ಬಸವ ತತ್ವದ ಆಶಯಗಳನ್ನು ಜನಮಾನಸಕ್ಕೆ ಮುಟ್ಟಿಸಬೇಕು ಎಂಬ ಘನವಾದ ಉದ್ದೇಶದಿಂದ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಪ್ರಾರಂಭವಾದ ಬಸವ ಉತ್ಸವ ನಿರಂತರವಾಗಿ ಯಾಕೆ ನಡೆಯುವುದಿಲ್ಲ. ಇದು ಸರ್ಕಾರದ ಇಚ್ಚಾಶಕ್ತಿ ಕೊರತೆಯೇ ಎಂಬುದು ಇಲ್ಲಿನ ಬಸವ ಅನುಯಾಯಿಗಳ ಪ್ರಶ್ನೆ!
ವಿಶ್ವಕ್ಕೆ ಸಮ ಸಮಾಜದ ಪರಿಕಲ್ಪನೆ ನೀಡಿ, ವಚನ ಸಾಹಿತ್ಯ ಮೂಲಕ ಮಾನವೀಯ ಮೌಲ್ಯಗಳನ್ನು ಸಾರಿದ ಬಸವಣ್ಣನವರ ಸಂದೇಶ ಪ್ರಚಾರಕ್ಕಾಗಿ 2010ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಮೊದಲ ಬಾರಿಗೆ ಸರ್ಕಾರದಿಂದ ಬಸವ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಆರಂಭದ ಎರಡು ವರ್ಷ ಅದ್ದೂರಿಯಾಗಿ ಉತ್ಸವ ನಡೆದಿತ್ತು. ತದನಂತರ ಪ್ರತಿವರ್ಷ ಬಸವ ಉತ್ಸವ ಆಯೋಜಿಸದೇ ಇರುವುದು ಬಸವ ಅನುಯಾಯಿಗಳಲ್ಲಿ ಬೇಸರ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಮಠಾಧೀಶರು, ಬಸವ ಅನುಯಾಯಿಗಳ ಬೇಡಿಕೆಗೆ ಸ್ಪಂದಿಸಿದೆ. ಈಗ ಅದಕ್ಕೆ ಒಂದು ವರ್ಷವೂ ಪೂರೈಸಿದೆ. ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕ ಎಂದು ಘೋಷಿಸುವ ಜೊತೆಗೆ ಬಸವ ತತ್ವ ಪ್ರಸಾರ ಹಾಗೂ ಪ್ರಚಾರಕ್ಕಾಗಿ ಸರ್ಕಾರ ವಿವಿಧ ಕಾರ್ಯಕ್ರಮಗಳು ಆಯೋಜಿಸುವುದು ಅಷ್ಟೇ ಮುಖ್ಯವಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆ.

ಕಳೆದ 14 ವರ್ಷ ಹಿಂದೆ ಆರಂಭವಾದ ಬಸವ ಉತ್ಸವ ಪ್ರತಿವರ್ಷ ಕಡ್ಡಾಯವಾಗಿ ಆಯೋಜಿಸಲು ಸರ್ಕಾರದ ನಿರಾಸಕ್ತಿ ಯಾಕೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ತೋರಿದ ರಾಜಕೀಯ ಇಚ್ಚಾಶಕ್ತಿ ಬಸವ ಉತ್ಸವ ಆಯೋಜಿಸುವಲ್ಲಿ ಯಾಕೆ ಇಲ್ಲ? ಎಂಬ ಬಲವಾದ ಕೂಗು ಕೇಳಿ ಬರುತ್ತಿದೆ. ಪ್ರತಿವರ್ಷ ಬಸವ ಉತ್ಸವ ನಡೆಸಬೇಕೆಂಬುದು ಬಸವಾನುಯಾಯಿಗಳ ಆಶಯ. ಆದರೆ ಸರ್ಕಾರದ ಈ ಕಡೆಗಣೆಯಿಂದಾಗಿ ಉತ್ಸವದ ಮೂಲ ಆಶಯಕ್ಕೆ ಹಿನ್ನಡೆಯಾಗಿದೆ.
