ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿಯಾಗಿದ್ದಾಗ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಶೀಶ್ ಮಹಲ್’ನ ಐಷಾರಾಮಿ ನವೀಕರಣ ಕಾಮಗಾರಿ ನಡೆಸಲಾಗಿದ್ದು, ಆ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಕಟ್ಟಡ ಮಾನದಂಡಗಳನ್ನೂ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿವರವಾದ ತನಿಖೆ ನಡೆಸಲು ಕೇಂದ್ರ ಸರ್ಕಾರವು ಆದೇಶಿಸಿದೆ.
ಅಕ್ರಮ ಮತ್ತು ಮಾನಡಂಗಳ ಉಲ್ಲಂಘನೆ ಕುರಿತು ತನಿಖೆ ನಡೆಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಗೆ (ಸಿಪಿಡಬ್ಲ್ಯೂಡಿ) ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಕೇಳಿದೆ.
ಮುಖ್ಯಮಂತ್ರಿಗಳ ನಿವಾಸ ಶೀಶ್ ಮಹಲ್ 40,000 ಚದರ ಗಜಗಳಷ್ಟು (8 ಎಕರೆ) ವಿಸ್ತಾರವಾದ ಪ್ರದೇಶದಲ್ಲಿದೆ. ಈ ಕಟ್ಟಡವನ್ನು ನಿರ್ಮಿಸಲು ಕಟ್ಟಡ ಮಾನದಂಡಗಳನ್ನು ಉಲ್ಲಂಘಿಸಿ, ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ.
ದೆಹಲಿಯ 6 ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದ (ಶೀಶ್ ಮಹಲ್) ನವೀಕರಣದಲ್ಲಿ ಅಕ್ರಮ ನಡೆದಿದೆ. ಕಟ್ಟಡ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು 2024ರ ಅಕ್ಟೋಬರ್ 14ರಂದು ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರು ಸಿವಿಸಿಗೆ ದೂರು ನೀಡಿದ್ದರು.
“ರಾಜ್‌ಪುರ ರಸ್ತೆಯಲ್ಲಿರುವ ಸರ್ಕಾರಿ ನಿವಾಸಗಳ ಸಂಖ್ಯೆ 45 ಮತ್ತು 47 (ಹಿಂದೆ ಹಿರಿಯ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ನಿವಾಸಗಳನ್ನು ನೀಡಲಾಗಿತ್ತು) ಎರಡು ಬಂಗಲೆಗಳನ್ನು ಕೆಡವಿ ಶೀಶ್ ಮಹಲ್ ಜೊತೆಗೆ ವಿಲೀನಗೊಳಿಸಲಾಗಿದೆ. ಇದು ಕಟ್ಟಡ ಮಾನದಂಡಗಳನ್ನು ಉಲ್ಲಂಘಿಸಿದೆ. ಯೋಜನೆಗೆ ವಿನ್ಯಾಸ ಅನುಮೋದನೆಯನ್ನೂ ಪಡೆಯಲಾಗಿಲ್ಲ” ಎಂದು ದೂರಿನಲ್ಲಿ ಆರೋಪಿಸಿದ್ದರು.
“ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದ ಐಷಾರಾಮಿ ಸೌಕರ್ಯಗಳಿಗಾಗಿ ತೆರಿಗೆದಾರರ ಕೋಟ್ಯಂತರ ಹಣವನ್ನು ಖರ್ಚು ಮಾಡಿದ್ದಾರೆ. ಐಷಾರಾಮಿ ವಸ್ತುಗಳ ಮೇಲಿನ ಖರ್ಚುಗಳು ಸೂಚಿಸಲಾದ ಮಿತಿಗಳನ್ನು ಮೀರಿವೆ. ಅಕ್ರಮ ನಡೆದಿದೆ” ಎಂದು ಆರೋಪಿಸಿದ್ದರು.
ದೂರು ದಾಖಲಾದ ಬಳಿಕ, ಫೆಬ್ರವರಿ 13 ರಂದು ಸಿಎಂ ನಿವಾಸದ ವಾಸ್ತವಿಕ ವರದಿಯನ್ನು ಸಿಪಿಡಬ್ಲ್ಯೂಡಿ ಸಲ್ಲಿಸಿದೆ. ಇದೀಗ, ತನಿಖೆ ನಡೆಸುವಂತೆ ಸಿವಿಸಿ ಆದೇಶಿಸಿದೆ.