ತಿಂಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಿಂದ ದೈನಂದಿನ ಜೀವನ ನಡೆಸಲು ಸಮಸ್ಯೆ ಉಂಟಾಗುತ್ತಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿಗಾಗಿ ಆಗ್ರಹಿಸಿ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರಪ್ಪ ಬಾಗಲಕೋಟ ನೇತೃತ್ವದಲ್ಲಿ ಸ್ಥಳೀಯರು ನಗರದ ಜೋರಾಪುರ ಪೇಟ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
“ನಗರಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ನೀರಿಗಾಗಿ ಯಾವುದೇ ಪರ್ಯಾಯ ವ್ಯವಸ್ತೆ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ನೀರಿನ ಸರಬರಾಜನ್ನೂ ಮಾಡುತ್ತಿಲ್. ತಿಂಗಳಿಗೊಮ್ಮೆ ನೀರು ಪೂರೈಕೆಯಾದರೆ, ನಾವು ಹೇಗೆ ಜೀವನ ನಡೆಸುವುದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಸಿಸ್ಕೋ ಕಂಪನಿಯಿಂದ ಪಡಿತರ, ನೈರ್ಮಲ್ಯ ಕಿಟ್ ವಿತರಣೆ

ಪ್ರತಿಭಟನೆ ವೇಳೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವ ವಿಚಾರಕ್ಕೆ ಗಾಂಧಿಚೌಕ್ ಪಿಎಸ್ಐ ರಬಕವಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರಪ್ಪ ಬಾಗಲಕೋಟ ನಡುವೆ ಬಿರುಸಿನ ಮಾತು ಕಥೆ ನಡೆಯಿತು. ಇದರ ಮಧ್ಯೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರ ಮಧ್ಯದಲ್ಲಿ ಬೈಕ್ ಸವಾರ ನುಸುಳಿ ಹೋಗಲು ಯತ್ನಿಸಿದ್ದಾನೆ. ಆದರೆ, ಇಬ್ಬರು ಮಹಿಳೆಯರು ಬೈಕ್ ಹೋಗದಂತೆ ಅಡ್ಡಗಟ್ಟಿ ಬೈಕ್ ಹಿಡಿದುಕೊಂಡಿದ್ದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಬೈಕ್ ಹೋಗಲು ಅನುವು ಮಾಡಿಕೊಟ್ಟರು.