ವಿಷಮ ಭಾರತ | ದಲಿತ-ಬೌದ್ಧ ಹಿನ್ನೆಲೆಯ ಜಸ್ಟಿಸ್ ಗವಾಯಿ ಹೀಗೆಲ್ಲ ಅನ್ನಬಹುದೇ?

Date:

Advertisements

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ‘ಅನ್ನಭಾಗ್ಯ’ ಯೋಜನೆ ಜಾರಿಗೆ ತಂದರು. ಆಗ ಸ್ವಾರ್ಥಿ ಮಧ್ಯಮವರ್ಗ ಮತ್ತು ಕುಲೀನ ಜನವರ್ಗಗಳು ‘ವಾಸಕ್ಕೆ ಆಶ್ರಯ ಮನೆ ಇರಲು, ರೂಪಾಯಿಗೊಂದು ಕೆ.ಜಿ ಅಕ್ಕಿ ಸಿಗುತಿರಲು, ರಾತ್ರಿ ನಶೆಗೆ ಅಗ್ಗದ ಮದ್ಯವಿರಲು ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸಿದ್ದರಾಮಯ್ಯ’ ಎಂಬ ವಿಕೃತ ಮನಸ್ಥಿತಿಯ ಮೆಸೇಜುಗಳ ಪ್ರವಾಹವನ್ನೇ ಹರಿಸಿತ್ತು.

ಭೂಷಣ್ ರಾಮಕೃಷ್ಣ ಗವಾಯಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಲ್ಲೊಬ್ಬರು. ತಂದೆ ಆರ್‌ಎಸ್‌ ಗವಾಯಿ ಬಾಬಾಸಾಹೇಬ ಅಂಬೇಡ್ಕರ್ ಅವರ ಸಮೀಪದ ಸಹವರ್ತಿಯಾಗಿ ಕೆಲಸ ಮಾಡಿದ್ದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಗವಾಯಿ) ಬಣದ ಮುಖ್ಯಸ್ಥರಾಗಿದ್ದರು. ಸಂಸತ್ ಸದಸ್ಯರೂ ರಾಜ್ಯಪಾಲರೂ ಆಗಿದ್ದವರು. ಗವಾಯಿ ಕುಟುಂಬ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬೌದ್ಧ ಧರ್ಮದಿಂದ ಪ್ರಭಾವಿತ ಎನ್ನಲಾಗಿದೆ. ಬಿ.ಆರ್.ಗವಾಯಿ ಅವರು ಭಾರತದ ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಏರಲಿದ್ದಾರೆ. ದೇಶದ ನ್ಯಾಯವ್ಯವಸ್ಥೆಯ ಈ ಅತ್ಯುನ್ನತ ಸ್ಥಾನಕ್ಕೇರುವ ಎರಡನೆಯ ದಲಿತ. 2007ರಲ್ಲಿ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ.

ಇಂತಹ ಹಿನ್ನೆಲೆಯಿಂದ ಬಂದಿರುವ ನ್ಯಾಯಮೂರ್ತಿ ಗವಾಯಿ ಅವರು ಭಾರತದ ಬಡಜನರ ಕುರಿತು ಮಾಡಿರುವ ಸಂವೇದನಾರಹಿತ ಹೇಳಿಕೆ ಕುರಿತು ವ್ಯಾಪಕ ಖಂಡನೆ ಪ್ರಕಟವಾಗಿದೆ. ಕೆಲ ದಿನಗಳ ಹಿಂದೆ ಸುಪ್ರೀಮ್ ಕೋರ್ಟಿನಲ್ಲಿ ಪ್ರಕರಣವೊಂದರ ವಿಚಾರಣೆ ನಡೆದಿದ್ದ ಸಂದರ್ಭ. ನಗರ ಪ್ರದೇಶಗಳಲ್ಲಿ ಮನೆಯಿಲ್ಲದವರಿಗೆ ಸೂರು ಕಲ್ಪಿಸುವ ಯೋಜನೆಯ ಜಾರಿ ಕುರಿತ ರಿಟ್ ಅರ್ಜಿಗಳ ವಿಚಾರಣೆಯಿದು. “ಈ ಜನರನ್ನು ದೇಶದ ಮುಖ್ಯಧಾರೆಗೆ ತರುವುದನ್ನು ಬಿಟ್ಟು, ಪರೋಪಜೀವಿಗಳ ಮತ್ತೊಂದು ಜನವರ್ಗವನ್ನು ಸೃಷ್ಟಿ ಮಾಡುತ್ತಿದ್ದೇವೆ ಅಲ್ಲವೇ? ಚುನಾವಣೆಗಳ ಸಂದರ್ಭದಲ್ಲಿ ಬಿಟ್ಟಿ ಯೋಜನೆಗಳನ್ನು ಘೋಷಿಸುವ ಕಾರಣ ಜನ ಮೈಬಗ್ಗಿಸಿ ಕೆಲಸ ಮಾಡಲು ತಯಾರಿಲ್ಲ. ಕೆಲಸ ಮಾಡದಿದ್ದರೂ ಅವರಿಗೆ ಉಚಿತ ರೇಷನ್ ಸಿಗುತ್ತಿದೆ! ಅವರನ್ನು ಮುಖ್ಯಧಾರೆಗೆ ಕರೆತಂದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡುವುದು ಒಳ್ಳೆಯದಲ್ಲವೇ?”.

