ಬಂಜಾರ ಸಮುದಾಯದ ಶ್ರೇಯಸ್ಸಿಗಾಗಿ ಅಸ್ಪೃಶ್ಯತೆ, ಜಾತಿ ಪದ್ಧತಿ ವಿರುದ್ಧ ಸೇವಾಲಾಲ್ ಹೋರಾಟ ಮಾಡಿದ್ದರು. ಬಂಜಾರ ಸಮುದಾಯಕ್ಕೆ ಶಿಕ್ಷಣದ ಮಹತ್ವವನ್ನು ಅರ್ಥಮಾಡಿಸುವಲ್ಲಿ ಅವರ ಪಾತ್ರ ಅಪಾರ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಸ್ಮರಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಸೇವಾಲಾಲ್ ಬಂಜಾರ(ಲಂಬಾಣಿ )ಸಂಘದ ಸಹಕಾರದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಫೆಬ್ರವರಿ 16ರಂದು ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದರು.
“ಲಂಬಾಣಿ ಸಮಾಜಕ್ಕೆ ಸೇವಾಲಾಲ್ ನೀಡಿದ ಕೊಡುಗೆ ಅಪಾರ. ಸೇವಾಲಾಲ್ ಉತ್ತಮ ಸಮಾಜದ ನಿರ್ಮಾಣಕ್ಕೆ, ಲಂಬಾಣಿ ಸಮಾಜಕ್ಕೆ ಸವಲತ್ತುಗಳನ್ನು ಒದಗಿಸುವಲ್ಲಿ ಹಾಗೂ ಸಮುದಾಯವನ್ನು ಗುರುತಿಸುವಲ್ಲಿ ಅವರ ಕೊಡುಗೆ ಅಪಾರವಾದದ್ದು. ಪ್ರತಿಯೊಬ್ಬರೂ ಸಂಘಟಿತರಾದರೆ ಮಾತ್ರ ಸಮುದಾಯ ಇನ್ನಷ್ಟು ಬಲಿಷ್ಠಗೊಳ್ಳುತ್ತದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ಪೆರ್ಮುದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್ ಮಾತನಾಡಿ, “ಬಂಜಾರ ಸಮುದಾಯಕ್ಕೆ ಸೇವಾಲಾಲ್ ಮಹತ್ತರ ಕೊಡುಗೆ ನೀಡಿದ್ದಾರೆ. ಸಮಾಜ ಸುಧಾರಕ ಶಕ್ತಿಪುರುಷ ಸಂತ ಸೇವಾಲಾಲ್ ಬಡವರ ಸೇವೆಗಾಗಿ ಶ್ರಮಿಸಿ, ಮೂಢನಂಬಿಕೆ ಕೆಟ್ಟ ವಿಚಾರಗಳ ವಿರುದ್ಧ ಧ್ವನಿ ಎತ್ತಿದವರು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಪಿಸಿಆರ್ ಕರ್ನಾಟಕ ಚಾಪ್ಟರ್; ರಾಜ್ಯಾಧ್ಯಕ್ಷರಾಗಿ ಖ್ಯಾತ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಆಯ್ಕೆ
“ಈ ನಾಡಿನಲ್ಲಿ ತನ್ನದೇ ಆದಂತಹ ಒಂದು ಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಒಂದು. ಭವ್ಯ ಸಂಸ್ಕೃತಿ ಹೊಂದಿರುವ ಬಂಜಾರ ಸಮುದಾಯದವರು ಇತ್ತೀಚಿಗೆ ಕೇವಲ ವ್ಯಾಪಾರದ ಕಡೆಗೆ ಗಮನಹರಿಸುತ್ತಿದ್ದಾರೆ. ವ್ಯಾಪಾರದ ಜತೆಗೆ ಸಂಸ್ಕೃತಿಯನ್ನು ಉಳಿಸಲು ಹೆಚ್ಚಿನ ಗಮನ ಕೊಡುವುದು ಅಗತ್ಯ. ಸಂಘಟನಾತ್ಮಕವಾಗಿ ಸಮುದಾಯ ಇನ್ನಷ್ಟು ಬೆಳವಣಿಗೆಯಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರಾವಳಿ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ರಾಜಪ್ಪ, ಗೌರವಾಧ್ಯಕ್ಷ ಜಯಪ್ಪ ಲಮಾಣಿ ಇದ್ದರು.