"ದೆಹಲಿ ದುರಂತಕ್ಕೆ ಕಾರಣಗಳನ್ನು ಹೊರಗೆ ಹುಡುಕದೆ, ಒಳಗಿನ ಹುಳುಕುಗಳನ್ನು ರೈಲ್ವೆ ಇಲಾಖೆ ಸರಿಪಡಿಸಿಕೊಳ್ಳಲಿ"
ದೆಹಲಿ ರೈಲು ನಿಲ್ದಾಣದಲ್ಲಿ ಫೆಬ್ರವರಿ 15ರ ರಾತ್ರಿ ಘಟಿಸಿದ ಕಾಲ್ತುಳಿತದಲ್ಲಿ 18 ಜೀವಗಳು ಬಲಿಯಾದವು. ಈ ಘಟನೆಗೆ ಯಾರು ಹೊಣೆ? ಏನು ಕಾರಣ? ಎಂದು ತಿಳಿಯಲು ಸೂಕ್ತ ತನಿಖೆ ನಡೆಸುವುದಾಗಿ ಹೇಳುವ ರೈಲ್ವೆ ಇಲಾಖೆ ಅಧಿಕಾರಿಗಳು ತರಹೇವಾರಿ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ. ಒಬ್ಬರ ಹೇಳಿಕೆಗಿಂತ ಇನ್ನೊಬ್ಬರ ಹೇಳಿಕೆ ಭಿನ್ನ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯರಂತೂ ಲಜ್ಜೆಗೇಡಿತನದ ಪರಮಾವಧಿಯನ್ನು ಮೀರಿ, “ದೆಹಲಿ ರೈಲು ನಿಲ್ದಾಣದ ಸ್ಥಿತಿ ಹೀಗಿದೆ” ಎಂದು ವಿರಳ ಜನಸಂಖ್ಯೆ ಇರುವ ವಿಡಿಯೊವೊಂದನ್ನು ಟ್ವೀಟ್ ಮಾಡಿ ವಿಕೃತಿ ಮೆರೆದಿದ್ದಾರೆ. ಜನರೇ ಇರಲಿಲ್ಲ ಎಂದು ತೋರಿಸುವ ಈ ಮನಸ್ಥಿತಿ ಯಾವುದು? ಘಟನೆಯ ನೈಜ ಕಾರಣವನ್ನು, ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಡುವ ಕಸರತ್ತಿನಲ್ಲಿ ಸರ್ಕಾರ ತೊಡಗಿರುವಂತೆ ಕಾಣುತ್ತಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭಾರೀ ಪ್ರಚಾರ ದೊರೆತಿರುವುದರಿಂದ ಜನರು ಕೂಡ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದ್ದಾರೆ. ಗಂಗೆಯಲ್ಲಿ ಮಿಂದೆದ್ದು ಪಾಪಮುಕ್ತರಾಗುವ ನಂಬಿಕೆ ಅವರದ್ದು. ಜನರ ಧಾರ್ಮಿಕ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಸ್ಥರು ಈ ಜನರಿಗಾಗಿ ಏನು ಮಾಡುತ್ತಿದ್ದಾರೆಂಬುದು ಸದ್ಯದ ಪ್ರಶ್ನೆ.
ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನತ್ತ ತೆರಳಲು ಸಾಗರೋಪಾದಿಯಲ್ಲಿ ಭಕ್ತಾದಿಗಳು ನುಗ್ಗಿದ್ದರು. ಗಂಟೆಗೆ 1,500 ಜನರಲ್ ಟಿಕೆಟ್‌ಗಳು ಮಾರಾಟವಾಗುತ್ತಿದ್ದಾಗಲೇ ಎಚ್ಚರಿಕೆಯ ಘಂಟೆ ಭಾರಿಸತೊಡಗಿತ್ತು. ಪ್ಲಾಟ್‌ಫಾರ್ಮ್ 14ರಲ್ಲಿ ಜನ ಜಮಾಯಿಸತೊಡಗಿದರು. ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಪ್ರವೇಶಿಸಲು ಎಲ್ಲ ದ್ವಾರಗಳನ್ನು ತೆರೆಯಲಾಗಿತ್ತು. ಭದ್ರತಾ ಸಿಬ್ಬಂದಿ ಮೂಕಪ್ರೇಕ್ಷಕರಾಗಿದ್ದರು.
ಶನಿವಾರ ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಸುಮಾರು 2,600 ಜನರು ಪ್ರಯಾಗ್‌ರಾಜ್‌ಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಪ್ಲಾಟ್‌ಫಾರ್ಮ್ 16ಕ್ಕೆ ಪ್ರಯಾಗ್‌ರಾಜ್ ಸ್ಪೆಷಲ್ ರೈಲು ಬರುವುದಾಗಿ ಘೋಷಣೆಯಾಯಿತು. 14ರಲ್ಲಿ ಕಾಯುತ್ತಿದ್ದ ಜನರು, ಗೊಂದಲಕ್ಕೊಳಗಾಗಿ 16ರತ್ತ ನುಗ್ಗಿದರು. ಆಗ ನೂಕುನುಗ್ಗಲು ಉಂಟಾಗಿ ಸಾವುಗಳು ಸಂಭವಿಸಿವೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಹೆಣ್ಣಿನ ಮೇಲೆ ಅಮಾನುಷ ಲೈಂಗಿಕ ಕ್ರೌರ್ಯಕ್ಕೆ ವಿವಾಹವು ಪರವಾನಗಿಯೇ?
ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಮತ್ತು ಪ್ರಯಾಗ್‌ರಾಜ್ ಸ್ಪೆಷಲ್ ಎಂಬ ಎರಡು ರೈಲುಗಳಿದ್ದವು. ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಪ್ಲಾಟ್‌ಫಾರ್ಮ್ 14ಕ್ಕೆ ಬರಲಿತ್ತು. ಪ್ರಯಾಗ್‌ರಾಜ್ ಸ್ಪೆಷಲ್ 16ಕ್ಕೆ ಬರುತ್ತಿರುವುದಾಗಿ ಸಿಬ್ಬಂದಿ ಘೋಷಣೆ ಮಾಡಿದ್ದರು. 14ಕ್ಕೆ ಬರುವ ರೈಲು 16ಕ್ಕೆ ಬರುತ್ತಿದೆ ಎಂದು ತಿಳಿದ ಪ್ರಯಾಣಿಕರು ಒಮ್ಮೆಲೆ ನುಗ್ಗಿದಾಗ ಭಾರೀ ಪ್ರಮಾಣದಲ್ಲಿ ನೂಕಾಟ ಶುರುವಾಯಿತು ಎನ್ನುತ್ತಿವೆ ವರದಿಗಳು.
ವರದಿಗಳು ಹೇಳುವಂತೆ ಪ್ರಯಾಗ್‌ರಾಜ್‌ಗೆ ನಾಲ್ಕು ರೈಲುಗಳು ತೆರಳಿದ್ದವು. ಆದರೆ ಅದರಲ್ಲಿ ಮೂರು ರೈಲುಗಳು ತಡವಾಗಿ ಬಂದಿವೆ. ಹೀಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಜನಸಾಂದ್ರತೆ ಬಿಗಡಾಯಿಸಿತ್ತು. ಇಲ್ಲಿ ರೈಲ್ವೆ ಇಲಾಖೆಯ ವಿಳಂಬ ನೀತಿ ಮತ್ತು ಸ್ಪಷ್ಟವಾದ ಘೋಷಣೆ ಇಲ್ಲದಿರುವುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಹೀಗಾಗಿ ಈ ಸಾವುಗಳಿಗೆ ರೈಲ್ವೆ ಇಲಾಖೆಯೇ ಹೊಣೆ ಹೊರಬೇಕು. ಪ್ಲಾಟ್‌ಫಾರ್ಮ್ ಸಂಬಂಧ ಘೋಷಣೆ ಮಾಡಿಲ್ಲ ಎಂದು ಹೇಳುವುದು ಆತ್ಮಘಾತುಕತನವಾಗುತ್ತದೆ. ಅಧಿಕಾರಿಗಳು ಒಂದು ರೀತಿ ಹೇಳಿದರೆ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳೇ ಬೇರೊಂದು ರೀತಿ ಇವೆ.
ಈ ವರ್ಷ ನಡೆಯುತ್ತಿರುವ ಎರಡನೇ ಕಾಲ್ತುಳಿದ ಪ್ರಕರಣವಿದು. ಮೌನಿ ಅಮಾವಾಸ್ಯೆಯಂದು ಭಾರೀ ಸಂಖ್ಯೆಯ ಭಕ್ತಾದಿಗಳು ಪ್ರಯಾಗ್‌ರಾಜ್‌ಗೆ ನುಗ್ಗಿದ್ದರಿಂದ 30 ಜನರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಅದೇ ಕುಂಭಮೇಳಕ್ಕಾಗಿ ಕಾಯುತ್ತಿದ್ದವರಲ್ಲಿ 18 ಜನರು ಕಾಲ್ತುಳಿತದಿಂದಾಗಿ ದೆಹಲಿ ರೈಲು ನಿಲ್ದಾಣದಲ್ಲಿ ಜೀವ ಕಳೆದುಕೊಂಡಿದ್ದಾರೆ. ಈ ಎರಡು ದುರಂತಗಳಿಗೂ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ.