ಗವಾಯಿ
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ

“ನಾನು ಕೃಷಿಕ ಕುಟುಂಬದಿಂದ ಬಂದವನಾಗಿದ್ದೇನೆ. ಮಹಾರಾಷ್ಟ್ರದಲ್ಲಿ ಮೊನ್ನೆ ಚುನಾವಣೆಗಳಿಗೆ ಮುನ್ನ ಪ್ರಕಟಿಸಿದ ಬಿಟ್ಟಿ ಯೋಜನೆಗಳಿಂದಾಗಿ ಬೇಸಾಯ ಸಂಬಂಧದ ಕೆಲಸ ಕಾರ್ಯಗಳಿಗೆ ಕೂಲಿಗಳು ಸಿಗುತ್ತಿಲ್ಲ” ಎಂದೂ ನ್ಯಾಯಮೂರ್ತಿಗಳು ಹೇಳಿದ್ದಾರೆ.

Advertisements

ಬದುಕಲು ತಲೆಯ ಮೇಲೊಂದು ಸೂರಿಲ್ಲದೆ ಬೀದಿಪಾಲಾಗಿರುವ ಕೋಟ್ಯಂತರ ಜನರನ್ನು ಮತ್ತು ತಿಂಗಳಿಗೆ ಐದು ಕೇಜಿ ಉಚಿತ ಅಕ್ಕಿ ಮತ್ತು ಗೋದಿ ಪಡೆಯುತ್ತಿರುವ 80 ಕೋಟಿ ಜನರನ್ನು ಪರೋಪಜೀವಿಗಳು ಎಂದು ಕರೆಯುವ ಮನಸ್ಸಾದರೂ ಹೇಗೆ ಬಂತು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರಿಗೆ!