14 ವರ್ಷಗಳಲ್ಲಿ 6 ಬಾರಿ ಬಸವ ಉತ್ಸವ! :
ಮೊದಲ ಬಾರಿ ಸರ್ಕಾರದಿಂದ 2010ರಲ್ಲಿ ಆರಂಭವಾದ ಬಸವ ಉತ್ಸವ 2011ರಲ್ಲಿ ಅದ್ದೂರಿಯಾಗಿ ನಡೆಯಿತು. 2012 ಹಾಗೂ 2013 ರಲ್ಲಿ ಬರ ಹಿನ್ನಲೆ ನಡೆಯಲಿಲ್ಲ. ನಂತರ 2014 ಹಾಗೂ 2015 ರಲ್ಲಿ ಬಸವ ಉತ್ಸವ ಜರುಗಿತು. ಮತ್ತೆ 2016 ಹಾಗೂ 2017 ರಲ್ಲಿ ಸರ್ಕಾರದ ನಿರುತ್ಸಾಹ ಹಿನ್ನಲೆ ಉತ್ಸವ ನಡೆಲಿಲ್ಲ. 2018 ರಲ್ಲಿ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಆಚರಿಸಿದರೆ, 2023ರಲ್ಲಿ ಸಹ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಉತ್ಸವ ನಡೆದಿತ್ತು. ಹೀಗೆ ಕೋರೊನಾ, ಬರ-ನೆರೆ ಹಿನ್ನಲೆ 14 ವರ್ಷಗಳಲ್ಲಿ 6 ಸಲ ಮಾತ್ರ ಬಸವ ಉತ್ಸವ ನಡೆದಿದೆ.

ಪ್ರತಿವರ್ಷ ಬಸವ ಉತ್ಸವ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿ, ₹1 ಕೋಟಿ ಅನುದಾನ ಮೀಸಲಿಡಬೇಕು ಎಂಬ ಬಸವಾನುಯಾಯಿಗಳ ಬೇಡಿಕೆಗೆ ಸರ್ಕಾರದ ಸ್ಪಂದನೆ ಸಿಗುತ್ತಿಲ್ಲ. ನಾಡಿನ ಕಲೆ, ಸಾಹಿತಿ, ಸಂಸ್ಕೃತಿ ಉಳಿಸಿ ಬೆಳೆಸುವ ಜೊತೆಗೆ ಬಸವಾದಿ ಶರಣರ ಚಿಂತನೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ದೃಷ್ಟಿಯಿಂದ ಉತ್ಸವ ನಡೆಸಲು ಈ ವರ್ಷ ಬಸವ ಉತ್ಸವ ಆಚರಣೆಗೆ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಬಸವ ತತ್ವ ಅನುಯಾಯಿಗಳು ಒತ್ತಾಯಿಸುತ್ತಿದ್ದಾರೆ.
ʼಬಸವ ಉತ್ಸವʼ ಆಚರಣೆ ಬಗ್ಗೆ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಬಸವಾಭಿಮಾನಿಗಳು ʼಈದಿನ.ಕಾಮ್ʼ ಜೊತೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವರ್ಷಕ್ಕೊಮ್ಮೆʼಬಸವ ಉತ್ಸವʼ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು : ಗೊ.ರು.ಚನ್ನಬಸಪ್ಪ
ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕ್ರತಿಕ ನಾಯಕರೆಂದು ಘೋಷಿಸಿರುವುದು ತುಂಬಾ ಸಂತೋಷದ ಸಂಗತಿ. ಶರಣರ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ವಾರ್ಷಿಕವಾಗಿ ಉತ್ಸವ ನಡೆಸುವುದು ತುಂಬಾ ಸೂಕ್ತವಾದದ್ದು. ಇದು ರಾಜ್ಯ ಸರ್ಕಾರದಿಂದ ಆಚರಿಸುವ ಕಾರಣದಿಂದ ಹೆಚ್ಚಿನ ತೂಕ ಬರುತ್ತದೆʼ ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಆಗ್ರಹಿಸಿದರು.
ʼಬಸವಣ್ಣನವರು ನಡೆದಾಡಿದ ನೆಲದಲ್ಲಿ ಉತ್ಸವ ನಡೆದರೆ ಆ ನೆಪದಲ್ಲಿ ಎಲ್ಲ ಕಾಯಕ ಶರಣನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಲು ಈ ಭಾಗದ ಜನರಿಗೆ ಅವಕಾಶವಾಗುತ್ತದೆ. ಬಸವಣ್ಣನವರ ಬಗ್ಗೆ ಅಪಾರ, ಅನನ್ಯವಾದ ಭಕ್ತಿ, ಶ್ರದ್ಧೆ ಇರುವ ಈ ಬಸವಕಲ್ಯಾಣ ನೆಲದಲ್ಲಿ ಮೊದಲ ಹೆಜ್ಜೆಯಾಗಿ ಉತ್ಸವ ನಡೆಯಬೇಕು.ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಗಮನಹರಿಸಿ ಬಸವಕಲ್ಯಾಣದಲ್ಲಿ ಬಸವ ಉತ್ಸವ ಆಚರಣೆಗೆ ಮುಂದಾಗಬೇಕುʼ ಎಂದು ಒತ್ತಾಯಿಸಿದರು.
