ದಾವಣಗೆರೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ತಾಜ್ ಪ್ಯಾಲೇಸ್ ಹಿಂಬಾಗ ಬಿಸ್ಮಿಲ್ಲಾ ಲೇಔಟ್ ಸಿ ಬ್ಲಾಕ್ ನಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ದಾವಣಗೆರೆ ಹೊರವಲಯದ ಬಿಸ್ಮಿಲ್ಲಾ ನಗರದ ನಿವಾಸಿ ಮುಸ್ತಾಕ್ ಖಾನ್ ರ ಮೂರು ವರ್ಷದ ಹೆಣ್ಣು ಮಗು ಬೀದಿ ನಾಯಿಯ ದಾಳಿಗೆ ಒಳಗಾಗಿರುವ ಬಾಲಕಿಯಾಗಿದ್ದು, ಮಗುವಿನ ಮುಖ ಮತ್ತು ಕೈಯಿಗೆ ಗಂಭೀರ ಗಾಯಗಳಾಗಿದೆ. ಮೂರು ದಿನದಿಂದ ಸರ್ಕಾರಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. “ಈ ಪ್ರದೇಶದಲ್ಲಿ ನಾಯಿಗಳ ಹಾವಳಿ ಮಿತಿಮೀರಿದ್ದು, 15-20 ನಾಯಿಗಳು ಗುಂಪು ಗುಂಪಾಗಿ ಸುತ್ತಾಡುತ್ತಿರುತ್ತವೆ. ಹಾಗೂ ಮಕ್ಕಳು, ಒಂಟಿ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ನಗರಸಭೆ ಈ ಬಗ್ಗೆ ಗಮನಹರಿಸಿಲ್ಲ” ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದರು.
‘ಇದೇ ಪ್ರದೇಶದಲ್ಲಿ ಕೇವಲ ಮೂರು ತಿಂಗಳ ಹಿಂದೆ ನಾಲ್ಕು ವರ್ಷದ ಹೆಣ್ಣು ಮಗು ನಾಯಿ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿತ್ತು. ಅಲ್ಲದೆ ಬಹಳಷ್ಟು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಪ್ರಕರಣಗಳು ಇವೆ’ ಎನ್ನುತ್ತಾರೆ ಸಾರ್ವಜನಿಕರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಹೊಸ ಶೌಚಾಲಯ ನಿರ್ಮಾಣ, ವ್ಯಾಪಾರಿಗಳು ಮತ್ತು ನಾಗರೀಕರ ಆಕ್ಷೇಪ.
ಈ ಬಗ್ಗೆ ಮಾತನಾಡಿದ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರೊಬ್ಬರು “ಬಿಸ್ಮಿಲ್ಲಾ ನಗರದಲ್ಲಿ ಆಗಾಗ್ಗೆ ನಾಯಿ ಕಡಿತದ ಪ್ರಕರಣಗಳಾಗುತ್ತಿವೆ. ಅವುಗಳನ್ನು ನಿಯಂತ್ರಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಪ್ರಾಣಿ ದಯಾ ಸಂಘದವರ ದೂರೊಂದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಅವುಗಳ ಹಾವಳಿ ನಿಯಂತ್ರಿಸಲು ಅಡ್ಡಿಯಾಗಿದೆ. ಆದರೂ ಮಕ್ಕಳ, ಮಹಿಳೆಯರ, ವೃದ್ಧರ ಸುರಕ್ಷತೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿ ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾಗುತ್ತೇವೆ” ಎಂದು ತಿಳಿಸಿದರು.