ವಿಶೇಷವಾಗಿ ಸಮಾಜದ ಅಸಹಾಯಕರು ಮತ್ತು ದಮನಿತರ ಪರ ದನಿಯೆತ್ತಬೇಕಿರುವ ಮತ್ತು ಅವರ ಮಾನವೀಯ ಹಕ್ಕುಗಳನ್ನು ಕಾಯುವುದು ಸುಪ್ರೀಮ್ ಕೋರ್ಟಿನ ಸಾಂವಿಧಾನಿಕ ಕರ್ತವ್ಯ. ಬದಲಿಗೆ ಇಂತಹ ಕೋರ್ಟಿನ ಹಿರಿಯ ನ್ಯಾಯಮೂರ್ತಿಯೊಬ್ಬರು, ಅದರಲ್ಲೂ ದಮನಿತ ಸಮುದಾಯಗಳ ಹಿನ್ನೆಲೆಯಿಂದ ಬಂದವರು ‘ಬಿಟ್ಟಿ ಯೋಜನೆಗಳು ಮತ್ತು ‘ಪರೋಪಜೀವಿ’ಗಳೆಂದು ಮಾಡಿರುವ ಟೀಕೆ ಅಮಾನವೀಯ. ಹೊಟ್ಟೆಬಟ್ಟೆಗಿಲ್ಲದ ಕೋಟ್ಯಂತರ ಬಡಜನರ ಕುರಿತ ಪೂರ್ವಗ್ರಹದ ಈ ಹೇಳಿಕೆಯಲ್ಲಿ ತುಳುಕಿದೆ. ನ್ಯಾಯಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿ ಅಗಸ್ಟೈನ್ ಜಾರ್ಜ್ ಮಾಸಿ ಕೂಡ ಈ ಟಿಪ್ಪಣಿಗೆ ದನಿಗೂಡಿಸಿದ್ದಾರೆ. ಮಹಾರಾಷ್ಟ್ರದ ‘ಲಾಡ್ ಕೀ ಬಾಹಿನ್’ ಯೋಜನೆಯೂ ಸೋಮಾರಿತನಕ್ಕೆ ಅವಕಾಶ ನೀಡಿದೆ ಎಂಬ ಅರ್ಥದ ಟೀಕೆ ಟಿಪ್ಪಣಿ ಮಾಡಲಾಗಿದೆ.

ದಿನಗೂಲಿಗಳಾಗಿ ದೇಶಕಟ್ಟುವ ಈ ಶ್ರಮಿಕವರ್ಗವಿದು. ಭಾರೀ ಬಂಡವಾಳಿಗರು ಇವರ ಶ್ರಮಶಕ್ತಿಯ ಬೆವರನ್ನು ಅಗ್ಗದ ಕೂಲಿಗೆ ಖರೀದಿಸಿ ಶೋಷಿಸುತ್ತಿದ್ದಾರೆ. ಅವರಿಗೆ ನ್ಯಾಯವಾದ ದಿನಗೂಲಿ ಅಥವಾ ಮಾಸಿಕ ವೇತನ ದೊರೆಯುತ್ತಿಲ್ಲ. ಬಂಡವಾಳಕ್ಕೆ ಬೆವರು ಅಡಿಯಾಳಾದ ಚಕ್ರ ಉರುಳುತ್ತ ಉರುಳುತ್ತ ಬಂಡವಾಳವನ್ನು ನವದೈವದ ಸಿಂಹಾಸನದಲ್ಲಿ ಪ್ರತಿಷ್ಠಾಪಿಸಿದೆ. ಭಾರತವನ್ನು ಮತ್ತೊಮ್ಮೆ ಭವ್ಯ ಮತ್ತು ಮಹಾನ್ ಮಾಡೋಣ (ಮೇಕ್ ಇಂಡಿಯಾ ಗ್ರೇಟ್ ಅಗೇಯ್ನ್) ಎಂಬ ಘೋಷಣೆಯನ್ನು ಪ್ರಧಾನಮಂತ್ರಿ ಮೋದಿಯವರು ಅಮೆರಿಕೆಯ ನೆಲದಲ್ಲಿ ಆಡಿದ್ದಾರೆ. ಆದರೆ ಈ ದೇಶದ ಬಹುಜನರು ಮತ್ತು ಮಹಿಳೆಯರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಸುಧಾರಣೆಯಾಗದೆ ಭಾರತ ಮಹಾನ್ ಎನಿಸಿಕೊಳ್ಳುವುದು ಅಥವಾ ವಿಶ್ವಗುರು ಆಗುವುದು ಅಸಾಧ್ಯ.