ʼಬಸವ ಉತ್ಸವʼ ಆಚರಿಸದಿದ್ದರೆ ಸರ್ಕಾರಕ್ಕೆ ಕಳಂಕ : ರಂಜಾನ್ ದರ್ಗಾ
ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕ್ರತಿಕ ನಾಯಕ ಎಂದು ಘೋಷಿಸಿದ ಬಳಿಕ ಬಸವ ಉತ್ಸವ ಆಚರಣೆ ಮಾಡದಿರುವುದು ಬೇಸರದ ಸಂಗತಿ. ಬಸವ ಉತ್ಸವ ಎಂಬುದು ಒಂದು ಜಾತಿ, ಧರ್ಮದ ಉತ್ಸವ ಅಲ್ಲ, ಇದು ಮಾನವ ಸಂಸ್ಕೃತಿ ಉತ್ಸವ ಎಂದು ಹಿರಿಯ ಸಾಹಿತಿ, ಬಸವತತ್ವ ಚಿಂತಕ ರಂಜಾನ್ ದರ್ಗಾ ಹೇಳಿದರು.
ʼಕೇವಲ ಒಂದು ಸಮಾಜದ ಅಲ್ಲದೆ ಇಡೀ ದೇಶದ ಸರ್ವ ಜನರ ಪ್ರೀತಿಯ ಸಾಂಸ್ಕೃತಿಕ ನಾಯಕ ಬಸವಣ್ಣನವರು. ನಾವು ಬಸವ ಸಂಸ್ಕೃತಿಯನ್ನು ಇಡೀ ದೇಶ ಅಷ್ಟೇ ಅಲ್ಲದೆ ವಿಶ್ವವ್ಯಾಪಿ ಮಾಡುವ ಕನಸು ಕಂಡಿದ್ದೇವೆ. ಆದರೆ ಸರ್ಕಾರ ನಿರಂತರವಾಗಿ ಉತ್ಸವ ಆಚರಿಸದೆ ನಿರುತ್ಸಾಹ ತೋರುತ್ತಿರುವುದು ತುಂಬಾ ದುಃಖದ ವಿಚಾರʼ ಎಂದು ಬೇಸರ ವ್ಯಕ್ತಪಡಿಸಿದರು.
ʼವಿಶ್ವ ಸಾಂಸ್ಕೃತಿಕ ಕೇಂದ್ರವಾದ ಬಸವಕಲ್ಯಾಣದಲ್ಲಿ 600 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಜಗತ್ತಿನ ಎಲ್ಲ ಕಾಯಕ ಜೀವಿಗಳ ಘನತೆಯನ್ನು ಎತ್ತಿ ಹಿಡಿದ ಈ ಕ್ಷೇತ್ರದಲ್ಲಿ ಉತ್ಸವ ಆಚರಿಸಿದೆ ಇನ್ನೆಲ್ಲಿ ಆಚರಿಸುತ್ತಾರೆ. ಈ ಬಗ್ಗೆ ಆಳುವ ಸರ್ಕಾರ, ವಿರೋಧ ಪಕ್ಷಗಳು ಯೋಚಿಸುತ್ತಿಲ್ಲ. ಇನ್ನು ಬಸವಾದಿ ಶರಣರ ಮಹತ್ವ ತಿಳಿದುಕೊಳ್ಳಲು ಜನರು ಸಿದ್ಧರಿಲ್ಲ. ಈ ಬಗ್ಗೆ ಎಲ್ಲ ಜಾತಿ, ಸಮುದಾಯದವರು ಒಕ್ಕೊರಲಿನಿಂದ ಒತ್ತಾಯಿಸಬೇಕಾಗಿದೆʼ ಎಂದರು.

ʼಬಸವಣ್ಣನವರನ್ನು ಕರ್ನಾಟಕ ಜ್ಯೋತಿ, ಲಿಂಗಾಯತ ಜ್ಯೋತಿ ಎಂದು ಕರೆಯುವುದಿಲ್ಲ. ಬಸವಣ್ಣ ಜಗಜ್ಯೋತಿಯಾಗಿದ್ದಾರೆ. ವಿಶ್ವಮಾನವ ಸಂದೇಶ ನೀಡಿದ ಬಸವಣ್ಣನವರನ್ನು ನಿರ್ಲಕ್ಷ್ಯ ಮಾಡಬಾರದು. ಈ ಉತ್ಸವ ಆಚರಣೆ ಮಾಡದಿದ್ದರೆ ಸರ್ಕಾರಕ್ಕೆ ಕಳಂಕ ಬರುತ್ತದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಬೇಗ ನಿರ್ಧಾರ ತೆಗೆದುಕೊಂಡು ಬಸವ ಉತ್ಸವ ಆಚರಣೆಗೆ ಮುಂದಾಗಬೇಕುʼ ಎಂದು ಆಗ್ರಹಿಸಿದರು.
