- ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರ ಸಭೆ
- ಇಲಾಖೆ ಪ್ರಗತಿಕಾರ್ಯಗಳ ಬಗ್ಗೆ ಮಾಹಿತಿ ಕೇಳಿದ ಬೋಸರಾಜು
ಸಣ್ಣ ನೀರಾವರಿ ಇಲಾಖೆಯಲ್ಲಿಅಕ್ರಮದ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಆ ಕುರಿತು ವರದಿ ನೀಡುವಂತೆ ಅಧಿಕಾರಿಳಿಗೆ ಸೂಚಿಸಿರುವುದಾಗಿ ಸಚಿವ ಬೋಸರಾಜು ಹೇಳಿದರು.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, ಪ್ರತಿ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಅಕ್ರಮಗಳ ಕುರಿತಂತೆ ವರದಿ ಪಡೆಯಲು ಮುಖ್ಯಮಂತ್ರಿಗಳು ಹೇಳಿದ್ದರು. ಅದರಂತೆಯೇ ಈಗ ನಮ್ಮ ಇಲಾಖೆ ಕಾರ್ಯ ವೈಖರಿ ಬಗ್ಗೆ ವರದಿ ಪಡೆಯಲಾಗುತ್ತಿದೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ ಇತ್ತೀಚೆಗೆ ನಡೆದ ಕೆಲಸಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದರೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೆಲ್ಲ ಪರಿಶೀಲನೆಗೆ ತೆರಳಿದ್ದಾರೆ ಎಂದ ಅವರು ರಾಜ್ಯಾದ್ಯಂತ ಕೆರೆಗಳ ಪರಿಶೀಲನಾ ಕಾರ್ಯವೂ ನಡೆಯುತ್ತಿದ್ದು, ಇಲಾಖೆ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆಗೆ ತೆರಳಿದ್ದಾರೆ ಎಂದರು.
ಇನ್ನು ರಾಜ್ಯದಲ್ಲಿನ ಕೆರೆತುಂಬುವ ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ಕೆರೆ ತುಂಬುವ ಕೆಲಸ ಇಡೀ ರಾಜ್ಯದಲ್ಲಿ ನಡೆಯುತ್ತಿದೆ, ಅಂತರ್ಜಲ ಹೆಚ್ಚಿಸುವ ಕೆಲಸ ಕೂಡ ನಡೆಯುತ್ತಿದೆ. ಕೆ ಸಿ ವ್ಯಾಲಿಯ ಎರಡು ಪ್ರಾಜೆಕ್ಟ್‌ಗಳು ಯಶಸ್ವಿಯಾಗಿವೆ; ಈ ಹಿನ್ನೆಲೆಯಲ್ಲಿ ಮೂರನೇ ಪ್ರಾಜೆಕ್ಟ್‌ಗೆ ಮುಂದಾಗಿದ್ದೇವೆ ಎಂದರು.
ಈ ವಿಚಾರ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬರುತ್ತಿದೆ. ರಾಜ್ಯಾದ್ಯಂತ ಮಲಿನ ನೀರನ್ನು ಶುದ್ದಗೊಳಿಸಿ ಕೆರೆಗಳಿಗೆ ತುಂಬಿಸುವ ಕೆಲಸ ಮಾಡ್ತೇವೆ ಎಂದ ಅವರು, ತುಮಕೂರು ನಗರಕ್ಕೆ ನೀರು ಪೂರೈಕೆಗೆ 1080 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ತಮ್ಮ ಮತ್ತೊಂದು ಇಲಾಖೆ ಕಾರ್ಯ ವೈಖರಿ ಬಗ್ಗೆ ಮಾತನಾಡಿದ ಸಚಿವ ಬೋಸರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ; ಮಕ್ಕಳಿಗೆ ಅನುಕೂಲ ಆಗುವ ರೀತಿ ವೈಜ್ಞಾನಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ ಎಂದರು.
ಈ ಸುದ್ದಿ ಓದಿದ್ದೀರಾ?: ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪೋಸ್ಟ್‌ಗಳನ್ನು ನೋಡಿಕೊಂಡು ಸರ್ಕಾರ ಸುಮ್ಮನೇ ಕೂರಲ್ಲ: ಪ್ರಿಯಾಂಕ್ ಖರ್ಗೆ
ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ನಾನು ಯಾವುದೇ ಮಾತುಕತೆ ಮಾಡಿಲ್ಲ, ಹೈಕಮಾಂಡ್ ನಾಯಕರು, ಸಿಎಂ, ಡಿಸಿಎಂ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ಅಂತಿಮ ಎಂದು ಹೇಳಿದರು.
ಮುಂದುವೆರದು ಮಾತನಾಡಿದ ಅವರು, ನಾನು ನಮ್ಮ ನಾಯಕರು ಹೇಳಿದ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಎಲ್ಲ ಸಮಸ್ಯೆಗಳನ್ನು ಸರಿಪಡಿಸುವುದು ಸಿಎಂ ಡಿಸಿಎಂ ಮಾಡ್ತಾರೆ. ಕೊಟ್ಡ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಹೋಗುವುದು ನನ್ನ ಕರ್ತವ್ಯ ಎಂದು ಹೇಳಿದರು.