ಕರ್ನಾಟಕದ ‘ಗೃಹಲಕ್ಷ್ಮಿ’, ಮಧ್ಯಪ್ರದೇಶದ ‘ಲಾಡ್ಲೀ ಬೆಹೆನ್’, ಮಹಾರಾಷ್ಟ್ರದ ಲಾಡ್ ಕೀ ಬಾಹಿನ್ ಕುಟುಂಬದ ಒಬ್ಬ ಮಹಿಳೆಗೆ 1,250ರಿಂದ 2,500 ರುಪಾಯಿ ಮಾಸಿಕ ನಗದು ನೀಡುವ ಯೋಜನೆಗಳು. ಈ ಯೋಜನೆಗಳಿಗೆ ಹತ್ತು ಹಲವು ನಿಬಂಧನೆಗಳೂ ಉಂಟು. ಮಹಿಳೆಯರು ಈಗಾಗಲೆ ಕುಟುಂಬಗಳಲ್ಲಿ ಸಾವಿರಾರು ವರ್ಷಗಳಿಂದ ವೇತನರಹಿತ ಕೆಲಸ ಮಾಡುತ್ತಲೇ ಬಂದಿದ್ದಾರೆ. ಪತಿ ಮಾಡುವ ಹೊರಗೆಲಸಕ್ಕೆ ವೇತನ ಉಂಟು. ಪತ್ನಿ ಮಾಡುವ ಗೃಹಕೃತ್ಯಕ್ಕೆ ವೇತನ ಇಲ್ಲ.

ಇನ್ನು ಬಿಟ್ಟಿ ಯೋಜನೆಗಳ ಕಾರಣ ಕೃಷಿ ಕೆಲಸಕ್ಕೆ ಕೂಲಿಗಳು ಸಿಗುತ್ತಿಲ್ಲ ಎಂಬ ಟೀಕೆಯೂ ಬಹಳ ಹಳೆಯದು. ಯುಪಿಎ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ನೂರು ದಿನಗಳ ಕಾಲ ಉದ್ಯೋಗ ನೀಡಲು ಆರಂಭಿಸಿದಾಗಲೇ ಈ ಟೀಕೆಗಳನ್ನು ವ್ಯಾಪಕವಾಗಿ ತೇಲಿ ಬಿಡಲಾಗಿತ್ತು.

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಆಗ ಸ್ವಾರ್ಥಿ ಮಧ್ಯಮವರ್ಗ ಮತ್ತು ಕುಲೀನ ಜನವರ್ಗಗಳು ‘ವಾಸಕ್ಕೆ ಆಶ್ರಯ ಮನೆ ಇರಲು, ರೂಪಾಯಿಗೊಂದು ಕೆ.ಜಿ ಅಕ್ಕಿ ಸಿಗುತಿರಲು, ರಾತ್ರಿ ನಶೆಗೆ ಅಗ್ಗದ ಮದ್ಯವಿರಲು ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸಿದ್ದರಾಮಯ್ಯ’ ಎಂಬ ವಿಕೃತ ಮನಸ್ಥಿತಿಯ ಮೆಸೇಜುಗಳ ಪ್ರವಾಹವನ್ನೇ ಹರಿಸಿತ್ತು.

images 11

ಯುಪಿಎ ಸರ್ಕಾರ ಅನುಷ್ಠಾನಗೊಳಿಸಿದ ಆಹಾರ ಸುರಕ್ಷತಾ ಕಾಯಿದೆಯನ್ನು ಭಯಾನಕ ದುಃಸ್ವಪ್ನ ಎಂದು ಬಹುತೇಕ ಸಮೂಹ ಮಾಧ್ಯಮಗಳು ಬಣ್ಣಿಸಿದ್ದವು. ಪುಗಸಟ್ಟೆ ಹೊಟ್ಟೆ ತುಂಬಿಸುವ ದುಬಾರಿ ಕಸರತ್ತು ಎಂದು ಕಾರ್ಪೊರೇಟುವಾದಿಗಳು ಟೀಕಿಸಿದ್ದರು. ಹಸಿವು ಅಪೌಷ್ಟಿಕತೆಗಳನ್ನೇ ಹಾಸಿ ಹೊದೆಯುತ್ತಿರುವ ಭಾರತದ ಜನಕೋಟಿಯ ಸಂಕಟಕ್ಕೆ ಕುರುಡಾಗಿರುವ ದೊಡ್ಡ ಜನವರ್ಗ ಭಾರತದಲ್ಲಿದೆ. ‘ಹಸಿವು ಮತ್ತು ದಾರಿದ್ರ್ಯ ಎಂಬುದು ಮಾನವ ಹಕ್ಕುಗಳ ಉಲ್ಲಂಘನೆಯ ತಾಯಿಬೇರು’ ಎಂದು ಮಹಾತ್ಮಗಾಂಧಿ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಬರೆದಿದ್ದರು.

