ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಅವರು 3 ತಿಂಗಳು ನಿಷೇಧಕ್ಕೆ ಒಳಗಾಗಿದ್ದಾರೆ.
2024ರ ಮಾರ್ಚ್ನಲ್ಲಿ ನಡೆಸಲಾದ ಡೋಪಿಂಗ್ ಟೆಸ್ಟ್ ವೇಳೆ ಸಿನ್ನರ್ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿತ್ತು. ಈ ಪರೀಕ್ಷೆ ವೇಳೆ ಯಾನಿಕ್ ಸಿನ್ನರ್ ಅವರ ದೇಹದಲ್ಲಿ ‘ವಾಡಾ’ (ಉದ್ದೀಪನ ಮದ್ದು ಸೇವನೆ ತಡೆ ಏಜೆನ್ಸಿ) ನಿಷೇಧಿತ ವಸ್ತು ‘ಕ್ಲೋಸ್ಟೆಬೋಲ್’ ಕಂಡುಬಂದಿದೆ.
ಅನಾಬಾಲಿಕ್ ಸ್ಟಿರಾಯ್ಡ್ ತೆಗೆದುಕೊಂಡಾಗ ಕ್ಲೋಸ್ಟೆಬೋಲ್ ದೇಹದೊಳಗೆ ಸೇರಿಕೊಂಡಿರುವುದಾಗಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದಾಗ್ಯೂ ಯಾನಿಕ್ ಸಿನ್ನರ್ ಅವರಿಗೆ 3.2 ಲಕ್ಷ ಡಾಲರ್ ಅಂದರೆ ಸುಮಾರು 2.8 ಕೋಟಿ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ, ಸ್ವಲ್ಪ ಸಮಯದವರೆಗೆ ಅಮಾನತುಗೊಳಿಸಲಾಗಿತ್ತು.
ಈ ಬಗ್ಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು (ಸಿಎಎಸ್) ಸಂಪರ್ಕಿಸಿದ ಸಿನ್ನರ್ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಡಬೇಕೆಂದು ಮನವಿ ಮಾಡಿದ್ದರು. ಅದರಂತೆ ಇದೀಗ ಪ್ರಕರಣದಿಂದ ಖುಲಾಸೆಗೊಂಡಿರುವ ಯಾನಿಕ್ ಸಿನ್ನರ್ ‘ವಾಡಾ’ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೇವಲ 3 ತಿಂಗಳುಗಳ ಕಾಲ ಮಾತ್ರ ಟೆನಿಸ್ ಅಂಗಳದಿಂದ ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಗರ್ಕರ್ – ಗಂಭೀರ್ ನಡುವೆ ಭಿನ್ನಾಭಿಪ್ರಾಯ; ರಾಹುಲ್ ಪರ ನಿಂತ ಟೀಂ ಇಂಡಿಯಾ ಕೋಚ್
ಉದ್ದೀಪನ ಮದ್ದು ಸೇವನೆ ಪ್ರಕರಣದ ಬಗ್ಗೆ ಮಾತನಾಡಿದ ಯಾನಿಕ್ ಸಿನ್ನರ್, ಈ ಪ್ರಕರಣವು ಸುಮಾರು ಒಂದು ವರ್ಷದಿಂದ ಬಾಕಿ ಇತ್ತು. ಅಲ್ಲದೆ ಇದರ ಪ್ರಕ್ರಿಯೆ ಕೂಡ ವಿಳಂಬವಾಗಿತ್ತು. ಆದರೆ ನಾನು ಡೋಪಿಂಗ್ ನಿಯಮಗಳನ್ನು ಗೌರವಿಸುತ್ತೇನೆ. ಇದು ಬೇಕೆಂತಲೇ ಮಾಡಿದ ತಪ್ಪಲ್ಲ. ಅಜಾಗರೂಕತೆಯಿಂದ ನಡೆದು ಹೋಗಿದೆ. ಹೀಗಾಗಿ ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು 3 ತಿಂಗಳ ನಿಷೇಧದ ವಾಡಾ ಪ್ರಸ್ತಾವನೆಯನ್ನು ನಾನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ.
ಯಾನಿಕ್ ಸಿನ್ನರ್ ಅವರ ದೇಹದಲ್ಲಿ ನಿಷೇಧಿತ ಕ್ಲೋಸ್ಟೆಬೋಲ್ ಅಂಶಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ, ವೈದ್ಯರು ಬಳಸಿದ ಸ್ಪ್ರೇ ಎಂದು ತಿಳಿದು ಬಂದಿದೆ. ಕೈ ಬೆರಳಿಗೆ ಗಾಯವಾಗಿದ್ದಾಗ ವೈದ್ಯರು ನೋವಿನ ಸ್ಪ್ರೇ ಬಳಸಿದ್ದರು. ಈ ಸ್ಪ್ರೇನಲ್ಲಿ ಕ್ಲೋಸ್ಟೆಬೋಲ್ ಅಂಶಗಳಿದ್ದವು. ಈ ಜಾಗರೂಕತೆಯಿಂದಾಗಿ ಇದೀಗ ಯಾನಿಕ್ ಸಿನ್ನರ್ ಮೂರು ತಿಂಗಳುಗಳ ನಿಷೇಧಕ್ಕೆ ಒಳಗಾಗಿದ್ದಾರೆ.