ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ನೋಡಿದರೆ ಅವರು ಎಡಪಂಥೀಯ ವಿಚಾರಧಾರೆಯ ಕೈಗೊಂಬೆಯಾಗಿದ್ದಾರೆ ಎಂಬುದು ತಿಳಿಯುತ್ತೆ ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.
ಶಿರಸಿ ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಿರುವ ಪಠ್ಯದಲ್ಲಿ ಯಾವ ತಪ್ಪು ಇಲ್ಲ. ಅದನ್ನು ಬರೆದ ಸಾಹಿತಿಗಳ ಮೇಲೆ ಕಾಂಗ್ರೆಸ್‌ಗೆ ಸಮಾಧಾನ ಇಲ್ಲದ ಕಾರಣ ಪರಿಷ್ಕರಣೆ ಆಗುತ್ತಿದೆ. ಆ ಮೂಲಕ ಮತ್ತೊಮ್ಮೆ ಗುಲಾಮಿತನದ ಮನಸ್ಥಿತಿ ತರಲು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಮುಂದಾಗಿದ್ದಾರೆ” ಎಂದು ಹೇಳಿದರು.
“ಈ ನೆಲದ ನೈಜ ಪರಿಸ್ಥಿತಿ ತಿಳಿಸುವ ವಿಷಯಗಳು ಪ್ರಸ್ತುತ ಹಂಚಿಕೆಯಾದ ಪುಸ್ತಕದಲ್ಲಿದೆ. ಈಗ ಅದನ್ನು ತೆಗೆಯುವ ದ್ವೇಷದ ರಾಜಕೀಯ ಮುನ್ನೆಲೆಗೆ ತರಲಾಗುತ್ತಿದೆ. ಸಿದ್ದರಾಮಯ್ಯ ಅವರು ಎಡಪಂಥೀಯ ವಿಚಾರಧಾರೆಯ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಅದರ ಭಾಗವಾಗಿಯೇ ಪಠ್ಯಪುಸ್ತಕ ಪರಿಷ್ಕರಣೆ ತರಾತುರಿ ಅವರಲ್ಲಿ ಕಾಣುತ್ತಿದೆ” ಎಂದು ಹರಿಹಾಯ್ದರು.
“ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಕಾಂಗ್ರೆಸ್ ಸರ್ಕಾರದ ನಡೆ ತಿಂಗಳೊಳಗೆ ಜನರ ಅರಿವಿಗೆ ಬರುತ್ತಿದೆ. ಆಡಳಿತ ಗೊಂದಲದ ಗೂಡಾಗಿದೆ. ಸಚಿವರು ತಮ್ಮ ಖಾತೆಗಳ ಜವಾಬ್ದಾರಿ ಅರಿಯುವ ಮುನ್ನ ಗೊಂದಲ ಸೃಷ್ಟಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಸರಳವಾಗಿ ಅರಿವಿಗೆ ಬರುವ ಇಲಾಖೆಯಲ್ಲ. ಅನಗತ್ಯವಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಡಿ” ಎಂದು ಒತ್ತಾಯಿಸಿದರು.
“ಟಿಪ್ಪುವನ್ನು ಒಪ್ಪಿಕೊಂಡ ಇವರಿಗೆ ಭಾರತದ ಇತಿಹಾಸ ಹೇಗೆ ಶ್ರೇಷ್ಠವಾಗಿ ಕಾಣಲು ಸಾಧ್ಯ? ಪಾರದರ್ಶಕ ಚರ್ಚೆ, ಸಾಧಕ ಬಾಧಕ ಅರಿತ ನಂತರವೇ ಪರಿಷ್ಕರಣೆ ಆಗಬೇಕು” ಎಂದು ಆಗ್ರಹಿಸಿದರು.