ಬಸವ ಉತ್ಸವಕ್ಕೆ ₹1 ಕೋಟಿ ಅನುದಾನ ನೀಡಲಿ : ರವೀಂದ್ರ ಕೊಳಕೂರ್
ಬಸವ ತತ್ವ ಪ್ರಸಾರ ಮತ್ತು ಪ್ರಚಾರಕ್ಕಾಗಿ 2010ರಿಂದ ಪ್ರಾರಂಭವಾದ ಬಸವ ಉತ್ಸವ ಪ್ರತಿವರ್ಷ ಆಚರಿಸದೆ ಕುಂಟುತ್ತಾ ಸಾಗುತ್ತಿರುವುದು ಬಸವ ಅನುಯಾಯಿಗಳಿಗೆ ಬಹಳ ನೋವುಂಟು ಮಾಡಿದೆ ಎಂದು ರಾಷ್ಟ್ರೀಯ ಬಸವ ದಳ ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ರವೀಂದ್ರ ಕೊಳಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼ2010ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮೊದಲ ಬಾರಿಗೆ ಬಸವ ಉತ್ಸವವನ್ನು ರಾಜ್ಯ ಸರ್ಕಾರದಿಂದ ಆಚರಿಸಲು ಮುಂದಾಗಿ, ಪ್ರತಿ ವರ್ಷ ಉತ್ಸವಕ್ಕೆ ₹1ಕೋಟಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ನಿರಂತರವಾಗಿ ಬಸವ ಉತ್ಸವ ನಡೆಯಲಿಲ್ಲ. ಕಳೆದ 14 ವರ್ಷಗಳಲ್ಲಿ 6 ಬಾರಿ ಮಾತ್ರ ಬಸವ ಉತ್ಸವ ನಡೆದಿದೆʼ ಎಂದು ಮಾಹಿತಿ ನೀಡಿದರು.
ʼರಾಜ್ಯದ ಬೇರೆ ಭಾಗದಲ್ಲಿ ಹಂಪಿ ಉತ್ಸವ, ಮೈಸೂರು ದಸರಾ ಸೇರಿದಂತೆ ಇತರೆ ಉತ್ಸವಗಳು ನಡೆಸುವಂತೆ ಪ್ರತಿವರ್ಷ ಬಸವಕಲ್ಯಾಣದಲ್ಲಿ ಕಡ್ಡಾಯವಾಗಿ ಬಸವ ಉತ್ಸವ ಮಾಡಬೇಕೆಂದು ಆಗ್ರಹಿಸಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಾಗಾಗಿ ಬಸವ ಉತ್ಸವಕ್ಕೆ ರಾಜ್ಯ ಸರ್ಕಾರ ಕನಿಷ್ಠ ಒಂದು ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.
ಬಸವ ಉತ್ಸವ ಆಚರಣೆಗೆ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಲಿ : ಆಕಾಶ ಖಂಡಾಳೆ
ಬಸವ ಉತ್ಸವ ಆಚರಣೆ ಮಾಡುವಲ್ಲಿ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. 2018 ಹಾಗೂ 2023ರಲ್ಲಿ ಚುನಾವಣೆ ಪೂರ್ವದಲ್ಲಿ ಬರೀ ತೋರಿಕೆಗಾಗಿ ಬಸವ ಉತ್ಸವ ಆಚರಣೆ ಮಾಡಲಾಗಿತ್ತು ಎಂಬುದು ಅನುಮಾನ ಕಾಡುತ್ತಿದೆ ಎಂದು ಸಾಮಾಜಿಕ ಚಿಂತಕ ಆಕಾಶ ಖಂಡಾಳೆ ಹೇಳಿದ್ದಾರೆ.

ʼಈ ಬಗ್ಗೆ ಬೀದರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ʼಉತ್ಸವಕ್ಕೆ ಅನುದಾನ ಕೊರತೆ ಇದೆʼ ಎಂದು ಹೇಳುತ್ತಿದ್ದಾರೆ. ಬೇರೆ ಭಾಗದಲ್ಲಿ ಉತ್ಸವ ಆಚರಣೆಗೆ ಅನುದಾನ ಕೊರತೆ ಇರುವುದಿಲ್ಲ. ನಮ್ಮ ಭಾಗದಲ್ಲಿ ನಡೆಯುವ ಬಸವ ಉತ್ಸವಕ್ಕೆ ಅನುದಾನ ಕೊರತೆಯೇ? ಅಥವಾ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ಎಂಬುದು ಅನುಮಾನ ಮೂಡುತ್ತಿದೆʼ ಎಂದರು.
