, ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರವೀಣ, ಕನ್ನಡ ಭಾಷಾಧ್ಯಯನ ವಿಭಾಗದ ಬಿ.ಬಸವರಾಜು ಸೇರಿದಂತೆ 25 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ರಕ್ತದಾನ ಮಾಡಿದ ಎಲ್ಲರಿಗೂ ಡಾ.ಯಶಸ್ವಿನಿ ಅವರು ಪ್ರಮಾಣ ಪತ್ರ ವಿತರಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಎಂಎಸ್‌ಪಿಎಲ್ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೋ ಜಾಗೃತಿ ಆಂದೋಲನ
ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ, ವಿದ್ಯಾರಣ್ಯ ಆಸ್ಪತ್ರೆಯ ವೈದ್ಯ ಡಾ.ರಾಜರಾಜೇಶ್ವರಿ, ಶುಶ್ರೂಷಕಿ ಸುನೀತಾಬಾಯಿ, ಕಮಲಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ.ಯಶಸ್ವಿನಿ, ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮಾಜಿ, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ನಾಗವೇಣಿ ಜಿ, ಸಮುದಾಯ ಆರೋಗ್ಯಾಧಿಕಾರಿ ಮೋಹನ್ ಕುಮಾರ್, ಚಿರಂಜೀವಿ ಆಸ್ಪತ್ರೆ ಹೊಸಪೇಟೆಯ ಪ್ಯಾರಾ ಮೆಡಿಕಲ್ ಟೆಕ್ನಿಷಿಯನ್ ರೇಖಾ ಮತ್ತು ಚೈತ್ರ, ಚಿರಂಜೀವಿ ಬ್ಲಡ್ ಬ್ಯಾಂಕ್ ಕೇಂದ್ರದ ಸೂಪರ್‌ವೈಸರ್ ವಿನಾಯಕ ಜಿ. ಮತ್ತಿತರಿದ್ದರು.