ನಾವು ಸೇವಿಸುವ ಚಹಾ ಪೇಯದಲ್ಲಿ ಹಬೆಯಾಡುವುದು ಚಹಾ ತೋಟಗಳ ಕಾರ್ಮಿಕರ ಹಸಿವು ಸಾವು ನೋವುಗಳೇ ವಿನಾ ದುಬಾರಿ ಜಾಹೀರಾತುಗಳಲ್ಲಿ ಹೇಳಲಾಗುವ ಆಹ್ಲಾದ ಅಲ್ಲ….. ಏಳು ವರ್ಷಗಳಷ್ಟು ಹಿಂದೆಯೇ ದಿಲ್ಲಿಯ ಪ್ರತಿಷ್ಠ ಜವಾಹರಲಾಲ್ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ ಉತ್ತರ ಬಂಗಾಳ ಮತ್ತು ಅಸ್ಸಾಮಿನ ಮುಚ್ಚಿದ ಚಹಾ ತೋಟಗಳು ಅರ್ಧ ಕೋಟಿ ಮಂದಿಯನ್ನು ಹಸಿವು ಹಾಹಾಕಾರಕ್ಕೆ ನೂಕಿದವು. ಬಂಗಾಳವೊಂದರಲ್ಲೇ ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದರು. 1,600 ಮಂದಿ ಹಸಿವು ಅಪೌಷ್ಟಿಕತೆಯಿಂದ ಸತ್ತಿದ್ದರು. ಕೂಲಿ ಕುಟುಂಬಗಳು ಹಸಿವಿನ ಬೆಂಕಿ ಆರಿಸಲು ಎಲೆಗಳು, ಇಲಿಗಳು ಹಾಗೂ ಕಾಡು ಹುಲ್ಲನ್ನು ತಿನ್ನತೊಡಗಿದ್ದರು.
ಗುಜರಾತಿನ ಅಭಿವೃದ್ಧಿಯ ಅಂಕಿ ಅಂಶಗಳು ಏನನ್ನೇ ಹೇಳಿಕೊಳ್ಳಲಿ. ಇಲ್ಲಿ ಉಪ್ಪು ತಯಾರಿಸುವ ಲಕ್ಷಾಂತರ ಮಂದಿ ವರ್ಷದಿಂದ ವರ್ಷಕ್ಕೆ ಹೊದ್ದು ಮಲಗುತ್ತಿರುವುದು ಬಡತನವನ್ನು ಮತ್ತು ಕಡುಬಡತನವನ್ನು…ಹತ್ತಾರು ಲಕ್ಷ ಮನೆಗೆಲಸದ ಮಹಿಳೆಯರಿಗೆ ಎಂತಹ ಸಂಬಳ ಯಾವ ರಜೆ.. ತಲೆಕೆಡಿಸಿಕೊಂಡಿರುವ ನ್ಯಾಯಾಲಯ ಉಂಟೇ?

ಬ್ಯಾಂಕುಗಳ “ಅನುತ್ಪಾದಕ ಆಸ್ತಿಗಳು” (NPA) ಎಂದರೇನು? ಜನಸಾಮಾನ್ಯರು ಬ್ಯಾಂಕುಗಳಲ್ಲಿ ಇರಿಸಿರುವ ಠೇವಣಿ ಹಣವನ್ನು ಸಾಲವಾಗಿ ಪಡೆದ ದೊಡ್ಡ ದೊಡ್ಡ ಉದ್ಯಮಪತಿಗಳು ಆ ಸಾಲವನ್ನು ಹಿಂದಿರುಗಿಸಲಿಲ್ಲ. ಅನುತ್ಪಾದಕ ಆಸ್ತಿಯ ಹೆಸರಲ್ಲಿ ಈ ಸಾಲಗಳನ್ನು ವಿಂಗಡಿಸಲಾಯಿತು. ಇಂತಹ ಸಾಲದ ಮೊತ್ತ 2015ರ ಮಾರ್ಚ್ ವೇಳೆಗೆ 3.23 ಲಕ್ಷ ಕೋಟಿಗಳಷ್ಟಿತ್ತು. 2018ರ ಮಾರ್ಚ್ ಹೊತ್ತಿಗೆ 10.36 ಲಕ್ಷ ಕೋಟಿ ರುಪಾಯಿಗಳಾಯಿತು. ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿಯೇ ಅತಿ ದೊಡ್ಡ ಎನ್.ಪಿ.ಎ. ಮೊತ್ತವಿದು.