ರೈಲ್ವೆ ಇಲಾಖೆಯು ಒಂದಲ್ಲ ಒಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಲೇ ಇದೆ. ಸಿಗ್ನಲಿಂಗ್ ಸಮಸ್ಯೆಯಿಂದಾಗಿ ರೈಲುಗಳು ಮಾರ್ಗ ಬದಲಿಸುವುದು ಅಥವಾ ಈಗಾಗಲೇ ಹಳಿಯಲ್ಲಿ ನಿಂತಿರುವ ರೈಲಿಗೆ ಬಂದು ಗುದ್ದುವುದು, ಹಳಿ ತಪ್ಪುವುದು, ಸಾವು ನೋವುಗಳಿಗೆ ಕಾರಣವಾಗುವುದು- ಹೀಗೆ ನಡೆಯುವ ಪ್ರಮಾದಗಳಿಗೆ ಕೊನೆಯೇ ಇಲ್ಲ. ಒಡಿಶಾ ರಾಜ್ಯದಲ್ಲಿ 2023ರಲ್ಲಿ ನಡೆದ ತ್ರಿವಳಿ ರೈಲುಗಳ ಅಪಘಾತದಲ್ಲಿ 294 ಜನರು ಅಸುನೀಗಿ, 1200 ಜನ ಗಾಯಗೊಂಡಿದ್ದು, ಬಹುಶಃ ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ರೈಲು ದುರಂತವೇ ಸರಿ. ತದನಂತರವೂ ಹಲವು ರೈಲು ಅಪಘಾತಗಳು ವರದಿಯಾಗಿವೆ. ಇದರಲ್ಲಿ ಬಹಳ ಭಿನ್ನವಾದ ಘಟನೆ ಶನಿವಾರ ದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ. ಇದು ರೈಲು ಇಲಾಖೆಯ ಮತ್ತೊಂದು ಮುಖವನ್ನು ಅನಾವರಣ ಮಾಡಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
ವಂದೇ ಭಾರತ್ ರೈಲುಗಳನ್ನು ಆರಂಭಿಸಿದ ಬಳಿಕ ಅವುಗಳಿಗೆ ಸಿಕ್ಕಷ್ಟು ಪ್ರಾಶಸ್ತ್ಯ ಜನಸಾಮಾನ್ಯರು ತಿರುಗಾಡುವ ಸಾಮಾನ್ಯ ರೈಲುಗಳಿಗೆ ಸಿಗಲಿಲ್ಲ ಎಂಬುದು ಇತ್ತೀಚಿನ ವರ್ಷಗಳಲ್ಲಿ ಕೇಳಿಬಂದ ಗಂಭೀರ ಆರೋಪ. ಇದರ ಜೊತೆಗೆ ಜನರಲ್ ಬೋಗಿಗಳ ಪ್ರಮಾಣವನ್ನು ಇಳಿಸಿ, ಎಸಿ ಮತ್ತು ಸ್ಲೀಪರ್ ಕೋಚ್‌ಗಳನ್ನು ಸರ್ಕಾರ ಹೆಚ್ಚಿಸುತ್ತಾ ಹೋಯಿತು. ಹಿಂದೆ ಎರಡು, ಮುಂದೆ ಎರಡು ಜನರಲ್ ಬೋಗಿಗಳು ಇದ್ದರೆ ಹೆಚ್ಚು. ಅವುಗಳಿಗೆ ಹೋಗಿ ನೋಡಿದಾಗ ಕಾಣುವ ಜನದಟ್ಟಣೆ ಗಾಬರಿ ಹುಟ್ಟಿಸುತ್ತದೆ. ಕೂತುಕೊಳ್ಳಲು, ನಿಂತುಕೊಳ್ಳಲು, ಉಸಿರಾಡಲು ಸಾಧ್ಯವಿಲ್ಲದ ಮಟ್ಟಿಗೆ ಪ್ರಯಾಣಿಕರು ಜಮಾಯಿಸಿರುತ್ತಾರೆ. ಇದು ಬಡವರ ಬದುಕಿನ ನಿಜ ಚಿತ್ರಣವನ್ನು ತೆರೆದಿಡುತ್ತದೆ.
ಕಡಿಮೆ ದುಡ್ಡಲ್ಲಿ ಪ್ರಯಾಣ ಮಾಡಬಹುದೆಂದು ರೈಲನ್ನು ಆಶ್ರಯಿಸುತ್ತಿದ್ದ ಬಡವರು ಈಗ, ಜನರಲ್ ಡಬ್ಬಿಯಲ್ಲಿ ತುರುಕಲ್ಪಟ್ಟ ಸರಕಾಗಿ ಪ್ರಯಾಣ ಮಾಡಬೇಕಾಗಿದೆ. ಇದು ಮೋದಿ ಕಾಲದ ಎರಡು ವಿಧದ ಭಾರತ. ಕುಂಭಮೇಳದಂತಹ ವಿಶೇಷ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳು, ಜನಸಾಮಾನ್ಯರು ಹರಿದುಬರುತ್ತಾರೆಂದು ಗೊತ್ತಿದ್ದರೂ ಸಮಯ ಪಾಲನೆ ಮಾಡದಿರುವುದು, ಜೊತೆಗೆ ಅನಿಯಂತ್ರಿತವಾಗಿ ಟಿಕೆಟ್ ವಿತರಿಸುವುದು ರೈಲ್ವೆ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ದೆಹಲಿ ದುರಂತಕ್ಕೆ ಕಾರಣಗಳನ್ನು ಹೊರಗೆ ಹುಡುಕದೆ, ಒಳಗಿನ ಹುಳುಕುಗಳನ್ನು ರೈಲ್ವೆ ಇಲಾಖೆ ಸರಿಪಡಿಸಿಕೊಳ್ಳಲಿ.
