ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯ್ದೆ -1991ರ ವಿವಿಧ ಸೆಕ್ಷನ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಪ್ರಶ್ನಿಸಿ ಹಲವು ಮಧ್ಯಂತರ ದಾವೆ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ, ಅಂತಹ ಮಧ್ಯಂತರ ದಾವೆ ಅರ್ಜಿಗಳಿಗೆ ಮಿತಿ ಇರಬೇಕು ಎಂದು ಹೇಳಿದೆ.
“ನಾವು ಇಂದು ಪೂಜಾ ಸ್ಥಳಗಳ ಕಾಯ್ದೆಯ ಪ್ರಕರಣ ಕೈಗೆತ್ತಿಕೊಳ್ಳುವುದಿಲ್ಲ. ಇದು ತ್ರಿಸದಸ್ಯ ಪೀಠ ವಿಚಾರಣೆ ನಡೆಸಬೇಕಾದ ಪ್ರಕರಣ. ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಮಾರ್ಚ್‌ನಲ್ಲಿ ಪ್ರಕರಣ ಪಟ್ಟಿ ಮಾಡಿ. ಮಧ್ಯಂತರ ಅರ್ಜಿ ಸಲ್ಲಿಸುವುದಕ್ಕೂ ಮಿತಿ ಇರಬೇಕು” ಎಂದು ಸಂಜೀವ್ ಖನ್ನಾ ಎಚ್ಚರಿಕೆ ನೀಡಿದರು.
ಕಾಂಗ್ರೆಸ್, ಸಿಪಿಐ(ಎಂಎಲ್), ಜಾಮಿಯತ್ ಉಲೇಮಾ-ಇ-ಹಿಂದ್, ಹಾಗೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಮತ್ತು ನಾಯಕರು ಪ್ರಕರಣದಲ್ಲಿ ಮಧ್ಯಂತರ ದಾವೆ ಕೋರಿ ಅರ್ಜಿ ಸಲ್ಲಿಸಿದ್ದರು.
ಹಿರಿಯ ವಕೀಲ ದುಷ್ಯಂತ್ ದವೆ ಅವರು ಇನ್ನು ಮುಂದೆ ಮಧ್ಯಂತರ ಅರ್ಜಿಗಳಿಗೆ ಅವಕಾಶ ನೀಡಬಾರದು ಎಂದರು. ಹೊಸ ಆಧಾರಗಳು ಹುಟ್ಟಿಕೊಂಡರೆ ಮಾತ್ರ ಹೊಸ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ನಿರ್ದೇಶಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
“ಹೊಸದಾಗಿ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು, ಏಕೆಂದರೆ ಇನ್ನೂ ಕೆಲವು ಅಂಶಗಳನ್ನು ಪ್ರಸ್ತಾಪಿಸಿಲ್ಲ” ಎಂದ ನ್ಯಾಯಪೀಠ ಕಾಯ್ದೆಯನ್ನು ಪ್ರಶ್ನಿಸಿ ಮತ್ತು ನ್ಯಾಯಾಲಯದಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲದ ಅರ್ಜಿಗಳನ್ನು ವಜಾಗೊಳಿಸಲಾಗುವುದು. ಹೊಸ ಆಧಾರಗಳನ್ನು ಹೊಂದಿರುವ ಅರ್ಜಿದಾರರು ಅಸ್ತಿತ್ವದಲ್ಲಿರುವ ಅರ್ಜಿಗಳಲ್ಲೇ ತಮ್ಮ ಮನವಿ ಸಲ್ಲಿಸಬಹುದು ಎಂಬುದಾಗಿ ಹೇಳಿತು.
ವಕೀಲರಾದ ವಿಕಾಸ್ ಸಿಂಗ್ ಮತ್ತು ನಿಜಾಮ್ ಪಾಷಾ ಅವರು 8 ದಿನ ಕಳೆದರೂ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಗಮನಸೆಳೆದರು.
ಅದನ್ನು ಗಮನಿಸಿದ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್‌ನಲ್ಲಿ ತ್ರಿಸದಸ್ಯ ಪೀಠದೆದುರು ವಿಚಾರಣೆಗೆ ಬರುವಂತೆ ಪಟ್ಟಿ ಮಾಡಲು ನಿರ್ದೇಶಿಸಿತು.
ನಾಲ್ಕು ಧಾರ್ಮಿಕ ನಿಯಮಗಳ ಮೇಲೆ ಸಲ್ಲಿಸಲಾದ ಕನಿಷ್ಠ 18 ಪ್ರಕರಣಗಳು ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯುಳಿದಿವೆ. ಇವುಗಳಲ್ಲಿ ಸಂಭಾಲ್‌ನ ಶಾಹಿ ಜಮಾ ಮಸೀದಿ, ವಾರಣಾಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿ ಹಾಗೂ ರಾಜಸ್ಥಾನದ ಅಜ್ಮೀರ್ ದರ್ಗಾದ ಪ್ರಕರಣಗಳು ಸೇರಿಕೊಂಡಿವೆ.