ಈ 10.36 ಲಕ್ಷ ಕೋಟಿ ರುಪಾಯಿಗಳ ಪೈಕಿ ಶೇ.85ರಷ್ಟು ಮೊತ್ತ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಭಾರೀ ಉದ್ದಿಮೆದಾರರು, ಕಾರ್ಪೊರೇಟುಗಳು ಪಡೆದ ಸಾಲವಾಗಿತ್ತು. ಉದಾಹರಣೆಗೆ ಕೇವಲ ಭಾರತೀಯ ಸ್ಟೇಟ್ ಬ್ಯಾಂಕ್ ನ ‘ಅನುತ್ಪಾದಕ ಆಸ್ತಿ’ಯೇ 2.23 ಲಕ್ಷ ಕೋಟಿ ರುಪಾಯಿಗಳಷ್ಟಿತ್ತು.

ಐದಾರು ವರ್ಷಗಳ ಕಾಲ ಆರ್.ಟಿ.ಐ. ಹೋರಾಟದ ನಂತರ ದಿ ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಯು ಸರ್ಕಾರದಿಂದ ಪಡೆದಿರುವ ಮಾಹಿತಿ ಹೊರ ಹಾಕಿರುವ ನಗ್ನಸತ್ಯವನ್ನೇ ಗಮನಿಸೋಣ- 2019ರ ಮಾರ್ಚ್ ತನಕದ ಎನ್.ಪಿ.ಎ. 4.32 ಲಕ್ಷ ಕೋಟಿ ರುಪಾಯಿಗಳ ಭಾರೀ ಮೊತ್ತದ ಸಾಲವನ್ನು ಪಡೆದ ಕಂಪನಿಗಳ ಸಂಖ್ಯೆ 100 (ನೂರು) ಮಾತ್ರ. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ ರಿಲಯನ್ಸ್ ಕಮ್ಯೂನಿಕೇಶನ್ ಲಿಮಿಟೆಡ್, ರಿಲಯನ್ಸ್ ನೇವಲ್ ಅಂಡ್ ಎಂಜಿನಿಯರಿಂಗ್ ಲಿಮಿಟೆಡ್, ರಿಲಯನ್ಸ್ ಕಂಪನಿಯ ಕನಿಷ್ಠ ಎರಡೂ ಉಪ ಕಂಪನಿಗಳು, ಮೇಹುಲ್ ಚೋಕ್ಸಿಯ ಗೀತಾಂಜಲಿ ಜೆಮ್ಸ್, ಜಿಂದಲ್ ಇಂಡಿಯಾ ಥರ್ಮಲ್ ಪವರ್, ಜೆಟ್ ಏರ್ ವೇಸ್, ಜೇಪೀ ಗ್ರೂಪ್, ವಿಡಿಯೋಕಾನ್ ಮುಂತಾದವುಗಳು ಎನ್.ಪಿ.ಎ. ಗೆ ‘ಭಾರೀ ಕೊಡುಗೆ’ ನೀಡಿರುವ ಕಂಪನಿಗಳ ಪಟ್ಟಿಗೆ ಸೇರಿವೆ. ಬ್ಯಾಂಕುಗಳ ಬ್ಯಾಲೆನ್ಸ್ ಶೀಟುಗಳಿಗೆ ಹಿಡಿದಿರುವ ಈ ಗೆದ್ದಲನ್ನು ಕೊಡವಿ ‘ಸ್ವಚ್ಛ’ಗೊಳಿಸಲು ಬ್ಯಾಂಕುಗಳು ಈ ಸಾಲದ ದೊಡ್ಡ ಪ್ರಮಾಣವನ್ನು ಮನ್ನಾ ಮಾಡಿವೆ. ಉಳಿದದ್ದನ್ನು ಬ್ಯಾಲೆನ್ಸ್ ಶೀಟುಗಳಲ್ಲಿ ನಾಮಮಾತ್ರಕ್ಕೆ ಉಳಿಸಲಾಗಿದೆ.

