ವರದಕ್ಷಿಣೆಯಾಗಿ 10 ಲಕ್ಷ ರೂ. ಹಾಗೂ ಎಸ್ಯುವಿ ಕಾರು ಕೊಟ್ಟಿಲ್ಲವೆಂದು ಅತ್ತೆ-ಮಾವ ಸೊಸೆಗೆ ಎಚ್ಐವಿ ಸೋಂಕಿತ ಸೂಜಿ ಚುಚ್ಚಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.
30 ವರ್ಷದ ಮಹಿಳೆಗೆ ಸಂಬಂಧಿಸಿದ ಈ ಘಟನೆಯ ಬಗ್ಗೆ ದೂರು ದಾಖಲಿಸುವಂತೆ ಸಹರಾನ್ಪುರ ನ್ಯಾಯಾಲಯವು ಉತ್ತರ ಪ್ರದೇಶದ ಪೊಲೀಸರಿಗೆ ಆದೇಶಿಸಿದೆ. ಮಹಿಳೆ ಸಹರಾನ್ಪುರ ನಿವಾಸಿ, ಆಕೆಯ ಪತಿ, ಅತ್ತೆ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಐಪಿಸಿ 307, 498ಎ, 323, 328, 406 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಪ್ರಕಾರ, ಈ ಘಟನೆ ಮೇ 2024 ರಲ್ಲಿ ಹರಿದ್ವಾರದಲ್ಲಿರುವ ಮಹಿಳೆಯ ಅತ್ತೆಯ ಮನೆಯಲ್ಲಿ ನಡೆದಿತ್ತು.
ಸಂತ್ರಸ್ತೆಯ ತಂದೆ ಮಾತನಾಡಿ, 2023ರಲ್ಲಿ ತಮ್ಮ ಮಗಳ ಮದುವೆ ಮಾಡಿಕೊಟ್ಟಿದ್ದೆವು. ಮದುವೆಗೆ 45 ಲಕ್ಷ ರೂ. ಖರ್ಚು ಮಾಡಿದ್ದೆವು. ವರನ ಕುಟುಂಬಕ್ಕೆ 15 ಲಕ್ಷ ರೂ. ನಗದು ಹಾಗೂ ಸಬ್-ಕಾಂಪ್ಯಾಕ್ಟ್ ಎಸ್ಯುವಿ ನೀಡಿದ್ದೇವೆ. ಆದರೆ ಅವರು ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ನಗದು ಮತ್ತು ದೊಡ್ಡ ಎಸ್ಯುವಿ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
ಮದುವೆಯಾದ ತಕ್ಷಣ ಆಕೆಗೆ ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿ ಮಗಳನ್ನು ಅವಮಾನಿಸಿದರು. ಮಗನಿಗೆ ಬೇರೆ ಮದುವೆ ಮಾಡುವುದಾಗಿ ಬದರಿಕೆ ಹಾಕಿದರು. ದಿನದಿಂದ ದಿನಕ್ಕೆ ಆಕೆಗೆ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡುವುದು ಹೆಚ್ಚಾಯಿತು.
2024ರ ಮೇನಲ್ಲಿ ಆಕೆಯ ಅತ್ತೆ ಮಾವ ಬಲವಂತವಾಗಿ ಆಕೆಗೆ ಎಚ್ಐವಿ ಸೋಂಕಿತ ಸೂಚಿಯನ್ನು ಚುಚ್ಚಿದ್ದರು. ಇದರಿಂದಾಗಿ ಆಕೆಯ ಆರೋಗ್ಯ ಶೀಘ್ರವಾಗಿ ಹದಗೆಟ್ಟಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಆಕೆ ಎಚ್ಐವಿ ಪಾಸಿಟಿವ್ ಆಗಿರುವುದು ತಿಳಿದುಬಂದಿದೆ ಎಂದು ಕುಟುಂಬದವರು ದೂರಿದ್ದಾರೆ.