ಬಸವಕಲ್ಯಾಣದಲ್ಲಿ ಬಸವ ಉತ್ಸವ ಆಚರಣೆಗೆ ಒತ್ತಾಯಿಸಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ತುಂಬಾ ನೋವಿನ ಸಂಗತಿ. ರಾಜ್ಯ ಅಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಅಸಂಖ್ಯೆ ಬಸವ ಅನುಯಾಯಿಗಳು ಉತ್ಸವದಲ್ಲಿ ಭಾಗವಹಿಸಿಸುತ್ತಾರೆ. ಈಗಲಾದರೂ ಜಿಲ್ಲೆಯ ಜನಪ್ರತಿನಿಧಿಗಳು ಇಚ್ಚಾಶಕ್ತಿ ಪ್ರದರ್ಶಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉತ್ಸವ ಆಚರಿಸಬೇಕುʼ ಎಂದು ಆಗ್ರಹಿಸಿದ್ದಾರೆ.
ಬಸವ ಉತ್ಸವ ಮೂರು ಆಯಾಮಗಳಲ್ಲಿ ಮೂಡಿ ಬರಲಿ : ಡಾ.ಭೀಮಶಂಕರ ಬಿರಾದರ್
ಬಸವಣ್ಣ ವಚನಕಾರರನ್ನು ಸಂಘಟಿಸಿ ವಚನ ಸಾಹಿತ್ಯವನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯನ್ನು ಬೆಳೆಸಿ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಮಹಾನ್ ನಾಯಕ. ನೆಲಮೂಲದ ಮೂಲ ಸಂಸ್ಕೃತಿ ಜೊತೆಗೆ ತಳ ಸಮುದಾಯದಕ್ಕೆ ದನಿಯಾಗಿದ್ದು ವಚನ ಚಳವಳಿ. ಬಸವಣ್ಣ ಸೇರಿ ಎಲ್ಲ ಶರಣರ ಚಿಂತನೆ, ಬೌದ್ಧಿಕ ಪ್ರಕ್ರಿಯೆ ಹಾಗೂ ಸಾಂಸ್ಕೃತಿಕ ಮಾದರಿಯಾಗಿ ಬಸವ ಉತ್ಸವ ಮೂಡಿ ಬರಬೇಕಾಗಿದೆ ಎಂದು ಪ್ರಾಧ್ಯಾಪಕ ಡಾ.ಭೀಮಶಂಕರ ಬಿರಾದರ್ ಹೇಳಿದರು.
ʼಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ಬಸವ ಉತ್ಸವಕ್ಕೆ ಈ ಹಿಂದೆ ಸಾಹಿತಿ ಅನಂತಮೂರ್ತಿ ಸೇರಿದಂತೆ ಅನೇಕ ಚಿಂತಕರ ದಂಡು ಇಲ್ಲಿ ನೆರೆದಿತ್ತು. ಒಂದು ದಶಕದ ಹಿಂದೆ ಆರಂಭವಾದ ಬಸವ ಉತ್ಸವ ವಿವಿಧ ಕಾರಣಗಳಿಂದ ಹಲವು ಬಾರಿ ಉತ್ಸವ ಆಚರಣೆಯಾಗಲಿಲ್ಲ. ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ ಉತ್ಸವ ನಿರಂತರವಾಗಿ ನಡೆಯಲಿ ಎಂಬುದು ನಮ್ಮೆಲ್ಲರ ಅಪೇಕ್ಷೆʼ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಮಾರ್ಚ್ 7 ರಂದು 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆ
ʼಬಸವ ಉತ್ಸವವು ಸಂಗೀತ, ಸಾಂಸ್ಕೃತಿಕ, ಅಕ್ಷರ ಸಂಸ್ಕೃತಿ ಹಾಗೂ ಅನ್ಯ ಭಾಷೆಯ ವಿದ್ವಾಂಸರೊಂದಿಗೆ ವಚನಕಾರರ ಕುರಿತು ತೌಲನಿಕ ಅಧ್ಯಯನ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಬಸವ ಉತ್ಸವ ಬಹಳ ವಿಶೇಷವಾಗಿ ಜರುಗಬೇಕುʼ ಎಂದು ತಿಳಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.