ಇನ್ನು ಭಾರೀ ಕಂಪನಿಗಳಿಗೆ ವಿಧಿಸುವ ಕಾರ್ಪೊರೇಟ್ ತೆರಿಗೆಯ ದರವನ್ನು 2019ರಲ್ಲಿ ಶೇ.30ರಿಂದ ಶೇ.22ಕ್ಕೆ ಮತ್ತು ಹೊಸ ಕಂಪನಿಗಳಿಗೆ ಶೇ.25ರಿಂದ ಶೇ.15ಕ್ಕೆ ಇಳಿಸಲಾಯಿತು. ಹೀಗೆ ಉಳಿಸಿದ ತೆರಿಗೆಯ ಹಣವನ್ನು ಕಾರ್ಪೊರೇಟುಗಳು ಹೊಸ ಬಂಡವಾಳವಾಗಿ ತೊಡಗಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಅಥವಾ ಉದ್ಯೋಗಿಗಳ ವೇತನವನ್ನು ಏರಿಸುವ ಎಲ್ಲ ನಿರೀಕ್ಷೆಗಳೂ ಹುಸಿಯಾಗಿವೆ.

ಇದನ್ನೂ ಓದಿ ಸುತ್ತಾಟ | ಸಾರಮತಿಯ ಹಾದಿಯಲ್ಲಿ ಜೀವನ ಪಾಠ!

ಕಾರ್ಪೊರೇಟ್ ತೆರಿಗೆ ದರ ಕಡಿತದಿಂದ 2020-21ರ ಆರ್ಥಿಕ ವರ್ಷವೊಂದರಲ್ಲೇ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ರುಪಾಯಿಗಳಿಗೂ ಹೆಚ್ಚಿನ (100,241) ನಷ್ಟವಾಯಿತು ಎಂದು ರಾಜ್ಯಸಭೆಯಲ್ಲಿ ಮೋದಿ ಸರ್ಕಾರ ಲಿಖಿತ ಉತ್ತರ ನೀಡಿ ತಿಳಿಸಿದೆ. 2019-20ರಲ್ಲಿ ಶೇ.30ರಿಂದ ಶೇ.22ಕ್ಕೆ ತಗ್ಗಿಸಿದ ಕಾರ್ಪೊರೇಟ್ ತೆರಿಗೆಯ ದರದ ಕಾರಣ ಸರ್ಕಾರದ ಬೊಕ್ಕಸಕ್ಕೆ 1,28,170 ಕೋಟಿ ರುಪಾಯಿಗಳ ನಷ್ಟವಾಗಿದೆ.

ಹೀಗೆ ಲಕ್ಷ ಲಕ್ಷಾಂತರ ಕೋಟಿ ರುಪಾಯಿಗಳ ಭಾರೀ ಮೊತ್ತಗಳು ಕೆಲವೇ ಸಿರಿವಂತರಿಗಾಗಿ ಲೂಟಿಯಾಗುತ್ತಿವೆ. ಆದರೆ ಬಡವರಿಗೆ ನೀಡುವ ಹಿಡಿ ಅನ್ನ, ಕೆಲ ಸಾವಿರ ರುಪಾಯಿಗಳ ಮೇಲೆ ಮಧ್ಯಮವರ್ಗಿಗಳು, ಕಾರ್ಪೊರೇಟುಗಳು, ಆಳುವವರು, ಬಂಡವಾಳಶಾಹಿಗಳು ಕೆಂಗಣ್ಣು ಬಿಡುತ್ತಲೇ ಬಂದಿದ್ದಾರೆ. ಇದೀಗ ನ್ಯಾಯಾಲಯಗಳೂ ಈ ಸಾಲಿಗೆ ಸೇರಿರುವುದು ಮಹಾ ವಿಡಂಬನೆಯ ಮತ್ತು ಮಹಾ ದುರಂತದ ಸಂಗತಿ.

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X